ಇಸ್ರೇಲ್ ರಕ್ತದಾಹಕ್ಕೆ ಬಲಿಯಾದ ಧೀರ ಪತ್ರಕರ್ತೆ ಶಿರೀನ್ ಅಬು ಅಕ್ಲೇಹ್

Update: 2022-05-14 19:30 GMT

ಅರಬ್ ಜಗತ್ತಿನ ಅತ್ಯಂತ ಪ್ರಮುಖ ಪತ್ರಕರ್ತರಲ್ಲಿ ಒಬ್ಬರೆಂದು ಪರಿಗಣಿಸಲಾಗಿದ್ದ ಅವರ ಹೆಸರು ಅಲ್ಲಿ ಮನೆಮಾತಾಗಿತ್ತು. ಒಂದು ತಲೆಮಾರಿನ ಯುವಕರು, ಮಕ್ಕಳು ಟಿವಿಯಲ್ಲಿ ಅವರ ಮುಖ ನೋಡಿ, ಧ್ವನಿ ಕೇಳಿಯೇ ಬೆಳೆದವರು. ಫೆಲೆಸ್ತೀನ್ ಹೋರಾಟದ ಎರಡನೇ ಇಂತಿಫಾದದಂತಹ ಪ್ರಮುಖ ಘಟನೆಯಿಂದ ಹಿಡಿದು ಸಾಯುವ ತನಕವೂ ನೂರಾರು ಸಂಘರ್ಷಗಳನ್ನು ಜೀವದ ಭಯವನ್ನು ಪಕ್ಕಕ್ಕಿಟ್ಟು ನೇರವಾಗಿ ಜನರ ಮುಂದೆ ಇರಿಸಿದವರು. ಅವರ ನೇರ ವರದಿಗಳನ್ನು ಜಗತ್ತಿನ ಬಹುತೇಕ ಇಂಗ್ಲಿಷ್ ಮತ್ತು ಇತರ ಭಾಷಾ ಚಾನೆಲ್‌ಗಳು ಮರುಪ್ರಸಾರ ಮಾಡಿವೆ. ಅರೇಬಿಕ್ ತಿಳಿಯದವರು ಅಥವಾ ಅವರ ಹೆಸರು ಗೊತ್ತಿಲ್ಲದವರೂ ಅವರ ಚಿತ್ರವನ್ನು ನೋಡಿದಾಗ- ಇವರನ್ನು ಹಿಂದೆ ನೋಡಿದ್ದೇವಲ್ಲ ಎಂದೆನಿಸುವಷ್ಟು ಅವರು ಹಳಬರು.



''ಖಂಡಿತ ನನಗೆ ಭಯವಾಗುತ್ತದೆ. ಆದರೆ, ನಿರ್ದಿಷ್ಟ ಕ್ಷಣದಲ್ಲಿ ನೀವು ಭಯವನ್ನು ಮರೆಯುತ್ತೀರಿ. ನಾವು ಸಾವಿನ ಬಾಯಿಗೆ ನಮ್ಮನ್ನು ಎಸೆಯುವುದಿಲ್ಲ. ನಾವು ಎಲ್ಲಿ ನಿಂತಿರಬೇಕು, ನನ್ನೊಂದಿಗಿರುವ ತಂಡವನ್ನು ಹೇಗೆ ರಕ್ಷಿಸಬೇಕು ಎಂದು- ಟಿವಿ ಪರದೆಗೆ ಬರುವ ಮೊದಲೇ, ನಾವು ಅಲ್ಲಿ ಏನು ಹೇಳಬೇಕು ಎಂದು ಯೋಚಿಸುವ ಮೊದಲೇ ತಿಳಿದುಕೊಳ್ಳಲು ಯತ್ನಿಸುತ್ತೇವೆ.''

