ಶಿಕ್ಷಣದ ಶಿಖರ ಎಲ್ಫಿನ್‌ಸ್ಟನ್ ಕಾಲೇಜು

Update: 2022-05-14 05:48 GMT

2019ರಿಂದ ಎಲ್ಫಿನ್‌ಸ್ಟೋನ್ ಕಾಲೇಜು ಹೊಸದಾಗಿ ರಚಿಸಲಾದ ಮುಂಬೈಯ ಡಾ. ಹೋಮಿ ಬಾಬಾ ಸ್ಟೇಟ್ ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಒಳಪಟ್ಟಿದೆ. ಹಲವು ಮೇಧಾವಿಗಳನ್ನು ಸೃಷ್ಟಿಸಿದ ಎಲ್ಫಿನ್‌ಸ್ಟನ್ ಕಾಲೇಜು ಮಹಾರಾಷ್ಟ್ರದ ಹೆಮ್ಮೆಯಷ್ಟೇ ಅಲ್ಲ, ಭಾರತದ ಹೆಮ್ಮೆ.

‘‘ನೀವೊಬ್ಬ ಎಲ್ಫಿನ್‌ಸ್ಟೋನಿಯನ್ ಆಗದಿದ್ದರೆ ನೀವು ಭಾರತದಲ್ಲಿ ಮೇಧಾವಿಯಾಗಲು ಸಾಧ್ಯವಿಲ್ಲ.’’ ಈ ಮಾತನ್ನಾಡಿದವರು 1910ರ ಸುಮಾರಿಗೆ ಎಲ್ಫಿನ್‌ಸ್ಟನ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಪ್ರೊ. ಮುಲ್ಲರ್. ಅವರ ಮಾತು ಸಾರ್ವಕಾಲಿಕ ಸತ್ಯವೆಂಬಂತಾಗಿದೆ. ಗುಣಮಟ್ಟದ ಶಿಕ್ಷಣದ ಶಿಖರ ಎಲ್ಫಿನ್‌ಸ್ಟನ್ ಕಾಲೇಜು. ಅಂಬೇಡ್ಕರರ ಪದವಿ ಶಿಕ್ಷಣಕ್ಕೆ ವೈಯಕ್ತಿಕವಾಗಿ ಸಹಾಯ ಮಾಡಿ, ಪುಸ್ತಕ ಮತ್ತು ಬಟ್ಟೆಗಳನ್ನು ಕೊಡಿಸಿದವರೇ ಪ್ರೊ. ಮುಲ್ಲರ್. ಡಾ. ಅಂಬೇಡ್ಕರ್ ಬರೋಡಾದ ಮಹಾರಾಜರಾದ ಸಯ್ಯೊಜಿರಾವ್ ಗಾಯಕವಾಡ್‌ರಿಂದ ಮಾಸಿಕ 25 ರೂಪಾಯಿ ಶಿಷ್ಯವೇತನ ಪಡೆದರು. ಮುಂಬೈ ನಗರದ ಕೋಟೆ ಪ್ರದೇಶದಲ್ಲಿ ಎಲ್ಫಿನ್‌ಸ್ಟನ್ ಕಾಲೇಜಿದೆ. ಆ ಕಾಲೇಜಿನಲ್ಲಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು 1910 ರಿಂದ 1912ರವರೆಗೆ ಇಂಗ್ಲಿಷ್, ಪರ್ಶಿಯನ್, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಷಯಗಳೊಂದಿಗೆ ಬಿ.ಎ. ಪದವಿಯಲ್ಲಿ 1000 ಅಂಕಗಳಲ್ಲಿ 449 ಅಂಕ ಪಡೆದು ಉತ್ತೀರ್ಣರಾದರು. ಎಲ್ಫಿನ್‌ಸ್ಟನ್ ಕಾಲೇಜಿನ ಪ್ರಾರಂಭಕ್ಕೆ ಒಂದು ಕಾರಣವಿದೆ.

