×
Ad

ಬೆಂಗಳೂರು | ಸಚಿವ ಡಾ.ಅಶ್ವತ್ಥನಾರಾಯಣ ರಾಜೀನಾಮೆಗೆ ಆಗ್ರಹಿಸಿ ಧರಣಿ

Update: 2022-05-13 12:18 IST
ಸಚಿವ ಡಾ.ಅಶ್ವತ್ಥನಾರಾಯಣ

ಬೆಂಗಳೂರು, ಮೇ 13: ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಬಡವರಿಗೆ ವಿತರಿಸುವ ಲ್ಯಾಪ್ ಟಾಪ್ ನಲ್ಲೂ ಅಕ್ರಮ ಎಸಗಿರುವ ಹಿನ್ನೆಲೆಯಲ್ಲಿ ಕೂಡಲೇ ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಹಾಗೂ ಗೃಹ ಸಚಿವರ ಸ್ವ ಗ್ರಾಮದಲ್ಲಿ ದಲಿತ ಮಹಿಳೆ ಮೇಲೆ ನಡೆದಿರುವ ಅತ್ಯಾಚಾರವನ್ನು ಖಂಡಿಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರಸ್ ಪಕ್ಷವು ಇಂದು ನಗರದಲ್ಲಿ ಧರಣಿ ನಡೆಸಿತು.

ಬೆಂಗಳೂರು  ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ವತಿಯಿಂದ ನಡೆದ ಧರಣಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸುವ ಯೋಜನೆಯಲ್ಲಿಯೂ ಹಗಲು ಲೂಟಿ ಮಾಡಿರುವ ಸಚಿವ ಅಶ್ವತ್ಥ ನಾರಾಯಣ ಅವರು  ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂ ಅಕ್ರಮ ಎಸಗಿ ಈ ಭ್ರಷ್ಟಾಚಾರದಲ್ಲೂ ಸಹ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಈ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.

 ಗೃಹಸಚಿವ ಆರಗ ಜ್ಞಾನೇಂದ್ರರವರು ಗ್ರಾಮದಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರ ನಡೆದು ಅವಮಾನಗೊಳಿಸಿರುವ ಪ್ರಕರಣ ನಡೆದರೂ ಗೃಹ ಸಚಿವರಿಗೆ ಈ ವಿಷಯ ತಿಳಿಯದೇ ಇರುವುದು ಅತ್ಯಂತ ದುರದೃಷ್ಟಕರ. ದಲಿತರಿಗೆ ಬಿಜೆಪಿ ಸರಕಾರದಿಂದ ರಕ್ಷಣೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಅತ್ಯಾಚಾರದಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಂಡು ಶಿಕ್ಷಿಸಬೇಕೆಂದು ಆಗ್ರಹಿಸಿ ಉನ್ನತ ಶಿಕ್ಷಣ ಇಲಾಖೆಯನ್ನು ಶುದ್ಧಿಗೊಳಿಸಲು ಸಚಿವ ಅಶ್ವತ್ಥ ನಾರಾಯಣ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಧರಣಿನಿರತರು ಒತ್ತಾಯಿಸಿದರು.

ಧರಣಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಪ್ರಚಾರ ಸಮಿತಿಯ ಅಧ್ಯಕ್ಷ ಜಿ.ಜನಾರ್ದನ್, ಎ.ಆನಂದ್, ಪಕ್ಷದ ಮುಖಂಡರುಗಳಾದ ಪ್ರಕಾಶ್, ವೆಂಕಟೇಶ್, ಚಂದ್ರಶೇಖರ, ಹೇಮರಾಜ್, ಉಮೇಶ್, ಪುಟ್ಟರಾಜು, ಸುಪ್ರಜ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News