ಮೇ 11ರಂದು ಫೆಲೆಸ್ತೀನಿನ ಪಶ್ಚಿಮ ದಂಡೆಯ ಜೆನಿನ್ ನಗರದಲ್ಲಿ ಇಸ್ರೇಲಿ ಭದ್ರತಾ ಪಡೆಗಳ ದಾಳಿಯ ಕುರಿತು ವರದಿ ಮಾಡುವಾಗಲೇ ಗುಂಡಿಗೆ ಬಲಿಯಾದ ಧೀರ ಫೆಲೆಸ್ತೀನ್-ಅಮೆರಿಕನ್ ಪತ್ರಕರ್ತೆ ಶಿರೀನ್ ಅಬು ಅಕ್ಲೇಹ್ ಅವರು 2017ರಲ್ಲಿ ಎನ್‌ಬಿಸಿ ಟೆಲಿವಿಸನ್ ಸಂದರ್ಶನವೊಂದರಲ್ಲಿ ಹೇಳಿದ ಮಾತು. ''ನಿಮಗೆ ವರದಿ ಮಾಡುವಾಗ ಗುಂಡು ತಾಗಬಹುದು ಎಂದು ಭಯವಾಗುವುದಿಲ್ಲವೆ?'' ಎಂದು ಕೇಳಿದಾಗ ನೀಡಿದ ಉತ್ತರ. ಆದರೆ, ಯಾರಾದರೂ ನಿಮ್ಮನ್ನು ಕೊಲ್ಲಲೆಂದೇ ಸಂಚು ಹೂಡಿದಾಗ ಯಾವುದೇ ಮುಂಜಾಗರೂಕತೆಯೂ ಪ್ರಯೋಜನವಿಲ್ಲ ಎಂಬುದನ್ನು 'ಅಲ್ ಜಝೀರಾ' ಅರೇಬಿಕ್ ಚಾನೆಲ್‌ನ ಹಿರಿಯ ವರದಿಗಾರ್ತಿ ಶಿರೀನ್ ಅವರ ಖಂಡನೀಯ ಸಾವು ಅಥವಾ ಇದೀಗ ಬಹುತೇಕ ಸ್ಪಷ್ಟವಾಗುತ್ತಾ ಬರುತ್ತಿರುವಂತೆ ಯೋಜಿತ ಹತ್ಯೆಯೆಂದೇ ತೋರಿಸಿಕೊಡುತ್ತದೆ.

51 ವರ್ಷ ಪ್ರಾಯದ ಶಿರೀನ್, ಮಾಧ್ಯಮ ವೃತ್ತಿಗೆ, ಅದರಲ್ಲೂ ಯುದ್ಧ ಮತ್ತು ಸಂಘರ್ಷಗಳ ವರದಿಗಾರಿಕೆಗೆ ಹೊಸಬರಲ್ಲ. ಅರಬ್ ಜಗತ್ತಿನ ಅತ್ಯಂತ ಪ್ರಮುಖ ಪತ್ರಕರ್ತರಲ್ಲಿ ಒಬ್ಬರೆಂದು ಪರಿಗಣಿಸಲಾಗಿದ್ದ ಅವರ ಹೆಸರು ಅಲ್ಲಿ ಮನೆಮಾತಾಗಿತ್ತು. ಒಂದು ತಲೆಮಾರಿನ ಯುವಕರು, ಮಕ್ಕಳು ಟಿವಿಯಲ್ಲಿ ಅವರ ಮುಖ ನೋಡಿ, ಧ್ವನಿ ಕೇಳಿಯೇ ಬೆಳೆದವರು. ಫೆಲೆಸ್ತೀನ್ ಹೋರಾಟದ ಎರಡನೇ ಇಂತಿಫಾದದಂತಹ ಪ್ರಮುಖ ಘಟನೆಯಿಂದ ಹಿಡಿದು ಸಾಯುವ ತನಕವೂ ನೂರಾರು ಸಂಘರ್ಷಗಳನ್ನು ಜೀವದ ಭಯವನ್ನು ಪಕ್ಕಕ್ಕಿಟ್ಟು ನೇರವಾಗಿ ಜನರ ಮುಂದೆ ಇರಿಸಿದವರು. ಅವರ ನೇರ ವರದಿಗಳನ್ನು ಜಗತ್ತಿನ ಬಹುತೇಕ ಇಂಗ್ಲಿಷ್ ಮತ್ತು ಇತರ ಭಾಷಾ ಚಾನೆಲ್‌ಗಳು ಮರುಪ್ರಸಾರ ಮಾಡಿವೆ. ಅರೇಬಿಕ್ ತಿಳಿಯದವರು ಅಥವಾ ಅವರ ಹೆಸರು ಗೊತ್ತಿಲ್ಲದವರೂ ಅವರ ಚಿತ್ರವನ್ನು ನೋಡಿದಾಗ- ಇವರನ್ನು ಹಿಂದೆ ನೋಡಿದ್ದೇವಲ್ಲ ಎಂದೆನಿಸುವಷ್ಟು ಅವರು ಹಳಬರು. ಜೊತೆಗೆ ಇಸ್ರೇಲಿ-ಫೆಲೆಸ್ತೀನ್ ಸಂಘರ್ಷಗಳ ಬಗ್ಗೆ ಅವರು ಮಾಡುತ್ತಿದ್ದ ವಿಶ್ಲೇಷಣೆಗಳ ಉಲ್ಲೇಖವೂ ಜಗತ್ತಿನಾದ್ಯಂತ ಆಗುತ್ತಿತ್ತು. ಅವರು ಇಸ್ರೇಲಿಗಳು ಕೊಂದ ಫೆಲೆಸ್ತೀನಿಯರ ಅಂತ್ಯಕ್ರಿಯೆಗಳನ್ನೂ ವರದಿ ಮಾಡುತ್ತಿದ್ದರು. ಇದು ಇಸ್ರೇಲಿಗೆ ಇರಿಸುಮುರಿಸು ಉಂಟುಮಾಡಿ, ಅದರ ಅಸಮಾಧಾನಕ್ಕೆ ಕಾರಣವಾಗುತ್ತಿತ್ತು. ಹಲವು ಫೆಲೆಸ್ತೀನ್ ಯುವಜನರು ಧೈರ್ಯಶಾಲಿ ಪತ್ರಕರ್ತರಾಗುವುದಕ್ಕೆ ಅವರು ಪ್ರೇರಣೆಯೂ ಆಗಿದ್ದರು.

2022ರ ಮೇ 11ರಂದು ಪಶ್ಚಿಮ ದಂಡೆಯ ಜೆನಿನ್ ನಗರದಲ್ಲಿ ಇಸ್ರೇಲಿ ಭದ್ರತಾ ಪಡೆಗಳು ಅವರನ್ನು ಹತ್ಯೆ ಮಾಡಿವೆ ಎಂದು ಅಲ್ ಜಝೀರಾ ಮತ್ತು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ವರದಿ ಮಾಡಿದ್ದವು. ಫ್ರಾನ್ಸಿನ ಎಎಫ್‌ಪಿ ಸುದ್ದಿಸಂಸ್ಥೆಯ ಛಾಯಾಗ್ರಾಹಕರೊಬ್ಬರು, ಇಸ್ರೇಲಿ ಪಡೆಗಳು ಅವರನ್ನು ಕೊಂದಿವೆ ಎಂದು ವರದಿ ಮಾಡಿದ್ದರು. ಪ್ರತ್ಯಕ್ಷದರ್ಶಿಗಳು, ಬೇರೆ ಕೆಲವು ದೇಶಗಳ ಹೇಳಿಕೆಗಳು, ಸರಕಾರೇತರ ಸಂಸ್ಥೆಗಳ ತನಿಖೆಗಳು ಈ ಕ್ರಿಮಿನಲ್ ಕೃತ್ಯಕ್ಕೆ ಇಸ್ರೇಲಿ ಭದ್ರತಾಪಡೆಗಳನ್ನೇ ದೂರಿವೆ.

