ಮೇ 14ರಿಂದ ಮಿತ್ತಬೈಲ್ ಉರೂಸ್ ಕಾರ್ಯಕ್ರಮ

Update: 2022-05-13 16:28 GMT

ಬಂಟ್ವಾಳ : ಇತಿಹಾಸ ಪ್ರಸಿದ್ಧ ಬಿ.ಸಿ.ರೋಡ್ ಸಮೀಪದ ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿರುವ ಹಝ್ರತ್ ಶೈಖ್ ವಲಿಯುಲ್ಲಾಹಿ (ಖ.ಸಿ.) ಅವರ ಹೆಸರಿನಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಮುಖಾಂ ಉರೂಸ್ ಮೇ 21ರಂದು ನಡೆಯಲಿದೆ ಎಂದು ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಬಿ.ಎಚ್. ತಿಳಿಸಿದರು.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉರೂಸ್ ಪ್ರಯುಕ್ತ ಮೇ 14ರಿಂದ 21ರ ವರೆಗೆ ಪ್ರತಿದಿನ ಪ್ರಸಿದ್ಧ ವಿದ್ವಾಂಸರಿಂದ ಧಾರ್ಮಿಕ ಮತಪ್ರಭಾಷಣ ನಡೆಯಲಿದೆ. ಮೇ 14ರಂದು ರಾತ್ರಿ 8:30ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಸಮಸ್ತ ಕೇರಳ ಜಂಇಯತ್ತುಲ್ ಉಲಮ ಪ್ರಧಾನ ಕಾರ್ಯದರ್ಶಿ ಆಲಿಕುಟ್ಟಿ ಉಸ್ತಾದ್ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.

ಎಂಟು ದಿನಗಳ ಧಾರ್ಮಿಕ ಪ್ರಭಾಷಣಗಳಲ್ಲಿ ಪ್ರಮುಖ ವಿದ್ವಾಂಸರಾದ ರಹ್ಮತುಲ್ಲಾ ಖಾಸಿಮಿ ಮುತ್ತೇಡಂ, ಇಲ್ಯಾಸ್ ಅರ್ಶದಿ, ಅನ್ವರ್ ಮುಹಿಯುದ್ದೀನ್ ಹುದವಿ, ಖಲೀಲ್ ಹುದವಿ, ಅಬ್ದುಲ್ ಸಮದ್ ಪುಕೋಟುರು ಪ್ರಭಾಷಣ ಗೈಯ್ಯಲಿದ್ದಾರೆ.  ಪ್ರತಿದಿನ ಕಾರ್ಯಕ್ರಮಗಳಲ್ಲಿ ಸಾದಾತುಗಳಾದ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಸೈಯದ್ ಅಲಿ ತಂಙಳ್ ಕುಂಬೋಲ್, ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ದುಅ ನೆರವೇರಿಸಲಿದ್ದಾರೆ ಎಂದರು.  

ಮೇ 21ರಂದು ಸಂಜೆ 4:30ಕ್ಕೆ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಾದ ಯು.ಟಿ.ಖಾದರ್, ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಹರೀಶ್ ಕುಮಾರ್, ಮಂಜುನಾಥ ಭಂಡಾರಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.  

ಮೇ 21ರಂದು ರಾತ್ರಿ 8:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಕಾರ್ಯಕ್ರಮದಲ್ಲಿ ಸಮಸ್ತ ಅಧ್ಯಕ್ಷ, ಮಿತ್ತಬೈಲ್ ಖಾಝಿ ಅಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದು, ಅಬ್ದುಲ್ ಅಝೀಝ್ ಅಶ್ರಫ್ ಪಾಣತ್ತೂರು ಮುಖ್ಯ ಪ್ರಭಾಷಣ ಗೈಯಲಿದ್ದಾರೆ. ಉರೂಸ್ ಕಾರ್ಯಕ್ರಮದ ರಾತ್ರಿ ಸಾರ್ವಜನಿಕ ಅನ್ನದಾನ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಸೀದಿ ಅಧ್ಯಕ್ಷ ಮುಹಮ್ಮದ್ ಸಾಗರ್, ಉರೂಸ್ ಕಮಿಟಿ ಅಧ್ಯಕ್ಷ ಅಹ್ಮದ್ ಬಾವ, ಉಪಾಧ್ಯಕ್ಷ ಮುಹಮ್ಮದ್ ಮಜಲ್, ಮಸೀದಿಯ ಕಾರ್ಯದರ್ಶಿ ಅಕ್ಬರ್ ಅಲಿ, ಕೋಶಾಧಿಕಾರಿ ಎಸ್.ಎಂ. ಮುಹಮ್ಮದ್ ಆಲಿ, ಉಪಾಧ್ಯಕ್ಷ ಅಬ್ದುಲ್ ರಹ್ಮಾನ್, ಜಮಾಲುದ್ದೀನ್ ಶಾಂತಿಅಂಗಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News