ಮಂಗಳೂರು ವಿವಿಯಲ್ಲಿ ಉದ್ಯೋಗ ಮೇಳ ಉದ್ಘಾಟನೆ

Update: 2022-05-14 12:35 GMT

ಕೊಣಾಜೆ: ಜಾಗತಿಕ ಮಾರುಕಟ್ಟೆಯಲ್ಲಿ ಉದ್ಯಮದ ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿ ಗಳನ್ನು ರೂಪಿಸುವುದು ತುಂಬಾ ಮುಖ್ಯ. ಉದ್ಯೋಗ ಮೇಳಗಳು ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳನ್ನು ಒದಗಿಸಿಕೊಡುತ್ತದೆ. ಉತ್ತಮ ಅವಕಾಶಗಳನ್ನು ಬಳಸಿಕೊಳ್ಳುವ ಚಾಕಚಕ್ಯತೆಯೂ ನಮ್ಮಲ್ಲಿರಬೇಕು ಎಂದು ʼಮ್ಯಾಜಿಕ್ ಬಸ್ʼನ ಪ್ರಾದೇಶಿಕ ಕಾರ್ಯಕ್ರಮ ನಿರ್ವಾಹಕ (ದಕ್ಷಿಣ) ಪ್ರತಾಪ್ ಶ್ರೀನಿವಾಸನ್ ಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಹಾಗೂ ತರಬೇತಿ ಮತ್ತು ನಿಯೋಜನಾ ಘಟಕಗಳು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಮಂಗಳಗಂಗೋತ್ರಿಯ ವಿಶ್ವ ವಿದ್ಯಾನಿಲಯದ ಕ್ಯಾಂಪಸ್ನಲ್ಲಿ ಎರಡು ದಿನಗಳ ಕಾಲ ನಡೆಯುವ  ಉದ್ಯೋಗ ಮೇಳವನ್ನು ಶನಿವಾರ ಉದ್ಘಾಟಿಸಿ  ಮಾತನಾಡಿದರು.

ಮಂಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ದಿನೇಶ್ ಕುಮಾರ್ ಆಳ್ವ  ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಉತ್ತಮ ಉದ್ಯೋಗವನ್ನೂ ಕಲ್ಪಸಬೇಕೆಂಬ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿರುವ ಶ್ಲಾಘನೀಯ ಎಂದರು.

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಹಲವಾರು ಸಂದರ್ಭದಲ್ಲಿ ನಮಗೆ  ಅದೃಷ್ಟ ಇಲ್ಲ ಅಂತ ಭ್ರಮ ನಿರಸನಗೊಳ್ಳದೆ ಸರಿಯಾದ ಸಮಯಕ್ಕೆ ಸರಿಯಾದ ಅವಕಾಶಗಳನ್ನು ಬಳಸಿಕೊಳ್ಳುವ ಚಾಕಚಕ್ಯತೆ ನಮ್ಮಲ್ಲಿರಬೇಕು. ಮಂಗಳೂರು ವಿವಿಯು ಮೌಲ್ಯಾಧಾರಿತ ಶಿಕ್ಷಣ ನೀಡುವುದು ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಉದ್ಯೋಗಾಧಾರಿತ ಶಿಕ್ಷಣಕ್ಕೆ ಹೆಚ್ಷು ಒತ್ತು ನೀಡಿದೆ ಎಂದು  ಅವರು ಹೇಳಿದರು.

ಹಣಕಾಸು ಅಧಿಕಾರಿ, ಯುಇಐಜಿಬಿ ಮತ್ತು ಯುಟಿಪಿಸಿ ಮುಖ್ಯಸ್ಥ ಪ್ರೊ. ಕೆ ಎಸ್ ಜಯಪ್ಪ ಅವರು ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ ಅವರು ಸ್ವಾಗತಿಸಿದರು.ಯುಟಿಪಿಸಿ ಯೋಜನೆ ಆಧರಿತ ಸಲಹೆಗಾರ್ತಿ ಶಾರದಾ ಹೆಚ್ ಎಸ್ ವಂದಿಸಿದರು. ಡಾ.ಧನಂಜಯ ಕುಂಬ್ಳೆ ಹಾಗೂ ಪ್ರೀತಿ ಕೀರ್ತಿ ಡಿಸೋಜ ಅವರು ಕಾರ್ಯಕ್ರಮ ನಿರೂಪಿಸಿದರು.