ಆದರೆ, ಇಸ್ರೇಲ್ ಮಾತ್ರ ಹಿಂದೆ ಹಲವಾರು ಸಂದರ್ಭಗಳಲ್ಲಿ ಮಾಡಿರುವಂತೆ ಹೊಣೆಯಿಂದ ಹೆಗಲು ಜಾರಿಸಿಕೊಳ್ಳುವ, ಆರೋಪವನ್ನು ವಿರೋಧಿಗಳ ಹೆಗಲಿಗೇರಿಸುವ ಕೆಲಸವನ್ನು ತಕ್ಷಣವೇ ಆರಂಭಿಸಿತು. ''ಫೆಲೆಸ್ತೀನ್ ಉಗ್ರರ ವಿರುದ್ಧ ನಡೆದ ಗುಂಡಿನ ಚಕಮಕಿಯ ವೇಳೆ ಸತ್ತಿದ್ದಾರೆ'' ಎಂದು ತಕ್ಷಣವೇ ಹೇಳಿದ ಬಳಿಕ ಇಸ್ರೇಲಿನ ವಕ್ತಾರರು, ನಂತರದಲ್ಲಿ ''ಇದಕ್ಕೆ ಯಾರು ಹೊಣೆ ಎಂದು ಇನ್ನೂ ಗೊತ್ತಾಗಿಲ್ಲ'' ಎಂಬ ಹೇಳಿಕೆ ನೀಡಿದರು. ಇಸ್ರೇಲಿ ಪಡೆಗಳ ಮೇಲೆ ಫೆಲೆಸ್ತೀನಿಯರು ಗುಂಡು ಹಾರಿಸಿದ್ದರೆಂಬುದನ್ನು ಪ್ರತ್ಯಕ್ಷದರ್ಶಿಗಳು ನಿರಾಕರಿಸುತ್ತಾರೆ. ಗಾಯಗೊಂಡ ಅವರನ್ನು ಇಬ್ನ್ ಸೀನಾ ಆಸ್ಪತ್ರೆಗೆ ಒಯ್ಯಲಾಗಿತ್ತು. ಅವರ ಜೊತೆಗೆ ಬೆನ್ನಿಗೆ ಗುಂಡೇಟು ಬಿದ್ದ ಆಲಿ ಸಮೋದಿ ಎಂಬ ಫೆಲೆಸ್ತೀನ್ ಪತ್ರಕರ್ತರೂ ಇದ್ದರು. ಅವರು ಪಾರಾದರು. ಶಿರೀನ್ ಉಳಿಯಲಿಲ್ಲ. ಅನ್ ನಜಾ ನ್ಯಾಷನಲ್ ಯುನಿವರ್ಸಿಟಿಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ವರದಿ ಸ್ಪಷ್ಟವಾಗಿ ಏನೂ ಹೇಳದಿದ್ದರೂ, ತಲೆಗೆ ಬಡಿದ ಒಂದೇ ಗುಂಡಿನಿಂದ ಮೆದುಳಿಗೆ ಹಾನಿಯಾಗಿ ಸಾವು ಸಂಭವಿಸಿದೆ; ಗುಂಡನ್ನು ಹತ್ತಿರದಿಂದ ಹೊಡೆಯಲಾದ ಲಕ್ಷಣಗಳಿಲ್ಲ ಎಂದು ಹೇಳಿದೆ. ಸಾವಿಗೆ ಕಾರಣವಾದ ಗುಂಡನ್ನು ಗುರುತು ಪರೀಕ್ಷೆಗಾಗಿ ಕಳುಹಿಸಲಾಗಿದೆ. ತಾನು ಶಂಕಿತ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ನಡೆಯಿತೆಂದು ಇಸ್ರೇಲಿ ಪಡೆಗಳು ಹೇಳಿ ಫೆಲೆಸ್ತೀನಿಯರು ಗುಂಡು ಹಾರಿಸಿದರು ಎನ್ನಲಾದ ವೀಡಿಯೊ ಒಂದನ್ನು ಬಿಡುಗಡೆಗೊಳಿಸಿದೆ. ಅದರಲ್ಲಿ ಹತ್ಯೆಗೆ ಕಾರಣ ಯಾರೆಂದು ಗೊತ್ತಾಗುವುದಿಲ್ಲ. ಆದರೆ, ಅಲ್ ಜಝೀರಾ, ಇಸ್ರೇಲಿ ಪಡೆಗಳು ಶಿರೀನ್ ಅವರನ್ನು ಗುರಿ ಮಾಡಿ ತಲೆಗೆ ಗುಂಡು ಹೊಡೆದು ಕೊಂದಿವೆ ಎಂದು ಆರೋಪಿಸಿದೆ. ಇಲ್ಲಿ ಕೆಲವು ಅಂಶಗಳನ್ನು ಪರಿಶೀಲಿಸೋಣ.

