ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಪರಾರಿಯಾಗಲೆತ್ನಿಸಿದ ಆರೋಪಿ ನಾಗೇಶ್ ಗೆ ಗುಂಡೇಟು

Update: 2022-05-14 04:25 GMT

ಬೆಂಗಳೂರು, ಮೇ 14: ಪೊಲೀಸರು ಬಂಧಿಸಿ ಕರೆ ತರುತ್ತಿದ್ದ ವೇಳೆ ಪರಾರಿಯಾಗಲು ಯತ್ನಿಸಿದ ಯುವತಿಯ ಮೇಲೆ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ ಬಾಬು ನಾಗೇಶ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಪೊಲೀಸರ‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ನಾಗೇಶ್ ಕಾಲಿಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಎ.28ರಂದು ಆ್ಯಸಿಡ್ ಎರಚಿ ಪರಾರಿಯಾಗಿದ್ದ ಆರೋಪಿ ನಾಗೇಶ್ ಬಾಬು ಸ್ವಾಮೀಜಿ ವೇಷಧಾರಿಯಾಗಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ. ಆತನನ್ನು ಪತ್ತೆಹಚ್ಚಿದ ಪೊಲೀಸರು ನಿನ್ನೆ ಬಂಧಿಸಿದ್ದರು‌. ಅಲ್ಲಿಂದ ಆರೋಪಿಯನ್ನು ವಾಹನದಲ್ಲಿ ಕರೆ ತರುತ್ತಿದ್ದ ವೇಳೆ ಬೆಂಗಳೂರಿನ ಹೊರವಲಯದ ನೈಸ್ ರಸ್ತೆ ತಲುಪಿದಾಗ ಮೂತ್ರ ಶಂಕೆ ಮಾಡಲು ಅವಕಾಶ ನೀಡುವಂತೆ ಕೋರಿದ್ದಾನೆ. ಅದರಂತೆ ಪೊಲೀಸರು ಕೆಂಗೇರಿ ಮೇಲ್ಸೇತುವೆ ಬಳಿ ವಾಹನ ನಿಲ್ಲಿಸಿದ್ದರು. ಈ ವೇಳೆ ನಾಗೇಶ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಹಿಡಿಯಲು ಯತ್ನಿಸಿದ ಕಾನ್ಸ್‌ಟೇಬಲ್ ಮಹಾದೇವಯ್ಯರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಳಿಕ ಕಾಮಾಕ್ಷಿಪಾಳ್ಯ ಠಾಣೆಯ ಇನ್ ಸ್ಪೆಕ್ಟರ್​ ಪ್ರಶಾಂತ್ ಶರಣಾಗುವಂತೆ ಆರೋಪಿಗೆ ಸೂಚಿಸಿ ಒಮ್ಮೆ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೆ ಆರೋಪಿ ನಾಗೇಶ್​ ಅದಕ್ಕೆ ಬಗ್ಗದೆ ಪರಾರಿ ಆಗಲು ಮುಂದಾಗಿದ್ದಾನೆ. ನಂತರ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ‌ ನಾಗೇಶ್ ಹಾಗೂ ಗಾಯಗೊಂಡಿರುವ ಕಾನ್ಸ್​ಟೇಬಲ್​ ಮಹದೇವಯ್ಯಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News