ಮೌಂಟ್‌ಸ್ಟುವರ್ಟ್ ಎಲ್ಫಿನ್‌ಸ್ಟನ್ ಅವರು 1819ರಿಂದ 1827ರವರೆಗೆ ಬಾಂಬೆಯ ಗವರ್ನರ್ ಆಗಿದ್ದರು. ಜನಪರ ಆಡಳಿತದ ಎಲ್ಫಿನ್‌ಸ್ಟನ್‌ರವರ ನಿವೃತ್ತಿಯ ನಂತರ ಅವರ ಗೌರವಾರ್ಥ ಒಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಆಲೋಚನೆಯು ಸಾರ್ವಜನಿಕರಲ್ಲಿ ಮೂಡಿತು. ಆಗ ರಚನೆಯಾಗಿದ್ದು ‘ಬಾಂಬೆ ನೇಟಿವ್ ಎಜುಕೇಷನ್ ಸೊಸೈಟಿ’ ಎಂಬ ಟ್ರಸ್ಟ್. ಶಿಕ್ಷಣ ಸಂಸ್ಥೆಯ ಸ್ಥಾಪನೆಗೆ ಸಾರ್ವಜನಿಕರಿಂದ ರೂ. 2,29,636ನ್ನು ಸಂಗ್ರಹಿಸಲಾಯಿತು. ಮೊದಲಿಗೆ ಎಲ್ಫಿನ್‌ಸ್ಟನ್ ಹೈಸ್ಕೂಲು ಮತ್ತು ಎಲ್ಫಿನ್‌ಸ್ಟನ್ ಕಾಲೇಜುಗಳು 1836ರಲ್ಲಿ ಆರಂಭವಾದವು. ಕಾಲೇಜಿನಲ್ಲಿ ಇಂಗ್ಲಿಷ್, ಕಲಾ ವಿಷಯಗಳು ಹಾಗೂ ಯೂರೋಪಿನ ಸಾಹಿತ್ಯದ ಅಧ್ಯಯನಕ್ಕೆ ಒತ್ತುಕೊಡಲಾಯಿತು. ಲಾರ್ಡ್ ಮೆಕಾಲೆ ಸೂಚಿಸಿದ ಇಂಗ್ಲಿಷ್ ಮಾಧ್ಯಮದ ಆಧುನಿಕ ಶಿಕ್ಷಣ ಪದ್ಧ್ದತಿಯೂ ಜಾರಿಗೆ ಬಂದಿತು. 1856ರಲ್ಲಿ ಕಾಲೇಜು ಹಾಗೂ ಹೈಸ್ಕೂಲು ಪ್ರತ್ಯೇಕವಾದವು.

1860ರಲ್ಲಿ ಎಲ್ಫಿನ್‌ಸ್ಟನ್ ಕಾಲೇಜು ಬಾಂಬೆ ವಿಶ್ವವಿದ್ಯಾನಿಲಯದ ಭಾಗವಾಯಿತು. ಬಾಂಬೆ ವಿಶ್ವವಿದ್ಯಾನಿಲಯವು 1857ರಲ್ಲಿ ಆರಂಭವಾದರೆ, ಎಲ್ಫಿನ್‌ಸ್ಟನ್ ಕಾಲೇಜು ಅದಕ್ಕೂ ಮೊದಲೇ 1856ರಲ್ಲಿ ಎಲ್ಫಿನ್‌ಸ್ಟನ್ ಹೈಸ್ಕೂಲ್‌ನಿಂದ ಪ್ರತ್ಯೇಕವಾಗಿತ್ತು. ಕಾಲೇಜಿನ ಕಟ್ಟಡವು ಪ್ರಾಚೀನ ವಾಸ್ತುಶಿಲ್ಪಿಯ ಸೌಂದರ್ಯವನ್ನು ಹೊಂದಿದೆ. ಆ ಕಾರಣಕ್ಕಾಗಿ, 2004ರಲ್ಲಿ ಯುನೆಸ್ಕೋ ಸಂಸ್ಥೆಯು ಎಲ್ಫಿನ್‌ಸ್ಟನ್ ಕಾಲೇಜನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿದೆ. ಯುನೆಸ್ಕೋದಿಂದ ಏಶ್ಯ-ಪೆಸಿಫಿಕ್ ಪಾರಂಪರಿಕ ಪ್ರಶಸ್ತಿಯನ್ನೂ ಪಡೆದಿದೆ. ಈಗ ಎಲ್ಫಿನ್‌ಸ್ಟನ್ ಕಾಲೇಜಿನ ವಯಸ್ಸು ಏನಿಲ್ಲವೆಂದರೂ 184 ವರ್ಷಗಳು. ಎಲ್ಫಿನ್‌ಸ್ಟನ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ಮೇಧಾವಿಗಳಾದವರ ಸಂಖ್ಯೆ ಅಪಾರ.

