ದೇಶದ್ರೋಹ ಕಾನೂನು ಕುರಿತ ಸರ್ವೋಚ್ಚ ನ್ಯಾಯಾಲಯದ ಸಮಯೋಚಿತ ತೀರ್ಪು

Update: 2022-05-13 19:30 GMT
Photo credit: PTI

ಹಿಂದುತ್ವವಾದಿಗಳು ಮತ್ತು ಯಥಾಸ್ಥಿತಿವಾದಿಗಳ ಕಪಿಮುಷ್ಟಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಳಪಟ್ಟಿರುವ ಹಿನ್ನೆಲೆಯಲ್ಲಿ ದೇಶದ್ರೋಹದ ಕಾನೂನು ಪ್ರಸ್ತುತ ಸಂದರ್ಭಕ್ಕೆ ಹೊಂದಿಕೆಯಾಗುವುದಿಲ್ಲ. ಅಸಂಖ್ಯಾತ ಸಂವಿಧಾನ ನಿಷ್ಠ ಮಾನವ ಹಕ್ಕುಗಳ ಹೋರಾಟಗಾರರ ಅಮೂಲ್ಯ ಜೀವಗಳನ್ನು ಉಳಿಸುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸಮಯೋಚಿತವಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗಗಳು ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳಿಗೆ ವಿರುದ್ಧವಾಗಿ ನಡೆದುಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಪ್ರಜೆಗಳನ್ನು ಉಳಿಸಬಲ್ಲ ಮಹಾಶಕ್ತಿ ನ್ಯಾಯಾಂಗವೆಂಬುದನ್ನು ಸರ್ವೋಚ್ಚ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿದೆ.


ಬ್ರಿಟಿಷರು ಅಂದು ಕಾಂಗ್ರೆಸ್ ನೇತೃತ್ವದ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವ ಸಲುವಾಗಿ ದೇಶದ್ರೋಹ ಕಾಯ್ದೆ 124-ಎ ಅನ್ನು ಜಾರಿಗೆ ತಂದಿದ್ದರು. ಸ್ವಾತಂತ್ರ್ಯಾನಂತರದಲ್ಲಿ ಭಾರತೀಯರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪರಿಚ್ಛೇದ 19-1ಎ ಅನ್ವಯ ಸಂವಿಧಾನ ಪ್ರಜೆಗಳಿಗೆ ನೀಡಿತು. ಸಾಂವಿಧಾನಿಕ ಮತದಾನದ ಮೂಲಕ ದೇಶದ ಶಾಸಕಾಂಗವನ್ನು ರೂಪಿಸುವ ಪ್ರಜೆಗಳು ಸಾರ್ವಭೌಮರಾಗಿದ್ದು ಸರಕಾರ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಸಂದರ್ಭದಲ್ಲಿ ಕಾನೂನುಬದ್ಧವಾಗಿ ರಚನಾತ್ಮಕವಾಗಿ ಟೀಕಿಸುವ ಸ್ವಾತಂತ್ರ್ಯವನ್ನು ಪಡೆದರು. ಹಲವಾರು ಅರ್ಥಪೂರ್ಣ ಷರತ್ತುಗಳನ್ನು ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಪರಿಚ್ಛೇದ 19ಬಿ ಅಡಿಯಲ್ಲಿ ಸಂವಿಧಾನ ಪ್ರಜೆಗಳಿಗೆ ವಿಧಿಸಿದೆ. ಸ್ವಾತಂತ್ರ್ಯಾನಂತರದಲ್ಲಿ ಅಂದು ಬ್ರಿಟಿಷರು ಜಾರಿಗೊಳಿಸಿದ್ದ ದೇಶದ್ರೋಹ ಕಾಯ್ದೆ ಭಾರತೀಯ ದಂಡ ಸಂಹಿತೆ 124-ಎ ಸಹಜವಾಗಿ ರದ್ದಾಗಬೇಕಿತ್ತು. ಹಲವಾರು ಸಂದರ್ಭಗಳಲ್ಲಿ ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರು ಸರಕಾರದ ಮೇಲೆ ಒತ್ತಡ ಹೇರಿ ದೇಶದ್ರೋಹ ಕಾಯ್ದೆಯನ್ನು ಪ್ರಜ್ಞಾಪೂರ್ವಕವಾಗಿ ಸಂವಿಧಾನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಆಶಯಗಳ ರಕ್ಷಣೆಗಾಗಿ ರದ್ದುಗೊಳಿಸಬೇಕೆಂಬ ಬೇಡಿಕೆಯನ್ನು ಮಂಡಿಸಿದ್ದರು. ನಮ್ಮನ್ನು ಆಳುವವರು ಪ್ರಜೆಗಳ ಬಂಡಾಯ ಮನೋಧರ್ಮವನ್ನು ದಮನಗೊಳಿಸುವ ಸಲುವಾಗಿ ದೇಶದ್ರೋಹ ಕಾಯ್ದೆಯನ್ನು ರದ್ದುಗೊಳಿಸಲಿಲ್ಲ. ಹಿಂದಿನ ಕೇಂದ್ರ ಸರಕಾರಗಳು ಈ ಕಾಯ್ದೆಯನ್ನು ಮನಸೋ ಇಚ್ಛೆ ಬಳಸಿಕೊಂಡು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳಲಿಲ್ಲವೆಂಬುದಕ್ಕೆ ಇತಿಹಾಸದಲ್ಲಿ ಪುರಾವೆಗಳಿವೆ. 2014ರಲ್ಲಿ ಭಾರತವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಸರ್ವಧರ್ಮಗಳು ಮತ್ತು ಜನಾಂಗಗಳ ಶಾಂತಿಯ ತೋಟವನ್ನಾಗಿ ಉಳಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಸಾಂವಿಧಾನಿಕ ಮೌಲ್ಯಗಳು, ಪ್ರಜಾಪ್ರಭುತ್ವ ಸಂಸ್ಕೃತಿ, ಬಹುತ್ವ ಭಾರತೀಯ ಪರಂಪರೆ, ಧರ್ಮನಿರಪೇಕ್ಷತೆ, ಸರ್ವೋದಯ ಮತ್ತು ಅಂತ್ಯೋದಯ ಆಶಯಗಳಿಗೆ ವಿರುದ್ಧವಾಗಿ ಆಳ್ವಿಕೆ ನಡೆಸಿ ಜಾಗತಿಕ ಮಟ್ಟದಲ್ಲಿ ಸಾಮಾಜಿಕ ನ್ಯಾಯ ವಿರೋಧಿ ನಿಲುವು ಮತ್ತು ಮಾನವ ಹಕ್ಕುಗಳ ತೀವ್ರ ಉಲ್ಲಂಘನೆಗಾಗಿ ಗಂಭೀರ ಟೀಕೆ ಟಿಪ್ಪಣಿಗಳಿಗೆ ಗುರಿಯಾಗಿದೆ.

