`ಬೆಳಗಿನ ಅಝಾನ್ ಕರೆಗೆ ಮೈಕ್ ಬಳಸಬೇಡಿ’: ಧಾರ್ಮಿಕ ಗುರುಗಳು, ಜನಪ್ರತಿನಿಧಿಗಳ ಸಭೆಯಲ್ಲಿ ಸೂಚನೆ

Update: 2022-05-14 14:42 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 14: ರಾಜ್ಯ ವ್ಯಾಪ್ತಿಯಲ್ಲಿರುವ ಮಸೀದಿಗಳಲ್ಲಿ ಬೆಳಗಿನ ಅಝಾನ್ ಕರೆಗೆ ಧ್ವನಿವರ್ಧಕ ಬಳಸದಂತೆ ಧಾರ್ಮಿಕ ಗುರುಗಳು, ಜನಪ್ರತಿನಿಧಿಗಳು, ಮಸೀದಿ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ರಶಾದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಳಗಿನ ಅಝಾನ್ ಸಂದರ್ಭದಲ್ಲಿ ಮಾತ್ರ ಯಾರು ಸಹ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಮಾಡದಂತೆ ಅಝಾನ್ ನೀಡಲು ತೀರ್ಮಾನ ಪ್ರಕಟಿಸಲಾಯಿತು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ರಶಾದಿ, ಸುಪ್ರೀಂಕೋರ್ಟಿನ ಆದೇಶದ ಅನ್ವಯ ಹಾಗೂ ರಾಜ್ಯ ಸರಕಾರದ ಸುತ್ತೋಲೆಯನ್ನು ಎಲ್ಲರೂ ಗೌರವಿಸುವ ಜೊತೆಗೆ, ಯಾರು ಧ್ವನಿವರ್ಧಕಕ್ಕೆ ಪರವಾನಿಗೆ ಪಡೆದಿಲ್ಲವೋ ಅವರು ಕೂಡಲೇ ಕಾನೂನು ಕ್ರಮಗಳನ್ನು ಪಾಲಿಸಿ ಎಂದರು.

ದಿನಕ್ಕೆ ಐದು ಬಾರಿ ಅಝಾನ್ ಕರೆ ನೀಡಲಾಗುತ್ತಿದೆ. ಹಾಗಾಗಿ, ಬೆಳಗಿನ ಜಾವ ಮಾತ್ರ ಬಿಟ್ಟು, ಉಳಿದ ಸಂದರ್ಭದಲ್ಲಿ ಧ್ವನಿವರ್ಧಕ ಬಳಕೆ ಮಾಡಲು ಕಾನೂನು ಮತ್ತು ಸರಕಾರವೇ ಅವಕಾಶ ನೀಡಿದೆ. ಇದು ಬರೀ ಮುಸ್ಲಿಮ್ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ, ಎಲ್ಲ ಧರ್ಮದ ಧಾರ್ಮಿಕ ಸಂಸ್ಥೆಗಳು, ಕಟ್ಟಡಗಳಿಗೂ ಅನ್ವಯ ಆಗುತ್ತದೆ ಎಂದು ನುಡಿದರು.

ಸಭೆಯಲ್ಲಿ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಮೌಲಾನ ಶಾಫಿ ಸಅದಿ, ಸಿಟಿ ಮಾರುಕಟ್ಟೆಯ ಜಾಮೀಯಾ ಮಸೀದಿ ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ, ಮುಫ್ತಿ ಇಫ್ತೆಖಾರ್ ಅಹ್ಮದ್ ಖಾಸ್ಮಿ , ವಿಧಾನಸಭೆ ವಿಪಕ್ಷ ಉಪನಾಯಕ ನಾಯಕ ಯು.ಟಿ ಖಾದರ್,  ಶಾಸಕರಾದ ಬಿ.ಝೆಡ್.ಝಮೀರ್ ಅಹ್ಮದ್‍ಖಾನ್, ಎನ್.ಎ.ಹಾರೀಸ್, ರಿಝ್ವಾನ್ ಅರ್ಶದ್, ವಿಧಾನ ಪರಿಷತ್ತಿನ ಸದಸ್ಯ ನಸೀರ್ ಅಹ್ಮದ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News