ಅವರಲ್ಲಿ ಚಿರಪರಿಚಿತರೆಂದರೆ: ಸ್ವಾತಂತ್ರ್ಯ ಹೋರಾಟಗಾರರಾದ ದಾದಾಬಾಯಿ ನವರೋಜಿ ಮತ್ತು ಬಾಲಗಂಗಾಧರ ತಿಲಕ್, ಸಮಾಜ ಸುಧಾರಕ ಹಾಗೂ ನ್ಯಾಯಾಧೀಶ ಮಹದೇವ ಗೋವಿಂದ ರಾನಡೆ, ಕೈಗಾರಿಕೋದ್ಯಮಿ ಜೆಮ್‌ಶೆಡ್‌ಜಿ ಟಾಟಾ, ವಕೀಲರು ಹಾಗೂ ಕಾಂಗ್ರೆಸ್ ಪಕ್ಷದ ಮೂರನೇ ಅಧ್ಯಕ್ಷರಾಗಿದ್ದ ಬದ್ರುದ್ದೀನ್ ತ್ಯಾಬ್ಜಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟ ಗೋಪಾಲಕೃಷ್ಣ ಗೋಖಲೆ, ಬ್ಯಾರಿಸ್ಟರ್ ಮತ್ತು ನ್ಯಾಯಾಧೀಶ ಚಿಮನಲಾಲ್ ಹರಿಲಾಲ್ ಸೆಟಲ್ವಾಡ್, ಸಂವಿಧಾನ ಶಿಲ್ಪಿಭೀಮರಾವ್ ರಾಮ್‌ಜಿ ಅಂಬೇಡ್ಕರ್, ವಕೀಲರು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮುಕುಂದ ರಾಮರಾವ್ ಜಯಕರ್, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ವೈ.ವಿ. ಚಂದ್ರಚೂಡ್, ಪಿ.ಎನ್. ಭಗವತಿ ಮತ್ತು ಜೆ.ಸಿ. ಶಾ, ಭಾರತೀಯ ಸೇನಾ ಮುಖ್ಯಸ್ಥರಾಗಿದ್ದ ಎ.ಎಸ್. ವೈದ್ಯ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಮತ್ತು ತೆಲಂಗಾಣ ರಾಜ್ಯ ರಚನಾ ಆಯೋಗದ ಅಧ್ಯಕ್ಷರಾಗಿದ್ದ ಕರ್ನಾಟಕದವರಾದ ಬೆಳ್ಳೂರು ನಾರಾಯಣಸ್ವಾಮಿ ಶ್ರೀಕೃಷ್ಣ, ಅಣುವಿಜ್ಞಾನಿ ಡಾ. ಹೋಮಿ ಬಾಬಾ, ಸಾಮಾಜಿಕ ಮಾನವಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ್ ಮುಂತಾದವರು.

