ಪ್ರತಿಭಟನೆಗಳ ನಡುವೆಯೇ ದಿಲ್ಲಿಯ ಮದನಪುರ ಖಾದರ್‌ ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ‌

Update: 2022-05-12 16:06 GMT

ಹೊಸದಿಲ್ಲಿ,ಮೇ 12: ದಿಲ್ಲಿಯ ಮದನಪುರ ಖಾದರ್ ಪ್ರದೇಶದಲ್ಲಿ ಗುರುವಾರ ಬಿಜೆಪಿ ಆಡಳಿತದ ದಕ್ಷಿಣ ದಿಲ್ಲಿ ಮಹಾನಗರ ಪಾಲಿಕೆಯು ಸ್ಥಳೀಯರ ಭಾರೀ ಪ್ರತಿಭಟನೆಗಳ ನಡುವೆಯೇ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಿದೆ. ತೆರವು ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಮಹಾನಗರ ಪಾಲಿಕೆ ಮತ್ತು ಕೇಂದ್ರದ ವಿರುದ್ಧ ಘೋಷಣೆಗಳನ್ನೂ ಕೂಗಿದರು.

ಪ್ರತಿಭಟನೆಗಳನ್ನು ನಿಲ್ಲಿಸಲು ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದ್ದ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರವನ್ನು ನಡೆಸಿದ್ದೂ ಕಂಡು ಬಂದಿದೆ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಆಡಳಿತ ಮೇ 18ರಂದು ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ತೆರವು ಕಾರ್ಯಾಚರಣೆ ರಾಜಕೀಯ ಪ್ರೇರಿತವಾಗಿದೆ ಎಂದು ಪ್ರತಿಪಕ್ಷಗಳು ಹೇಳಿವೆ.

ಮದನಪುರ ಖಾದರ್ ಪ್ರದೇಶಕ್ಕೆ ಭೇಟಿ ನೀಡಿದ್ದ ಆಪ್ ಶಾಸಕ ಅಮಾನತುಲ್ಲಾ ಖಾನ್ ಅವರು,ಅಲ್ಲಿ ಧ್ವಂಸಗೊಳಿಸಲಾಗುತ್ತಿರುವ ಕಟ್ಟಡಗಳು ಅಕ್ರಮವಲ್ಲ ಎಂದು ಹೇಳಿದರು. ಖಾನ್ರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಬಡಜನರ ಮನೆಗಳನ್ನು ಉಳಿಸಲು ನೆರವಾಗುವುದಾದರೆ ತಾನು ಜೈಲಿಗೆ ಹೋಗಲು ಸಿದ್ಧ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಖಾನ್,ಈ ಪ್ರದೇಶದಲ್ಲಿ ಯಾವುದೇ ಅತಿಕ್ರಮಣ ನಡೆದಿಲ್ಲ. ಅತಿಕ್ರಮಣವಾಗಿದ್ದರೆ ತಾನು ತೆರವು ಕಾರ್ಯಾಚರಣೆಯಲ್ಲಿ ಮಹಾನಗರ ಪಾಲಿಕೆಯನ್ನು ಬೆಂಬಲಿಸುತ್ತೇನೆ ಎಂದು ಹೇಳಿದರು.

ಮೇ 9ರಂದು ಶಾಹೀನ್‌ಬಾಗ್‌ನಲ್ಲಿ ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದ್ದಕ್ಕಾಗಿ ದಾಖಲಾಗಿರುವ ಎಫ್‌ಐಆರ್‌ನಲ್ಲಿಯೂ ಖಾನ್‌ರನ್ನು ಹೆಸರಿಸಲಾಗಿತ್ತು.

 ಪಟೇಲ್ ನಗರದ ಪ್ರೇಮನಗರದಲ್ಲಿಯೂ ಗುರುವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News