ಭಾರತದ ಆರ್ಥಿಕತೆ ತೀವ್ರ ಕುಸಿತಗೊಂಡಿದ್ದು ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಿರುವುದಾಗಿ ಬಿಜೆಪಿ ನಾಯಕರಾದ ಯಶವಂತ್ ಸಿನ್ಹಾ, ಸುಬ್ರಮಣಿಯನ್ ಸ್ವಾಮಿ, ಸೀತಾರಾಮನ್ ಮೊದಲಾದವರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರು ಭಾರತೀಯರ ಸಾರ್ವಭೌಮತ್ವ ಮತ್ತು ಪ್ರಗತಿಗಳನ್ನು ಕಡೆಗಣಿಸಿ ವಿಶ್ವಗುರುವಾಗಲು ಹೊರಟಿರುವುದು ತರವಲ್ಲ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಂಡಿಸಿರುವ ಅಧಿಕೃತ ವರದಿ ಪ್ರಕಾರ ದೇಶದ್ರೋಹ ಕಾಯ್ದೆ ಭಾರತೀಯ ದಂಡ ಸಂಹಿತೆ 124-ಎ ಅಡಿಯಲ್ಲಿ 2015ರಲ್ಲಿ ಸುಮಾರು 356 ಮೊಕದ್ದಮೆಗಳು ದಾಖಲಾಗಿದ್ದು 2020ರಲ್ಲಿ ಸುಮಾರು 548 ಆರೋಪಿಗಳನ್ನು ಬಂಧಿಸಲಾಗಿದೆ. ಇವರೆಲ್ಲರೂ ಭಾರತದ ಪ್ರಜೆಗಳ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ವಿವಿಧ ಸಂದರ್ಭಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಮಾಧ್ಯಮಗಳು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಮುಕ್ತ ಅಭಿಪ್ರಾಯವನ್ನು ಮಂಡಿಸಿದ ಅಮಾಯಕರು ಎಂಬುದನ್ನು ಪ್ರಜ್ಞಾವಂತರು ಗಮನಿಸಬೇಕು. 2016ರಲ್ಲಿ ಕನ್ಹಯ್ಯ ಕುಮಾರ್ ಮತ್ತು ಸಹಪಾಠಿಗಳು ಜೆಎನ್‌ಯು ವಿಶ್ವವಿದ್ಯಾನಿಲಯದಲ್ಲಿ ಅಫ್ಝಲ್ ಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಕ್ತ ಅಭಿಪ್ರಾಯವನ್ನು ಮಂಡಿಸಿದ ಕಾರಣಕ್ಕಾಗಿ ದೇಶದ್ರೋಹ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದರು.