ಘಟನೆಯ ವೇಳೆ ಶಿರೀನ್ 'ಪ್ರೆಸ್' ಎಂದು ದೊಡ್ಡದಾಗಿ ಬರೆದಿದ್ದ ಬುಲೆಟ್ ಪ್ರೂಫ್ ಜಾಕೆಟ್, ಹೆಲ್ಮೆಟ್ ಧರಿಸಿದ್ದರು. ಅವರನ್ನು ಕೊಂದ ಏಕೈಕ ಗುಂಡು ನಿಖರವಾಗಿ ಹೆಲ್ಮೆಟ್ ರಕ್ಷಿಸದ ಕಿವಿಯ ಕೆಳಗಿನ ಭಾಗದಿಂದ ತಲೆಯನ್ನು ಪ್ರವೇಶಿಸಿದೆ. ಇದು ಗುರಿಯಿಟ್ಟು ಹೊಡೆದ ಗುಂಡು ಎಂಬುದನ್ನು ಸೂಚಿಸುತ್ತದೆ. ಗುಂಡಿನ ಚಕಮಕಿಯ ನಡುವೆ ಸಿಕ್ಕಿಬಿದ್ದರೆ ಒಂದೇ ಗುಂಡು ಅಷ್ಟು ನಿಖರವಾಗಿ ಬೀಳುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬಹುದು. ಜೊತೆಗೆ ಹಲವು ಗುಂಡುಗಳು ಬೀಳುವ ಸಾಧ್ಯತೆಗಳು ಹೆಚ್ಚು. ಮೇಲಾಗಿ ಅವರ ಜೊತೆ ಸಿಬ್ಬಂದಿಯಲ್ಲದೆ, ಗಾಯಗೊಂಡ ಬೇರೆ ಪತ್ರಿಕೆಯ ಅಲಿ ಸಮೋದಿಯಲ್ಲದೆ, ಫೆಲೆಸ್ತೀನ್ ಪತ್ರಕರ್ತೆ ಶತಾ ಹನೈಶಾ ಹಾಗೂ ಮತ್ತೊಬ್ಬ ಪತ್ರಕರ್ತ ಇದ್ದರು. ಎಲ್ಲರೂ ನಿಶ್ಶಸ್ತ್ರರಾಗಿ ಪ್ರೆಸ್ ಜಾಕೆಟ್ ಧರಿಸಿದ್ದುದರಿಂದ, ಅವರನ್ನು ಎರಡೂ ಕಡೆಯವರು ಉಗ್ರರೆಂದಾಗಲೀ, ಇಸ್ರೇಲಿ ಸೈನಿಕರೆಂದಾಗಲೀ ತಪ್ಪುತಿಳಿಯುವ ಸಾಧ್ಯತೆಯೇ ಇಲ್ಲ. ಆದುದರಿಂದ ಇದೊಂದು ಉದ್ದೇಶಪೂರ್ವಕ ಹತ್ಯೆ ಎಂಬಂತೆಯೇ ಕಾಣುತ್ತದೆ.
ಇದಕ್ಕೆ ಪೂರಕ ಸಾಕ್ಷ್ಯಗಳೂ ಇವೆ. 'ದಿ ಟೈಮ್ಸ್' ಪತ್ರಿಕೆಯು ಮಾಡಿರುವ ವರದಿ ಪ್ರಕಾರ ಶಿರೀನ್, ಸ್ನೈಪರ್ (ಹೊಂಚು ಬಂದೂಕುಧಾರಿ) ದಾಳಿಯಲ್ಲಿ ಮೃತಪಟ್ಟಿದ್ದಾರೆ. ಹನೈಶಾ ಹೇಳುವ ಪ್ರಕಾರ ತಮ್ಮ ಗುಂಪನ್ನು ಇಸ್ರೇಲಿ ಸ್ನೈಪರ್‌ಗಳು ಗುಂಡು ಹಾರಿಸುತ್ತಾ, ಒಂದು ಮೂಲೆಯಲ್ಲಿ ಸಿಕ್ಕಿಸಿಬಿಟ್ಟಿದ್ದರು. ಶಿರೀನ್ ನೆಲಕ್ಕೆ ಬಿದ್ದ ಬಳಿಕವೂ ಅವರು ಗುಂಡು ಹಾರಾಟ ನಿಲ್ಲಿಸಲಿಲ್ಲ. ಹಾಗಾಗಿ ಶಿರೀನ್‌ರನ್ನು ಸುರಕ್ಷಿತ ಜಾಗಕ್ಕೆ ಎಳೆದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಲಿಲ್ಲ ಎಂದವರು ಹೇಳಿದ್ದಾರೆ. ಶಿರೀನ್ ಸಾಯುವ ಮೊದಲು ಆ ಪ್ರದೇಶದಲ್ಲಿ ಗುಂಡಿನ ಚಕಮಕಿ ಇರಲಿಲ್ಲ ಎಂದು ಅನೇಕ ಪತ್ರಕರ್ತರ ಸಹಿತ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದೀಗ ಆ ಗುಂಡನ್ನು ತನಗೆ ಒಪ್ಪಿಸಿ, ಜಂಟಿ ಪರಿಶೀಲನೆ ಮಾಡೋಣ ಎಂಬ ಬೇಡಿಕೆಯನ್ನು ಇಸ್ರೇಲ್ ಮಾಡಿದ್ದು, ಇದನ್ನು ತಳ್ಳಿಹಾಕಿರುವ ಫೆಲೆಸ್ತೀನ್ ಪ್ರಾಧಿಕಾರ, ಸ್ವತಂತ್ರ ಅಂತರ್‌ರಾಷ್ಟ್ರೀಯ ತನಿಖೆಗೆ ಒತ್ತಾಯಿಸಿದೆ.

