×
Ad

ವೈದ್ಯಕೀಯ ಕ್ಷೇತ್ರದಲ್ಲಿ ಕರುಣೆ, ಸೇವಾ ಮನೋಭಾವ ಮುಖ್ಯ: ಡಾ. ಮೋಹನ್ ಆಳ್ವ

Update: 2022-05-14 18:33 IST

ಮಂಗಳೂರು : ವೈದ್ಯಕೀಯ ಕ್ಷೇತ್ರಕ್ಕೆ ಮಾನವೀಯತೆ, ಕರುಣೆ, ಪ್ರೀತಿ ಮತ್ತು ಸೇವಾ ಮನೋಭಾವ ಮುಖ್ಯ. ಹಾಗಾಗಿ ಈ ಅಂಶವನ್ನು ಇಂದು ಪ್ರತಿಜ್ಞೆ ತೆಗೆದುಕೊಂಡ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಸೇವಾವಧಿಯಲ್ಲಿ ಸದಾ ನೆನಪಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಕರೆ ನೀಡಿದರು.

ನಗರದ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ ನಡೆದ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ ೩೨ನೇ ಪದವಿ ಪ್ರದಾನ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮಾನವೀಯತೆ, ಕರುಣೆ, ದಯೆ ಇಲ್ಲದೆ ಯಾವ ಪದವಿ ಪಡೆದರೂ ಪ್ರಯೋಜನವಿಲ್ಲ. ಪದವಿ ಪಡೆದ ಬಳಿಕ ಮಾನವೀಯ ಸೇವೆ ಮತ್ತು ಕರುಣೆ ಹಾಗೂ ಸ್ಪಂದನೆಯ ಚಿಕಿತ್ಸೆಯು ವೈದ್ಯಲೋಕದ ಆಶಾವಾದವಾಗಿದೆ. ಜಗತ್ತಿನಲ್ಲಿ ಮನುಷ್ಯ, ಪ್ರಾಣಿ, ಪಕ್ಷಿ, ಜೀವ ಸಂಕುಲವಿರುವ ತನಕ ಸಾಂಕ್ರಾಮಿಕ ರೋಗಗಳು ಸಹಜವಾಗಿದೆ. ೩೭ ವರ್ಷಗಳ ಹಿಂದೆ ಎಚ್‌ಐವಿ, ಏಡ್ಸ್ ಬಂದಾಗ ಆತಂಕವಿತ್ತು. ಈಗ ಆತಂಕ ದೂರವಾಗಿದೆ. ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಡಿ ಸಾವಿರಕ್ಕಿಂತ ಹೆಚ್ಚು ವೈದ್ಯಕೀಯ ಕಾಲೇಜುಗಳು, ೧೨ ಡೀಮ್ಡ್ ವಿವಿಗಳು, ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ ಕೋವಿಡ್ -೧೯ ಸೋಂಕನ್ನು ಎದುರಿಸಲು ವೈದ್ಯಕೀಯ ಲೋಕಕ್ಕೆ ಸಾಧ್ಯವಾಗಲಿಲ್ಲ ಎಂದು ಮೋಹನ್ ಆಳ್ವ ವಿಷಾಧ ವ್ಯಕ್ತಪಡಿಸಿದರು.

ಕೋವಿಡ್ ಸಂದರ್ಭದಲ್ಲಿ ದೇಶದ ೫೨ ಲಕ್ಷ ಸೈನಿಕರು, ೨೦ ಲಕ್ಷ ಪೊಲೀಸರು, ಕೋಟ್ಯಂತರ ರೈತರು ಆಯಾಯ ಕೆಲಸ ಕಾರ್ಯಗಳಿಂದ ವಿಮುಖರಾಗದೆ ಸನ್ನದ್ಧರಾದರು. ಆದರೆ ವೈದ್ಯಕೀಯ ಸೇವೆಯು ಸಮರ್ಪಕವಾಗಿರಲಿಲ್ಲ. ಸಾಂಕ್ರಾಮಿಕ ರೋಗವನ್ನು ವೈದ್ಯಕಿಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಎದುರಿಸದೆ, ರಾಜಕಾರಣಿಗಳು, ಪೊಲೀಸರು, ಹಿರಿಯ ಶ್ರೇಣಿಯ ಅಧಿಕಾರಿಗಳು ನಿಭಾಯಿಸಬೇಕಾ ಎಂದು ಮೋಹನ್ ಆಳ್ವ ಪ್ರಶ್ನಿಸಿದರು.