2019ರಲ್ಲಿ ಜೆಎನ್‌ಯು ವಿಶ್ವವಿದ್ಯಾನಿಲಯ ಮತ್ತು ಅಲಿಘಡ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ನಾಗರಿಕ ಹಕ್ಕು ಕಾಯ್ದೆಯ ಔಚಿತ್ಯತೆಯನ್ನು ಪ್ರಶ್ನಿಸಿದ ಶಾರ್ಜಿಲ್ ಇಮಾಮ್ ವಿರುದ್ಧ ಮೊಕದ್ದಮೆ ದಾಖಲಿಸಿ ಇಂದಿಗೂ ಕೂಡ ನ್ಯಾಯಾಂಗ ಬಂಧನಕ್ಕೆ ಗುರಿಪಡಿಸಲಾಗಿದೆ. 2021ರಲ್ಲಿ ಬೆಂಗಳೂರು ಮೂಲದ ದಿಶಾ ರವಿ ಎಂಬ ಪರಿಸರ ಕಾರ್ಯಕರ್ತೆಯನ್ನು ದಿಲ್ಲಿ ಪೊಲೀಸರು ರೈತ ಚಳವಳಿಗೆ ಸಂಬಂಧಿಸಿದ ಟೂಲ್‌ಕಿಟ್ ಪ್ರಕರಣದಲ್ಲಿ ಬಂಧಿಸಿದ್ದರು. ಮೂವರು ಕಾಶ್ಮೀರದ ವಿದ್ಯಾರ್ಥಿಗಳು ಪಾಕಿಸ್ತಾನದ ಕ್ರಿಕೆಟ್ ಆಟಗಾರರನ್ನು ಅಭಿನಂದಿಸಿದರೆಂಬ ಕಾರಣಕ್ಕೆ ಇದೇ ಕಾಯ್ದೆಯಡಿಯಲ್ಲಿ ಆಗ್ರಾದಲ್ಲಿ ಅವರನ್ನು ಬಂಧಿಸಲಾಗಿತ್ತು. ಇತ್ತೀಚಿನವರೆಗೂ ಅವರಿಗೆ ಪ್ರಕರಣದಲ್ಲಿ ವಿವಿಧ ಕಾರಣಗಳಿಗಾಗಿ ಜಾಮೀನು ಸಿಗಲಿಲ್ಲ. ಇವು ನಮ್ಮ ಕಣ್ಣಮುಂದೆ ಗೋಚರಿಸಿರುವ ಪ್ರಕರಣಗಳು. ಮಾಧ್ಯಮ ಮತ್ತು ಸಮಾಜದ ಗಮನಕ್ಕೆ ಬರದಂತೆ ಸಹಸ್ರಾರು ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರನ್ನು ಹಿಂದುತ್ವವಾದಿಗಳ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ದೇಶದ್ರೋಹ ಕಾಯ್ದೆಯಡಿ ಬಂಧಿಸಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿವೆ. ಮೇ 11, 2022 ಪ್ರಜಾಪ್ರಭುತ್ವವಾದಿಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರರ ಪಾಲಿಗೆ ಒಂದು ಸುದಿನವೆಂದೇ ಹೇಳಬಹುದು. ಭಾರತದ ಸರ್ವೋಚ್ಚ ನ್ಯಾಯಾಲಯ ಭಾರತೀಯ ದಂಡಸಂಹಿತೆ 124-ಎ ಅಡಿಯಲ್ಲಿ ಬಾಕಿ ಉಳಿದಿರುವ ಕ್ರಿಮಿನಲ್ ವಿಚಾರಣೆಗಳು ಮತ್ತು ನ್ಯಾಯಾಲಯದ ವಿಚಾರಣೆಗಳನ್ನು ಅಮಾನತುಗೊಳಿಸಿತು. ಬ್ರಿಟಿಷರ ಕಾಲದ ಸದರಿ ಕಾನೂನನ್ನು ಮರುಪರಿಶೀಲಿಸಲು ಭಾರತ ಸರಕಾರಕ್ಕೆ ಅವಕಾಶ ನೀಡಿತು. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿಯವರನ್ನು ಒಳಗೊಂಡ ಪೀಠವು ಭಾರತೀಯ ದಂಡಸಂಹಿತೆ 124-ಎ ಅಡಿಯಲ್ಲಿ ರೂಪಿಸಲಾದ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲ ಬಾಕಿ ಉಳಿದಿರುವ ವಿಚಾರಣೆಗಳು, ಮೇಲ್ಮನವಿಗಳು ಮತ್ತು ವಿಚಾರಣೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಮುಂದಿನ ಆದೇಶದವರೆಗೆ ಉಳಿದ ನ್ಯಾಯಾಲಯಗಳ ನಿರ್ದೇಶನಗಳು ಊರ್ಜಿತವಾಗುವುದಿಲ್ಲವೆಂದು ನೀಡಿದ ತೀರ್ಮಾನ ದೇಶಾದ್ಯಂತ ದೇಶದ್ರೋಹ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಸುಮಾರು 13 ಸಾವಿರ ಪ್ರಜ್ಞಾವಂತ ದೇಶಬಾಂಧವರ ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಅತ್ಯಂತ ಪ್ರಸ್ತುತವಾದ ತೀರ್ಮಾನವಾಗಿದೆ.

