ದ.ಕ., ಉಡುಪಿ ಜಿಲ್ಲೆಯಲ್ಲಿ ಗುಡುಗು-ಮಿಂಚಿನೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ

Update: 2022-05-15 14:59 GMT

ಮಂಗಳೂರು : ಮುಂದಿನ 24 ಗಂಟೆಯಲ್ಲಿ ಕರಾವಳಿಯ ದ.ಕ., ಉಡುಪಿ ಜಿಲ್ಲೆಗಳಲ್ಲಿ ಗುಡುಗು-ಮಿಂಚಿನೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದ.ಕ.ಜಿಲ್ಲೆಯಲ್ಲಿ ರವಿವಾರ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಅಸನಿ ಚಂಡಮಾರುತ ಪ್ರಭಾವ ಸಾಕಷ್ಟು ತಗ್ಗಿದ್ದರೂ ಕೂಡ ಮೋಡದ ಚಲನೆ ಮುಂದುವರಿದೆ. ಹಾಗಾಗಿ ಅಲ್ಲಲ್ಲಿ ಮಳೆಯಾಗುತ್ತಿದೆ. ನಗರವಲ್ಲದೆ ಬಂಟ್ವಾಳ, ಪುತ್ತೂರು ಭಾಗದ ಕೆಲವೆಡೆ ರವಿವಾರ  ಮಳೆಯಾಗಿದೆ.

*ಸೋಮವಾರ ಮತ್ತು ಮಂಗಳವಾರವೂ ಕರಾವಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆ ಬಳಿಕ ಆರೆಂಜ್ ಅಲರ್ಟ್ ಇದೆ. ನಗರದಲ್ಲಿ ದಿನದ ಗರಿಷ್ಠ ತಾಪಮಾನ ೩೨.೪ ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ ೨೫.೩ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮೋಡ ಕವಿದ ವಾತಾವರಣದ ಮಧ್ಯೆ ಅಡ್ಯಾರ್-ಹರೇಕಳ ನಡುವಿನ ತಾತ್ಕಾಲಿಕ ಮಣ್ಣು ರಸ್ತೆ ಶನಿವಾರ ಕೊಚ್ಚಿ ಹೋಗಿದ್ದರೆ, ನಗರದ ವೆಲೆನ್ಸಿಯಾ-ಗೋರಿಗುಡ್ಡ ರಸ್ತೆಯ ವಸತಿ ಸಮುಚ್ಚಯವೊಂದರ ಆವರಣ ಗೋಡೆ ಕುಸಿದಿದೆ.

ಕರ್ನಾಟಕ ಕರಾವಳಿ ತೀರದಲ್ಲಿ ಗಂಟೆಗೆ ೪೦-೫೦ ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಮೀನುಗಾರರು ಆಳಸಮುದ್ರಕ್ಕೆ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೆ ಪ್ರವಾಸಿಗರೂ ಸಮುದ್ರ ತೀರ ಪ್ರದೇಶದಲ್ಲಿ ನೀರಿಗೆ ಇಳಿಯದಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News