ಇಂದಿಲ್ಲಿ ಪ್ರತಿಜ್ಞೆ ಮಾಡಿರುವ ಪದವೀಧರರು ಭವಿಷ್ಯದಲ್ಲಿ ಯಾವುದೇ ಜಾತಿ, ಧರ್ಮ, ದೇಶಕ್ಕೆ ಸೀಮಿತರಾಗದೆ ಮದರ್ ತೆರೆಸಾರ ಮಾನವೀಯ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ದಾನ್ಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ಹೋಮಿಯೋಪಥಿ ಆಯೋಗದ ವೈದ್ಯಕೀಯ ಮೌಲ್ಯಮಾಪನ ಮತ್ತು ಮೌಲ್ಯಾಂಕನ ಮಂಡಳಿ ಅಧ್ಯಕ್ಷ ಡಾ.ಕೆ.ಆರ್. ಜನಾರ್ದನನ್ ನಾಯರ್ ಗೌರವ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂ.ರೋಹನ್ ಡಾಯಸ್, ಕಾಲೇಜಿನ  ಉಪ ಪ್ರಾಂಶುಪಾಲ ಡಾ. ವಿಲ್ಮಾ ಮೀರಾ  ಡಿಸೋಜ,  ಹೋಮಿಯೋಪಥಿ  ಆಸ್ಪತ್ರೆಯ  ವೈದ್ಯಕೀಯ  ಅಧೀಕ್ಷಕ ಡಾ. ಗಿರೀಶ್ ನಾವಡ ಯು.ಕೆ. ಹಾಗೂ ಕಾರ್ಯಕ್ರಮದ ಸಂಯೋಜಕ ಡಾ. ರಂಜನ್ ಕ್ಲೆಮೆಂಟ್ ಬ್ರಿಟ್ಟೊ ಉಪಸ್ಥಿತರಿದ್ದರು.

ಸಂಸ್ಥೆಯ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಇ.ಎಸ್.ಜೆ. ಪ್ರಭು ಕಿರಣ್ ವಾರ್ಷಿಕ ವರದಿ ವಾಚಿಸಿದರು. ಪದವೀಧರರ ಪರವಾಗಿ  ಡಾ.ರಿಯಾ ಗ್ರೇಸ್ ದೇವಾಸಿಯ ಅನಿಸಿಕೆ ವ್ಯಕ್ತಪಡಿಸಿದರು. ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂ.ರೋಶನ್ ಕ್ರಾಸ್ತಾ ವಂದಿಸಿದರು. ಡಾ. ರೇಶಲ್ ನೊರೊನ್ಹ ಹಾಗೂ ಡಾ.ಸ್ಕಂದನ್ ಎಸ್. ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ 99 ಪದವಿ ಹಾಗೂ 26 ಸ್ನಾತಕೋತ್ತರ  ಪದವೀಧರರಿಗೆ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕಾಲೇಜಿಗೆ ರ್ಯಾಂಕ್ ತಂದ ೮ ಪದವೀಧರ ಮತ್ತು ೯ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

೨೦೧೫-೧೬ನೇ ಸಾಲಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾ ವಿವಿಯ ಚಿನ್ನದ ಪದಕವನ್ನು ಪಡೆದ ಫಾದರ್  ಮುಲ್ಲರ್  ಹೋಮಿಯೋಪಥಿ  ವೈದ್ಯಕೀಯ  ಮಹಾವಿದ್ಯಾಲಯದ  ಪದವೀಧರೆ ಡಾ. ಡಾನಿಯಾ ಹಾಗೂ ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಹೋಮಿಯೋಪಥಿ ವತಿಯಿಂದ ಸ್ನಾತಕೋತ್ತರ ಪದವುಇಯ ಅತ್ಯುತ್ತಮ ಪ್ರಬಂಧ ಮಂಡನೆಗಾಗಿ ನೀಡಿರುವ ವಿದ್ಯಾರ್ಥಿ ವೇತನವನ್ನು ಪಡೆದ ೨೦೧೮-೧೯ನೆ ಸಾಲಿನ ಹೋಮಿಯೋಪಥಿ ಫಾರ್ಮಸಿ ವಿಭಾಗದ ಡಾ. ಗಾಯತ್ರಿ ಕ್ರೋಡಿ ಅವರನ್ನು ಕೂಡ ಸನ್ಮಾನಿಸಲಾಯಿತು.

6ನೇ ಮುಲ್ಲೇರಿಯನ್ ಬ್ಯಾಚ್ ಪ್ರಾಯೋಜಿಸಿದ ‘ಡಾ. ಸುಮೊದ್ ಜಾಕೊಬ್ ಸೊಲೊಮನ್ ಪ್ರಶಸ್ತಿ’ಯನ್ನು ೨೦೧೮-೧೯ನೆ ಬ್ಯಾಚ್‌ನ ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ಡಾ. ಆನ್ಸಿ ಜಾರ್ಜ್‌ಗೆ ಪ್ರದಾನಿಸಲಾಯಿತು.

ಅತ್ಯುತ್ತಮ ಸಾಧನೆ ಮಾಡಿದ ಹೋಮಿಯೋಪಥಿ ಪದವಿ ವಿದ್ಯಾರ್ಥಿನಿ ಡಾ. ಸಿಮ್ನಾ ತಸ್ನೀಮ್ ಟಿ.ಎ. ಅವರಿಗೆ ಸಂಸ್ಥೆಯ ಅಧ್ಯಕ್ಷೀಯ ಚಿನ್ನದ ಪದಕವನ್ನು  ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News