ಇವರಲ್ಲಿ ಬಹುಸಂಖ್ಯಾತರು ದೇಶನಿಷ್ಠ ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದವರೆಂಬುದು ಗಮನಿಸಬೇಕಾದ ಅಂಶವಾಗಿದೆ. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಫ್‌ಐಆರ್ ದಾಖಲಿಸುವುದು, ತನಿಖೆಯನ್ನು ಮುಂದುವರಿಸುವುದು ಅಥವಾ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಸರ್ವೋಚ್ಚ ನ್ಯಾಯಾಲಯದ ತೀರ್ಪು ತಡೆಹಿಡಿದಿರುವುದು ಭಾರತೀಯ ಸಂವಿಧಾನಕ್ಕೆ ಲಭಿಸಿದ ಬಹುದೊಡ್ಡ ಗೌರವವಾಗಿದೆ. ಆದಾಗ್ಯೂ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಶಾಸಕಾಂಗ ಮತ್ತು ಕಾರ್ಯಾಂಗವನ್ನು ಗೌರವಿಸುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯ ಇಂತಹ ತೀರ್ಪು ನೀಡಿರುವುದು ಲಕ್ಷ್ಮಣ ರೇಖೆಯನ್ನು ದಾಟಿದಂತಾಗಿದೆ ಎಂದು ಪ್ರತಿಕ್ರಿಯಿಸಿರುವುದು ಅವಿವೇಕದ ಪರಮಾವಧಿಯಾಗಿದೆ. ಪ್ರಗತಿಶೀಲ ಚಿಂತಕರು ಮತ್ತು ವಿವಿಧ ರಾಜಕೀಯ ಸಂಘಟನೆಗಳು ಭಾರತ ಸರಕಾರವು ಭಾರತೀಯ ದಂಡಸಂಹಿತೆ 124-ಎ ಅನ್ವಯ ರೂಪುಗೊಂಡಿರುವ ದೇಶದ್ರೋಹ ಕಾಯ್ದೆ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸುವವರೆಗೆ ಕಾಯದೆ ಸರ್ವೋಚ್ಚ ನ್ಯಾಯಾಲಯ ಸದರಿ ಕಾಯ್ದೆಯನ್ನು ರದ್ದುಗೊಳಿಸಿ ಸಾರ್ವಜನಿಕ ಹಿತವನ್ನು ಕಾಯಬೇಕೆಂದು ಒತ್ತಾಯಿಸಿರುವುದು ಔಚಿತ್ಯಪೂರ್ಣವಾಗಿದೆ.

ಹಿಂದುತ್ವವಾದಿಗಳು ಮತ್ತು ಯಥಾಸ್ಥಿತಿವಾದಿಗಳ ಕಪಿಮುಷ್ಟಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಳಪಟ್ಟಿರುವ ಹಿನ್ನೆಲೆಯಲ್ಲಿ ದೇಶದ್ರೋಹದ ಕಾನೂನು ಪ್ರಸ್ತುತ ಸಂದರ್ಭಕ್ಕೆ ಹೊಂದಿಕೆಯಾಗುವುದಿಲ್ಲ. ಅಸಂಖ್ಯಾತ ಸಂವಿಧಾನ ನಿಷ್ಠ ಮಾನವ ಹಕ್ಕುಗಳ ಹೋರಾಟಗಾರರ ಅಮೂಲ್ಯ ಜೀವಗಳನ್ನು ಉಳಿಸುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸಮಯೋಚಿತವಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗಗಳು ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳಿಗೆ ವಿರುದ್ಧವಾಗಿ ನಡೆದುಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಪ್ರಜೆಗಳನ್ನು ಉಳಿಸಬಲ್ಲ ಮಹಾಶಕ್ತಿ ನ್ಯಾಯಾಂಗವೆಂಬುದನ್ನು ಸರ್ವೋಚ್ಚ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿದೆ.

Writer - ಡಾ. ಬಿ.ಪಿ. ಮಹೇಶ ಚಂದ್ರ ಗುರು

contributor

Editor - ಡಾ. ಬಿ.ಪಿ. ಮಹೇಶ ಚಂದ್ರ ಗುರು

contributor

Similar News