ಆರೆಸ್ಸೆಸ್‍ಗೆ ವಕ್ಫ್ ಮಾಹಿತಿ ಸೋರಿಕೆ: ಮುಜಾಹಿದ್ ಅಲಿ ಬಾಬಾ
ಬೆಂಗಳೂರು, ಮೇ 12: ವಕ್ಫ್ ಆಸ್ತಿ ಸೇರಿದಂತೆ ಇನ್ನಿತರೆ ಚಟುವಟಿಕೆಗಳ ಮಾಹಿತಿ ಆರೆಸ್ಸೆಸ್‍ಗೆ ಸೋರಿಕೆ ಮಾಡಲಾಗುತ್ತಿದೆ ಎಂದು ಸದಾ-ಇ-ಇತ್ತೇಹದ್ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುಜಾಹಿದ್ ಅಲಿ ಬಾಬಾ ಆರೋಪಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಅವರಿಂದಲೇ ವಕ್ಫ್ ಆಸ್ತಿ, ಯೋಜನೆಗಳು, ಸಮುದಾಯದ ಚಟುವಟಿಕೆಗಳ ಮಾಹಿತಿ ಸಂಘ ಪರಿವಾರಕ್ಕೆ ಸೋರಿಕೆ ಆಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಶಾಫಿ ಸಅದಿ ಅವರು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿಲ್ಲ. ಅವರಿಗೆ ಓರ್ವ ಮುತವಲ್ಲಿಯೂ ಮತ ನೀಡಿಲ್ಲ. ಕೇವಲ ಬಿಜೆಪಿ ಬೆಂಬಲದಿಂದ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿದ್ದು, ಅವರು ಸಂಘಪರಿವಾರದ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ದೂರಿದರು.
ವಕ್ಫ್ ಮಂಡಳಿಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಪ್ರಮುಖವಾಗಿ ಕಳಂಕಿತರನ್ನೆ ಹೆಚ್ಚಾಗಿ ಅಧಿಕಾರದಲ್ಲಿ ಇರಿಸಲಾಗಿದೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಅಧಿಕಾರಿಗಳಿಗೂ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ, ಈ ಕೂಡಲೇ ತಮ್ಮ ಸ್ಥಾನಕ್ಕೆ ಶಾಫಿ ಸಅದಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸದಾ-ಇ-ಇತ್ತೇಹದ್ ಕರ್ನಾಟಕ ಸಂಘಟನೆಯ ಕಾರ್ಯದರ್ಶಿ ಸೆಯ್ಯದ್ ಸರ್ದಾರ್, ಉಪಾಧ್ಯಕ್ಷ ಅಬ್ದುಲ್ ರೆಹ್ಮಾನ್ ಖಾಸ್ಮಿ ಸೇರಿದಂತೆ ಪ್ರಮುಖರಿದ್ದರು.