×
Ad

ಡೆಂಗ್ ನಿಯಂತ್ರಣ;‌ ಮೇ 16ರಂದು ಸೊಳ್ಳೆ ಉತ್ಪತ್ತಿ ತಾಣ ನಾಶಕ್ಕೆ ದ.ಕ. ಡಿಸಿ ಸೂಚನೆ

Update: 2022-05-13 21:35 IST

ಮಂಗಳೂರು : ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಡೆಂಗಿ ಪ್ರಸರಣ ತೀವ್ರಗತಿಯಲ್ಲಿ ಹರಡುತ್ತಿದೆ. ದ.ಕ.ಜಿಲ್ಲೆಯ ಅಲ್ಲಲ್ಲೂ ಡೆಂಗ್ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಡೆಂಗಿ ನಿಯಂತ್ರಣಕ್ಕೆ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದಾರೆ.

ಡೆಂಗ್ ನಿಯಂತ್ರಿಸಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ. ಈಗಾಗಲೇ ಜಿಲ್ಲೆಯ ಕೆಲವೆಡೆ ಮಳೆಯಾ ಗುತ್ತಿದ್ದು, ಡೆಂಗಿ ರೋಗವಾಹಕ ಉತ್ಪತ್ತಿಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತಿದೆ. ಹಾಗಾಗಿ ಈಡಿಸ್ ಸೊಳ್ಳೆಗಳ ನಾಶಕ್ಕಾಗಿ ಮೇ.೧೬ ಬೆಳಗ್ಗೆ ೧೦ರಿಂದ ೧೧ರವರೆಗೆ (ಒಂದು ಗಂಟೆ) ಎಲ್ಲಾ ಸಾರ್ವಜನಿಕರು  ಮನೆಗಳು ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ, ಜಿಲ್ಲೆಯ ಎಲ್ಲಾ ಸರಕಾರಿ, ಖಾಸಗಿ ಸಂಸ್ಥೆಗಳ ಕಚೇರಿಗಳು, ಉದ್ಯಮಗಳು, ಬ್ಯಾಂಕ್‌ಗಳು, ಎಲ್ಲಾ ಶಿಕ್ಷಣ ಸಂಸ್ಥೆಗಳು, ಅಂಗನವಾಡಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ವರ್ಗವು ಕಚೇರಿಯ ಸುತ್ತ-ಮುತ್ತಲ ಪ್ರದೇಶಗಳ ಒಳಾಂಗಣಗಳಾದ ಹೂವಿನ ಕುಂಡ, ಅದರಡಿಯಲ್ಲಿರುವ ಪ್ಲೇಟ್, ಏರ್ ಕೂಲರ್ ಹಾಗೂ ಹೊರಾಂಗಣಗಳಾದ ಖಾಲಿ ಬಾಟಲಿಗಳು, ಸೀಯಾಳದ ಚಿಪ್ಪು, ಟಯರ್‌ಗಳು, ಅನುಪಯುಕ್ತ ಬಕೆಟ್, ಪಾತ್ರೆಗಳು, ಪ್ಲಾಸ್ಟಿಕ್ ಕಪ್‌ಗಳು, ತಾರಸಿ ಅಥವಾ ಕಿಟಕಿಯ ಸಜ್ಜಾಗಳಲ್ಲಿ, ನೀರಿನ ಸಂಗ್ರಹದ ಟ್ಯಾಂಕ್‌ ಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ ನಾಶಪಡಿಸಬೇಕು, ಈ ಮೂಲಕ ಜಿಲ್ಲೆಯಲ್ಲಿ ಡೆಂಗಿ, ಮಲೇರಿಯಾ ಮತ್ತು ಚಿಕನ್‌ಗೂನ್ಯಾ ಇತ್ಯಾದಿ ರೋಗವು ಸೊಳ್ಳೆಯ ಮೂಲಕ ಹರಡುದಂತೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಸಾರ್ವಜನಿಕರು ಕನಿಷ್ಠ ವಾರಕ್ಕೊಮ್ಮೆಯಾದರೂ ತಮ್ಮ ಮನೆ/ಕಟ್ಟಡಗಳ ಸುತ್ತ-ಮುತ್ತ ಪರಿಶೀಲಿಸಿ ವಿವಿಧ ಪರಿಕರಗಳಲ್ಲಿ ನೀರು ನಿಂತಿದ್ದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಜಾಗೃತಿ ವಹಿಸಬೇಕು. ಜ್ವರ ಪ್ರಕರಣಗಳು ಕಂಡು ಬಂದ ತಕ್ಷಣವೇ ಸ್ಥಳೀಯ ಆಸ್ಪತ್ರೆ ಅಥವಾ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿಕೊಳುವಂತೆ ಡಿಸಿ ಡಾ. ರಾಜೇಂದ್ರ ಕೆ.ವಿ. ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News