ಅಲ್ ಜಝೀರಾ ವರದಿಯ ಪ್ರಕಾರ, ಶಿರೀನ್ ಸಾವಿನ ಬಳಿಕ ಇಸ್ರೇಲಿ ಪಡೆಗಳು ಶಿರೀನ್ ಅವರ ಮನೆಯನ್ನು ತಪಾಸಣೆ ಮಾಡಿರುವುದು ಕೂಡಾ ಸಂಶಯಕ್ಕೆ ಕಾರಣವಾಗಿದೆ. ಅಲ್ಲಿ ಕೇವಲ ಫೆಲೆಸ್ತೀನ್ ಬಾವುಟ ಮತ್ತು ರಾಷ್ಟ್ರಭಕ್ತಿ ಗೀತೆಗಳು ಪತ್ತೆಯಾದವು.
ಬಿಟ್‌ಸಿಲಿಮ್ ಎಂಬ ಮಾನವ ಹಕ್ಕು ಸಂಘಟನೆಯೊಂದು ಫೆಲೆಸ್ತೀನ್ ಉಗ್ರರು ಇದ್ದರು ಎಂದು ಇಸ್ರೇಲಿ ಸೇನೆ ಹೇಳಿದ್ದ ಸ್ಥಳ ಮತ್ತು ಶಿರೀನ್ ಮೃತಪಟ್ಟ ಸ್ಥಳದ ದಾಖಲೀಕರಣ ಮಾಡಿದ್ದು ಎರಡೂ ಸ್ಥಳಗಳ ನಡುವೆ ನೂರಾರು ಮೀಟರ್‌ಗಳ ಅಂತರವಿದೆ. 'ವಾಶಿಂಗ್ಟನ್ ಪೋಸ್ಟ್' ಪತ್ರಿಕೆಯು ಈ ದಾಖಲೆಯ ಪರಿಶೀಲನೆ ನಡೆಸಿದ್ದು, ಎರಡೂ ಸ್ಥಳಗಳ ನಡುವೆ ಹಲವಾರು ಕಟ್ಟಡಗಳು ಮತ್ತು ಗೋಡೆಗಳು ಇವೆ ಎಂದು ಹೇಳಿದೆ.

