​ಶಾಲೆಗಳಲ್ಲಿ ಚಿಣ್ಣರ ಕಲರವ: ಪ್ರಾರಂಭೋತ್ಸವ ಸಂಭ್ರಮ

Update: 2022-05-16 04:16 GMT

ಮಂಗಳೂರು, ಮೇ 16:  ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 2022-23ನೆ  ಶೈಕ್ಷಣಿಕ ಸಾಲಿನ ಚಟುವಟಿಕೆ ಗಳು ಇಂದಿನಿಂದ  ಆರಂಭಗೊಂಡಿವೆ.

2021-22ನೆ ಶೈಕ್ಷಣಿಕ ಸಾಲಿನ ಚಟುವಟಿಕೆಗಳು ಎಪ್ರಿಲ್ 14 ಕ್ಕೆ ಕೊನೆಗೊಂಡು ಮಕ್ಕಳಿಗೆ ರಜೆ ನೀಡಲಾಗಿತ್ತು‌.
ಕಳೆದ 2 ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಗೊಂದಲದಲ್ಲೇ ಸಾಗಿದ್ದ ಮಕ್ಕಳ ಶಾಲಾ ಚಟುವಟಿಕೆಗಳು ಈ ವರ್ಷ ಮತ್ತೆ ಹೊಸತನದೊಂದಿಗೆ ಆರಂಭಗೊಂಡಿದೆ.

ಮಳೆಬಿಲ್ಲು 14 ದಿನಗಳ ವಿಶೇಷ ಕಾರ್ಯಕ್ರಮದ ಮೂಲಕ ಈ ಬಾರಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಸರಕಾರಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಪ್ರಥಮ ದಿನವಾದ ಇಂದು ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ನಗುಮೊಗದೊಂದಿಗೆ ಆದರದ ಸ್ವಾಗತ ನೀಡಿದರು. ಪುಟಾಣಿಗಳಿಗೆ ಬಲೂನ್, ಪ್ರಾಣಿಗಳ ಚಿತ್ರವುಳ್ಳ ಮುಖವಾಡಗಳನ್ನು ನೀಡುವುದು ಸೇರಿದಂತೆ ಶಾಲೆಗಳಲ್ಲಿ ವಿವಿಧ ಆಕರ್ಷಣೆಯೊಂದಿಗೆ ಮಕ್ಕಳನ್ನು ಶಾಲಾ ತರಗತಿಗಳಿಗೆ ಬರಮಾಡಿಕೊಳ್ಳಲಾಯಿತು.

ಮಂಗಳೂರು ನಗರದ ಮಣ್ಞಗುಡ್ಡ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಮಣ್ಣಗುಡ್ಡೆ ಗುರ್ಜಿಯಿಂದ ಶಾಲೆವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಕೆಲವೆಡೆ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.ಶಾಲಾ ಕೊಠಡಿ, ಶಾಲಾ ಆವರಣವನ್ನು ಮುಂಚಿತವಾಗಿ ಶುಚಿಗೊಳಿಸಲಾಗಿದೆ. ಶಾಲೆಗಳಲ್ಲಿ ಸ್ಥಳೀಯ ಗಣ್ಯರು, ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಶಾಲಾ ಆರಂಭೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ.

ಆಟದ ಹಬ್ಬ, ಆಟಾಟಿಕೆ ಮೇಳ, ನಾಟಕದ ದಿನ, ಚಿತ್ತ ಚಿತ್ತಾರ, ಕಲಾ ಹಬ್ಬ, ಚಿತ್ರ ಜಗತ್ತು, ಕಥೆಗಳ ಹಬ್ಬ, ಕವಿತೆ ಕಟ್ಟೋಣ, ಹಾಡು ಹಾಡೋಣ, ಪರಿಸರ ಹಬ್ಬ, ಗಣಿತದ ಹಬ್ಬ, ಇತಿಹಾಸದ ಹಬ್ಬ ನಾವಿನ್ನೂ ಮರೆತಿಲ್ಲ, ಅಡುಗೆ ಮನೆಯಲ್ಲಿ ವಿಜ್ಞಾನ ಸೇರಿದಂತೆ ಇನ್ನೂ ಹಲವು ಕಾರ್ಯಕ್ರಮಗಳೊಂದಿಗೆ ಪ್ರಸಕ್ತ ಸಾಲಿನ ಪಠ್ಯ, ಪಠ್ಯೇತರ ಚಟುವಟಿಕೆಗಳು ನಡೆಯಲಿವೆ. ಇದಕ್ಕಾಗಿ ಎಲ್ಲಾ ಶಾಲೆಗಳಲ್ಲಿ ತಯಾರಿ ನಡೆಸಲಾಗಿದೆ ಎಂದು ಡಿಡಿಪಿಐ ಸುಧಾಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News