ಸರ್ವೋಚ್ಚ ನ್ಯಾಯಾಲಯಕ್ಕೆ ಮೂವರು ಮುಖ್ಯ ನ್ಯಾಯಾಧೀಶರನ್ನು ಒದಗಿಸಿದ ಹೆಗ್ಗಳಿಕೆ ಎಲ್ಫಿನ್‌ಸ್ಟನ್ ಕಾಲೇಜಿನದ್ದು. ಅತಿ ಮುಖ್ಯವಾಗಿ ಭಾರತಕ್ಕೆ ಸಂವಿಧಾನ ಶಿಲ್ಪಿಯನ್ನು ರೂಪಿಸಿದ ಕಾಲೇಜು. ಖ್ಯಾತ ಕ್ರಿಕೆಟರ್‌ಗಳಾದ ವಿಜಯ್ ಮರ್ಚಂಟ್ ಮತ್ತು ಅಜಿತ್ ವಾಡೇಕರ್ ಅವರು ಪಳಗಿದ್ದು ಇಲ್ಲಿಯೇ. ಚಲನಚಿತ್ರ, ಸಾಹಿತ್ಯ, ಸಂಗೀತ ಕ್ಷೇತ್ರಗಳಿಗೂ ಹಲವಾರು ಪ್ರತಿಭಾವಂತರನ್ನು ನೀಡಿದೆ. ಅಂಬೇಡ್ಕರ್‌ರ ಪಾದಸ್ಪರ್ಶದಿಂದ ಕೊಲಂಬಿಯಾ ವಿಶ್ವವಿದ್ಯಾನಿಲಯ, ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಮತ್ತು ಗ್ರೇಸ್ ಇನ್ ಸಂಸ್ಥೆಗಳು ಪವಿತ್ರವಾದವು. ಹಾಗೆಯೇ, ಎಲ್ಫಿನ್‌ಸ್ಟನ್ ಕಾಲೇಜು ಕೂಡ ಅಂಬೇಡ್ಕರ್‌ರಿಂದಾಗಿಯೇ ಹೆಗ್ಗಳಿಕೆಗೆ ಹೆಸರಾಗಿದೆ. ಡಾ. ಅಂಬೇಡ್ಕರ್ ಮುಂಬೈ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರೂ ಆಗಿದ್ದರು. ಆಗ ಎಲ್ಫಿನ್‌ಸ್ಟನ್ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೊಂದು ವೇಗ ಮತ್ತು ಗುಣಮಟ್ಟ ಸಿಕ್ಕಿರಲೂ ಸಾಕು. ಎಲ್ಫಿನ್‌ಸ್ಟನ್ ಕಾಲೇಜಿನ ಗ್ರಂಥಾಲಯದಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರ ಪುಸ್ತಕಗಳು ಹಾಗೂ ನಿಯತಕಾಲಿಕಗಳಿವೆ.

ಗ್ರಂಥಾಲಯದ ವಿಶೇಷ ವಿಭಾಗದಲ್ಲಿ ಡಾ. ಅಂಬೇಡ್ಕರ್ ಬರೆದ ಕೃತಿಗಳಿವೆ. ಕ್ರಿಕೆಟ್ ಪಿಚ್, ಜಿಮ್ಖಾನ, ದೈಹಿಕ ಕೇಂದ್ರ, ಕಂಪ್ಯೂಟರ್ ಕೇಂದ್ರ, ವಿಜ್ಞಾನದ ಆಧುನಿಕ ಪ್ರಯೋಗಾಲಯಗಳು, ಸ್ಮಾರ್ಟ್ ಬೋಧನಾ ಕೊಠಡಿಗಳಿವೆ. ನುರಿತ ಬೋಧಕರಿದ್ದಾರೆ. ಬಿಎ, ಬಿಕಾಂ, ಬಿಎಸ್ಸಿ ಡಿಗ್ರಿಗಳ ಜೊತೆಗೆ ಆಧುನಿಕ ಅಗತ್ಯತೆಗಳಿಗನುಗುಣವಾಗಿ ಬಿಎಸ್ಸಿ ಇನ್ಫರ್ಮೇಷನ್ ಟೆಕ್ನಾಲಜಿ ಮತ್ತು ಬಿಎಸ್ಸಿ ಬಯೋಟೆಕ್ನಾಲಜಿಯನ್ನು ಪ್ರಾರಂಭಿಸಲಾಗಿದೆ. 2019ರಿಂದ ಎಲ್ಫಿನ್‌ಸ್ಟನ್ ಕಾಲೇಜು ಹೊಸದಾಗಿ ರಚಿಸಲಾದ ಮುಂಬೈಯ ಡಾ. ಹೋಮಿ ಬಾಬಾ ಸ್ಟೇಟ್ ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಒಳಪಟ್ಟಿದೆ. ಹಲವು ಮೇಧಾವಿಗಳನ್ನು ಸೃಷ್ಟಿಸಿದ ಎಲ್ಫಿನ್‌ಸ್ಟನ್ ಕಾಲೇಜು ಮಹಾರಾಷ್ಟ್ರದ ಹೆಮ್ಮೆಯಷ್ಟೇ ಅಲ್ಲ, ಭಾರತದ ಹೆಮ್ಮೆ.

Writer - ಪ್ರೊ. ಎಂ. ನಾರಾಯಣ ಸ್ವಾಮಿ

contributor

Editor - ಪ್ರೊ. ಎಂ. ನಾರಾಯಣ ಸ್ವಾಮಿ

contributor

Similar News