"ಎಂಬಿಎ ಮುಗಿಸಿದ್ದೇನೆ. ಮಂಗಳೂರು ವಿವಿಯಲ್ಲಿ ಉದ್ಯೋಗ ಮೇಳ ನಡೆಯುವ ಬಗ್ಗೆ ಮಾಹಿತಿ ತಿಳಿದು ಇಲ್ಲಿಗೆ ಬಂದಿದ್ದೇನೆ. ಇದು ನನ್ನ ಮೊದಲ ಇಂಟರ್ವ್ಯೂವ್ ಆಗಿದ್ದು ಕೆಲಸ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇಂಟರ್ವ್ಯೂವ್ ಎದುರಿಸಿದ್ದು ತುಂಬಾ ಖುಷಿಯ ಜೊತೆಗೆ ಧೈರ್ಯ ತಂದಿದೆ. ಮಹೇಂದ್ರ ಟೆಕ್ ಸಂಸ್ಥೆಗೆ ಇಂಟರ್ವ್ಯೂವ್ ನೀಡಿದ್ದು ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸದ ಅವಕಾಶವಿದ್ದರೆ ತಿಳಿಸುವ ಬಗ್ಗೆ ಸಂಸ್ಥೆ ತಿಳಿಸಿದೆ".

ಅಬ್ದುಲ್ ರಹ್ಮಾನ್‌, ದೇರಳಕಟ್ಟೆ

"ನಾನು ಡಿಪ್ಲಮೋ ಕಲಿತು ಪ್ರೈವೇಟ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಮಂಗಳೂರು ವಿವಿಯಲ್ಲಿ ಉದ್ಯೋಗ ಮೇಳದಲ್ಲಿ ಅಪೋಲೋ ಕಂಪೆನಿಯೊಂದಕ್ಕೆ ಸಂದರ್ಶನದಲ್ಲಿ ಆಯ್ಕೆಯಾಗಿದ್ದೇನೆ. ಖುಷಿಯಾಗಿದೆ".

- ಅನುರಾಧ, ನಾಗುರಿ

60ಕ್ಕೂ ಹೆಚ್ಚು ಕಂಪೆನಿಗಳು ಭಾಗಿ: ಅಪೋಲೋ ಫಾರ್ಮಸಿ, ಮುತ್ತೂಟ್ ಫೈನಾನ್ಸ್, ಮೆಡಿಪ್ಲಸ್, ಜಸ್ಟ್ ಡಯಲ್, ಬೈಜೂಸ್, ಆಕ್ಸಿಸ್ ಬ್ಯಾಂಕ್, ಕಾಂಚನಾ ಗ್ರೂಪ್ ಆಫ್ ಕಂಪೆನೀಸ್, ಹೋಂಡಾ ಮ್ಯಾಟ್ರಿಕ್ಸ್, ದಿಯಾ ಸಿಸ್ಟಮ್ಸ್, ಹೆಚ್ಡಿಎಫ್ಸಿ ಬ್ಯಾಂಕ್, ಮಾಂಡೊವಿ ಮೋಟರ್ಸ್, ಮೋರ್ ಸೂಪರ್ ಮಾರ್ಕೆಟ್ ಸೇರಿದಂತೆ ಒಟ್ಟು 60  ಕ್ಕೂ ಹೆಚ್ಚು ಕಂಪೆನಿಗಳು ಎರಡು ದಿನಗಳ  ಉದ್ಯೋಗ ಮೇಳದಲ್ಲಿ ಭಾಗವಹಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News