ಶಿರೀನ್ ಅವರ ಜೀವನವನ್ನು ಚುಟುಕಾಗಿ ನೋಡುವುದಾದರೆ, ಜನವರಿ 3,1971ರಲ್ಲಿ ಜೆರುಸಲೇಮ್‌ನಲ್ಲಿ ಹುಟ್ಟಿದ ಅವರು, ನಂತರ ತಾಯಿಯ ಕುಟುಂಬ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿದ್ಧುದರಿಂದ ಯುಎಸ್‌ಎಯ ಪ್ರಜೆಯಾದವರು. ಹೀಗಿದ್ದರೂ ಅವರು ವಾಸಿಸುತ್ತಿದ್ದುದು ಫೆಲೆಸ್ತೀನ್‌ನಲ್ಲಿಯೇ. ಅವರು ಕಳೆದ 25 ವರ್ಷಗಳಿಂದ ಅಲ್ ಜಝೀರಾ ಟಿವಿ ಚಾನೆಲ್‌ನ ಅರೇಬಿಕ್ ವಿಭಾಗದಲ್ಲಿ ಕೆಲಸ ಮಾಡುತ್ತಾ, ಇಸ್ರೇಲ್ ಆಕ್ರಮಿತ ಫೆಲೆಸ್ತೀನ್ ಪ್ರದೇಶದಿಂದ ವರದಿ ಮಾಡುತ್ತಿದ್ದರು. ಅವರ ಹೆತ್ತವರು ಬೆತ್ಲೆಹೆಮ್‌ನ ಅರಬ್-ಫೆಲೆಸ್ತೀನಿ ಕ್ರೈಸ್ತರು. ಜೋರ್ಡಾನಿನ ಯಾರ್ಮುಕ್ ವಿಶ್ವವಿದ್ಯಾನಿಲಯದ ಮುದ್ರಣ ಪತ್ರಿಕೋದ್ಯಮ ಪದವೀಧರೆಯಾದ ಅವರು, ರೇಡಿಯೊ ಮೊಂಟೆ ಕಾರ್ಲೋ, ವಾಯ್ಸಿ ಆಫ್ ಫೆಲೆಸ್ತೀನ್ ರೇಡಿಯೋಗಳಲ್ಲಿ ಮೊದಲಿಗೆ ಕೆಲಸ ಮಾಡಿದ್ದರು. ನಂತರ ಜೋರ್ಡಾನಿನ ಟಿವಿ ಚಾನೆಲ್ ಸಹಿತ ಹಲವು ಕಡೆ ಕೆಲಸ ಮಾಡಿ, 1997ರಲ್ಲಿ ಅಲ್ ಜಝೀರಾ ಸೇರಿ, ಅದರ ಮೊದಲ ನೆಲಮಟ್ಟದ ನೇರ ವರದಿಗಾರ್ತಿ ಆದ ಬಳಿಕ ಬೇರೆ ಕಡೆ ನೋಡಿಲ್ಲ. ದೃಶ್ಯ ಮಾಧ್ಯಮದಲ್ಲಿ ಡಿಪ್ಲೊಮಾ ಮಾಡಿರುವ ಅವರು, ಇಸ್ರೇಲಿ ಮಾಧ್ಯಮಗಳ ಅಪಪ್ರಚಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲೆಂದೇ ಸಾಯುವ ಹೊತ್ತಿಗೆ ಹಿಬ್ರೂ ಭಾಷೆ ಕಲಿಯುತ್ತಿದ್ದರು.

ಅವರ ಮರಣಾನಂತರ, ಸಾಮಾನ್ಯ ಜನರಿಂದ ಹಿಡಿದು ರಾಷ್ಟ್ರೀಯ ನಾಯಕರ ತನಕ ಇಡೀ ಅರಬ್ ಜಗತ್ತೇ ಶೋಕ ವ್ಯಕ್ತಪಡಿಸಿದೆ. ರಮಲ್ಲಾದಲ್ಲಿ ಫೆಲೆಸ್ತೀನಿನ ಸರಕಾರಿ ಗೌರವದೊಂದಿಗೆ ಅಧ್ಯಕ್ಷರ ಅರಮನೆಯಿಂದ ಆರಂಭವಾದ ಆವರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಅವರ ದೇಹವನ್ನು ಫೆಲೆಸ್ತೀನ್ ಧ್ವಜ ಮತ್ತು ಪ್ರೆಸ್ ಜಾಕೆಟಿನಿಂದ ಮುಚ್ಚಲಾಗಿತ್ತು. ಅವರ ದೇಹವನ್ನು ಹುಟ್ಟೂರು ಜೆರುಸಲೇಮ್‌ನಲ್ಲಿ ಅವರ ಮನೆಯ ಬಳಿಯ ದಫನ ಭೂಮಿಯಲ್ಲಿ ದಫನ ಮಾಡಲಾಯಿತು. ಹಲವು ಕಡೆ ಜನರು ಇಸ್ರೇಲಿ ಸೈನಿಕರ ಜೊತೆ ಘರ್ಷಣೆಗೂ ಇಳಿದರು. ವಿಶ್ವದಾದ್ಯಂತ ಖಂಡನೆಗಳು- ಮುಖ್ಯವಾಗಿ ವಿಶ್ವಸಂಸ್ಥೆ, ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಸಹಿತ ಪತ್ರಕರ್ತರ ಮತ್ತು ಮಾನವ ಹಕ್ಕುಗಳ ಸಂಘಟನೆಗಳಿಂದ ಬಂದಿವೆಯಾದರೂ, ಯುಎಸ್‌ಎ ಸಹಿತ ಪಾಶ್ಚಾತ್ಯ ರಾಷ್ಟ್ರಗಳ ಪ್ರತಿಕ್ರಿಯೆಯಲ್ಲಿ ಹೆಚ್ಚಿನ ಚೈತನ್ಯವಾಗಲೀ, ಖಂಡನೆಯಾಗಲೀ ಇಲ್ಲದಿರುವುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಪಾಕಿಸ್ತಾನ ಮತ್ತು ಚೀನಾ ಕೂಡಾ ದನಿಯೆತ್ತಿವೆಯಾದರೂ, ಭಾರತ ಸರಕಾರದಿಂದ ಒಂದು ಶಬ್ದವೂ ಹೊರಬಂದಂತಿಲ್ಲ.

