ಬೆಂಗಳೂರು | ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿ ನಾಗೇಶ್ ಬಂಧನ

Update: 2022-05-14 06:07 GMT
ಆರೋಪಿ ನಾಗೇಶ್ ಬಾಬು

ಬೆಂಗಳೂರು, ಮೇ 13: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್ ಬಾಬುನನ್ನು 16 ದಿನಗಳ ಬಳಿಕ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಪ್ರಿಲ್ 28 ರಂದು ದಾಳಿ ನಡೆಸಿ ಪರಾರಿಯಾಗಿದ್ದ. ಆ್ಯಸಿಡ್ ದಾಳಿ ನಡೆದು 16 ದಿನ ಕಳೆದರೂ ಆರೋಪಿ ನಾಗೇಶ್ ಸುಳಿವು ಸಿಗದೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಕಾಮಾಕ್ಷಿಪಾಳ್ಯ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ನಾಗೇಶನನ್ನು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಬಂಧಿಸಿದ್ದಾರೆ. ನಾಗೇಶ್ ಓಡಾಡಿದ ಜಾಗದಲ್ಲಿ ವಾಂಟೆಡ್ ಲಿಸ್ಟ್ ಫೊಟೋ ಹಾಕಲಾಗಿತ್ತು. ಜತೆಗೆ ಎಲ್ಲೆಡೆ ಕರಪತ್ರಗಳನ್ನು ಹಚ್ಚಲಾಗಿತ್ತು.

ಪ್ರೀತಿ ನಿರಾಕರಿಸಿದ ಹೆಗ್ಗನಹಳ್ಳಿ ಕ್ರಾಸ್ ನಿವಾಸಿ 25 ವರ್ಷದ ಯುವತಿ ಮೇಲೆ ಹಾಡಹಗಲೇ ಆ್ಯಸಿಡ್ ದಾಳಿ ನಡೆಸಲಾಗಿತ್ತು. ಯುವತಿ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಜಾಪುರ ಮೂಲದ ನಾಗೇಶ್, ಪ್ರೀತಿಸುವಂತೆ ಸುಮಾರು 7 ವರ್ಷಗಳಿಂದ ದುಂಬಾಲು ಬಿದ್ದಿದ್ದ. ಆಕೆ ನಿರಾಕರಿಸಿದ್ದರಿಂದ ಕುಪಿತನಾಗಿ ದಾಳಿ ನಡೆಸಿದ್ದ.

ಸ್ವಾಮೀಜಿ ವೇಷದಲ್ಲಿದ್ದ ನಾಗೇಶ್: ಬಂಧನದ ವೇಳೆ ಆರೋಪಿ ನಾಗೇಶ್ ಸ್ವಾಮೀಜಿ ವೇಷದಲ್ಲಿದ್ದ ಎನ್ನಲಾಗಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಖಾವಿ ಪಂಚೆ ಧರಿಸಿದ್ದ ಆರೋಪಿ ನಾಗೇಶ್ ಕೈಗೆ ಪೊಲೀಸರು ಬೇಡಿ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ.

ಧಾರ್ಮಿಕ ಸ್ಥಳಗಳಲ್ಲಿಶೋಧ: ಇನ್ನು ಆರೋಪಿ ನಾಗೇಶ್ ಅತೀವ ದೈವ ಭಕ್ತನಾಗಿದ್ದ ಎಂದು ಹೇಳಲಾಗಿದ್ದು, ಆಗಾಗ ಧರ್ಮಸ್ಥಳ ಮತ್ತು ತಿರುಪತಿಗೆ ನಿರಂತರವಾಗಿ ಹೋಗಿ ಬರುತ್ತಿದ್ದ. ಹೀಗಾಗಿ ಆರೋಪಿ ನಾಗೇಶ್ ಅಲ್ಲೇ ಅಡಗಿ ಕುಳಿತಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ತಿರುಪತಿ ಸುತ್ತಮುತ್ತಲಿದ್ದ ಹಲವು ಲಾಡ್ಜ್‍ಗಳ ಶೋಧ ನಡೆಸಿದ್ದಾರೆ. ಧರ್ಮಸ್ಥಳದಲ್ಲಿ ಒಂದೇ ಒಂದು ಲಾಡ್ಜ್ ಕೂಡ ಬಿಡದೆ ಹುಡುಕಾಟ ನಡೆಸಿದ್ದರು. ಕೊಯಮುತ್ತೂರಿನ ಈಶಾ ಫೌಂಡೇಶನ್‍ನಲ್ಲಿಯೂ ತಡಕಾಡಿದ್ದರು. ಕೊನೆಗೆ ತಿರುವಣ್ಣಾಮಲೈನಲ್ಲಿ ಸ್ವಾಮೀಜಿಯಾಗಿ ವೇಷ ಮರೆಸಿಕೊಂಡು ಓಡಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News