ಪಿಎಸ್ಸೈ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಪ್ರಭಾವಿಗಳನ್ನು ಬಂಧಿಸುವಂತೆ ಮೇ 17ಕ್ಕೆ ಸಿಐಡಿ ಕಚೇರಿ ಮುಂದೆ ಧರಣಿ

Update: 2022-05-14 13:42 GMT

ಬೆಂಗಳೂರು, ಮೇ 14: ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಪ್ರಮುಖ ರೂವಾರಿಗಳಾಗಿರುವ ಪ್ರಭಾವಿಗಳಿಗೆ ನೋಟಿಸ್ ನೀಡಿ ಬಂಧಿಸುವಂತೆ ಮೇ 17ಕ್ಕೆ ಸಿಐಡಿ ಕಚೇರಿ ಮುಂಭಾಗ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ.

ಶನಿವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ನ್ಯಾಯವಾದಿ ಎ.ಪಿ.ರಂಗನಾಥ್, ಭ್ರಷ್ಟಾಚಾರದ ವಿರುದ್ಧ ನಾವು ಸಂಘಟನೆಯ ಸಹಯೋಗದಲ್ಲಿ ಬೆಂಗಳೂರಿನ ಸಿಐಡಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಪರೀಕ್ಷಾ ಅಕ್ರಮದಲ್ಲಿ ದೊಡ್ಡವರ ಹೆಸರುಗಳು ಕೇಳಿಬರುತ್ತಿವೆ. ನೇಮಕಾತಿ ವಿಭಾಗದ ಅಧಿಕಾರಿ ಶಾಂತಕುಮಾರ್ ವಿಚಾರಣೆ ಸಂದರ್ಭದಲ್ಲಿ ಅನೇಕ ಪ್ರಭಾವಿಗಳನ್ನು ಬಂಧಿಸದಂತೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಹೀಗಾಗಿ, ತನಿಖೆ ನ್ಯಾಯಯುತ ನಡೆಯುವಂತೆ ಆಗ್ರಹಿಸಿ ಈ ಧರಣಿ ನಡೆಸಲಾಗುತ್ತಿದೆ ಎಂದರು.

ಸಿಐಡಿ ತನಿಖೆ ಮೇಲೆ ಹೆಚ್ಚಿನ ಪ್ರಭಾವ ಮತ್ತು ಒತ್ತಡ ಇರುವುದರಿಂದ ಹಿರಿಯ ಅಧಿಕಾರಿಗಳನ್ನು ವಿಚಾರಣೆ ಮಾಡಲಾಗುತ್ತಿಲ್ಲ. ಹೀಗಾಗಿ ನಿಷ್ಪಕ್ಷಪಾತ ತನಿಖೆ ನಡೆಸುತ್ತಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News