ಫೆಲೆಸ್ತೀನ್ ಪತ್ರಕರ್ತರ ಕುರಿತು ಇಸ್ರೇಲಿನ ಅಸಹನೆ ಹೊಸದೇನೂ ಅಲ್ಲ. 'ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್' ಸಂಘಟನೆಯ ಪ್ರಕಾರ 2018ರಿಂದ ಎಪ್ರಿಲ್ 2022ರ ತನಕ ಇಸ್ರೇಲಿ ಸೈನಿಕರು ಗಾಝಾ ಪಟ್ಟಿ, ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೇಮ್‌ನಲ್ಲಿ 144 ಫೆಲೆಸ್ತೀನ್ ಪತ್ರಕರ್ತರನ್ನು ಗಾಯಗೊಳಿಸಿದ್ದಾರೆ. ಇದೇ ಹೊತ್ತಿಗೆ 'ಇಂಟರ್‌ನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ಸ್' ಸಂಘಟನೆ ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ಕೇಸು ದಾಖಲಿಸಿರುವುದು ಗಮನಾರ್ಹ.

ಇಷ್ಟೆಲ್ಲಾ ನಡೆದರೂ ತಮ್ಮನ್ನು ಮಾರಿಕೊಂಡು, ಸರಕಾರದ ಪರ ತುತ್ತೂರಿ ಊದುತ್ತಾ, ಸರಕಾರಿ ಅಜೆಂಡಾದಂತೆಯೇ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹರಡುತ್ತಾ, ಹುಸಿ ದೇಶಪ್ರೇಮದ ಹೆಸರಿನಲ್ಲಿ ದೇಶ ಒಡೆಯುವ ಪುಣ್ಯಕಾರ್ಯದಲ್ಲಿ ನಿರತವಾಗಿರುವ; ವೀಡಿಯೊ ಗೇಮ್‌ಗಳ ತುಣುಕುಗಳನ್ನು ಯುದ್ಧದ ಚಿತ್ರಗಳೆಂದು ವೀಕ್ಷಕರಿಗೆ ಮೋಸಮಾಡುವ ಭಾರತೀಯ ಮುಖ್ಯವಾಹಿನಿಯ ಬಹುತೇಕ ಪುಕ್ಕಲು ಮಾಧ್ಯಮಗಳಿಗೆ ಇದೊಂದು ಸುದ್ದಿ ಎಂದು ಅನಿಸದಿರುವುದರಲ್ಲಿ ಆಶ್ಚರ್ಯವಿಲ್ಲ. ಇಂತಹವರ ನಡುವೆ, ಶಿರೀನ್ ಅಬೂ ಅಕ್ಲೇಹ್ ಅವರು- ತಾನು ನಂಬಿದ ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಿ, ಅನ್ಯಾಯಗಳನ್ನು ಬಯಲುಗೊಳಿಸುವ ಮಾಧ್ಯಮ ಧರ್ಮಕ್ಕಾಗಿ ದುಡಿದು ಮಡಿದ ದಿಟ್ಟ ಮಹಿಳೆಯಾಗಿ ಇವರೆಲ್ಲರಿಗಿಂತಲೂ ಬಹಳ ಬಹಳ ಎತ್ತರದಲ್ಲಿ ನಿಲ್ಲುತ್ತಾರೆ. ಅವರ ಬಲಿದಾನ ಈ ಮೌಲ್ಯಗಳನ್ನು ಗಟ್ಟಿಗೊಳಿಸಲಿ.

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News