ರಾಜ್ಯಸಭೆ ಚುನಾವಣೆ: ನಿರ್ಮಲಾ ಸೀತಾರಾಮನ್ ಸೇರಿ ಮೂವರ ಹೆಸರು ಅಂತಿಮ

Update: 2022-05-14 13:05 GMT
ನಿರ್ಮಲಾ ಸೀತಾರಾಮನ್

ಬೆಂಗಳೂರು, ಮೇ 14: ವಿಧಾನಸಭೆಯಿಂದ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಜೂನ್ 10ರಂದು ನಡೆಯಲಿರುವ ಚುನಾವಣೆಗೆ ಹಾಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೆ.ಸಿ.ರಾಮಮೂರ್ತಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಕೋರ್ ಕಮಿಟಿ ತೀರ್ಮಾನಿಸಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆಯ್ಕೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಅವರನ್ನೇ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ 2ನೆ ಅವಧಿಗೆ ಆಯ್ಕೆ ಮಾಡಲು ಕೋರ್ ಕಮಿಟಿ ಸಭೆ ಒಮ್ಮತದ ತೀರ್ಮಾನ ತೆಗೆದುಕೊಂಡಿದೆ. ವಿಧಾನಸಭೆಯಲ್ಲಿ ಬಿಜೆಪಿ ಹೊಂದಿರುವ ಬಲಾಬಲವನ್ನು ಆಧರಿಸಿ ಎರಡು ಸ್ಥಾನಗಳನ್ನು ಗೆಲ್ಲಲು ಅವಕಾಶವಿದೆ.

ಹೀಗಾಗಿ ನಿರ್ಮಲಾ ಸಿತಾರಾಮನ್ ಜೊತೆಗೆ ನಿವೃತ್ತಿಯಾಗಲಿರುವ ಕೆ.ಸಿ.ರಾಮಮೂರ್ತಿ, ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಹಾಗೂ ಪಕ್ಷದ ಮುಖಂಡ ಲೆಹರ್ ಸಿಂಗ್ ಹೆಸರುಗಳನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೋರ್ ಕಮಿಟಿ ಶಿಫಾರಸ್ಸು ಮಾಡಿರುವ ಹೆಸರುಗಳ ಪೈಕಿ ನಿರ್ಮಲಾ ಸೀತಾರಾಮನ್ ಅವರ ಹೆಸರು ಬಹುತೇಕ ಅಂತಿಮಗೊಂಡಿದ್ದು, ಉಳಿದ ಒಂದು ಸ್ಥಾನಕ್ಕೆ ಮೂವರಲ್ಲಿ ಯಾರನ್ನಾದರೂ ಅಭ್ಯರ್ಥಿ ಮಾಡುವ ಹೊಣೆಗಾರಿಕೆಯನ್ನು ಪಕ್ಷದ ವರಿಷ್ಠರಿಗೆ ನೀಡಲಾಗಿದೆ. ಹಣಕಾಸು ಖಾತೆಯನ್ನು ಹೊಂದಿರುವ ನಿರ್ಮಲಾ ಸೀತಾರಾಮನ್ ಮರು ಆಯ್ಕೆ ಮಾಡಲೇಬೇಕಾಗಿರುವುದರಿಂದ ಬಿಜೆಪಿ ಪುನಃ ಅವರಿಗೆ ಮಣೆ ಹಾಕಿದೆ. 

ಉಳಿದಂತೆ ಕೆ.ಸಿ.ರಾಮಮೂರ್ತಿ ಹಾಗೂ ನಿರ್ಮಲ ಕುಮಾರ್ ಸುರಾನ ಅವರ ಪೈಕಿ ಒಬ್ಬರ ಹೆಸರನ್ನು ಪಕ್ಷದ ವರಿಷ್ಠರು ಅಂತಿಮಗೊಳಿಸುವ ಸಾಧ್ಯತೆಗಳಿವೆ. ರಾಜ್ಯಸಭಾ ಚುನಾವಣೆಗೆ ಮೇ 24ಕ್ಕೆ ಅಧಿಸೂಚನೆ ಹೊರಡಿಸಲಿದ್ದು, ಮೇ 31ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಜೂನ್ 1ಕ್ಕೆ ನಾಮಪತ್ರ ಪರಿಶೀಲನೆ, ಜೂ.3ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ. ಜೂನ್ 10ರ ಬೆಳಗ್ಗೆ 9ರಿಂದ ಸಂಜೆ 4ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಅಂದು ಸಂಜೆ 5ಗಂಟೆಗೆ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News