ಸಹಿಷ್ಣುತೆ ಸಾಕ್ಷಿಪ್ರಜ್ಞೆ ಬುದ್ಧ

Update: 2022-05-16 05:52 GMT

ಅಸಹನೆ ಮನುಷ್ಯ ತಾನೇ ನೇಯ್ದುಕೊಂಡಿರುವ ಹಿಂಸಾಪಿಪಾಸು ಬಲೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕೆಲವು ಹಿತಾಸಕ್ತಿ ಹಾಗೂ ಸ್ವಾರ್ಥದ ಕಾರಣಗಳಿಗಾಗಿ ದೇಶದೇಶಗಳ ನಡುವೆ ಯುದ್ಧದ ಹಾತೊರೆಯುವಿಕೆ ಇದೆ. ಇದು ಜಾಗತಿಕ ಮಟ್ಟದ ಅಸಹಿಷ್ಣುತೆಯ ರೋಗವಾಗಿದೆ. ಇನ್ನೊಂದೆಡೆ ತಾನು ನಂಬಿದ ಧರ್ಮ, ದೇವರು, ಸಂಸ್ಕೃತಿ, ಸಂಪ್ರದಾಯ, ಶಾಸ್ತ್ರಗ್ರಂಥ, ಜಾತಿ ಮುಂತಾದವುಗಳ ಬಗೆಗಿನ ಅಂಧಾಭಿಮಾನ, ಅವುಗಳು ಪ್ರಶ್ನಾತೀತವೆಂಬ ಅತಿಯಾದ ಭಾವುಕತೆ ಮನುಷ್ಯರಲ್ಲಿ ಅಸಹಿಷ್ಣುತೆಯನ್ನು ಉದ್ರೇಕಿಸಿ ಹಿಂಸೆ ಪ್ರಚೋದಿಸಲು ಮತ್ತು ಹಿಂಸೆಗೆ ತೊಡಗಲು ಕಾರಣವಾಗುತ್ತಿದೆ. ಮಾನವ ತನ್ನೊಳಗಿನ ಮಾನವೀಯತೆಯನ್ನೇ ಕಳೆದುಕೊಂಡು ಕ್ರೂರಿಯಾಗುವ ಮನಸ್ಸನ್ನು ಕಾರುಣ್ಯದಲ್ಲಿ ಪಳಗಿಸಬೇಕಾದ ಅಗತ್ಯವನ್ನು ಸಾರಿದವನು ಬುದ್ಧ. ಸಹನೆ ಬುದ್ಧತತ್ವದ ಬಹುದೊಡ್ಡ ಮೌಲ್ಯ. ಬುದ್ಧನ ಬದುಕಿನಲ್ಲಿ ಘಟಿಸಿಹೋಗಿರುವ ಅನೇಕ ಘಟನೆಗಳು ಸ್ವತಃ ಬುದ್ಧನೇ ಸಹಿಷ್ಣುತೆಗೆ ಉದಾಹರಣೆಯಾಗಿದ್ದ ಎಂಬುದನ್ನು ಸಾಬೀತುಪಡಿಸುತ್ತವೆ. ಅವುಗಳ ಸಂದೇಶ ಇಂದಿಗೂ ಪ್ರಸ್ತುತ ಎಂಬುದನ್ನು ಸಾರುತ್ತವೆ. ಯುದ್ಧ ನಿರಾಕರಿಸಿ ಅಹಿಂಸೆ ಮೆರೆದ ಕ್ಷಣಗಳು :

 ಬುದ್ಧನ ಮೊದಲ ಹೆಸರು ಸಿದ್ಧಾರ್ಥ. ಸಿದ್ಧಾರ್ಥನ ಬಾಲ್ಯದೊಂದಿಗೆ ಅಹಿಂಸೆಯೂ ಬೆಸೆದುಕೊಂಡಿದೆ. ಸಮರ ಕಲೆಯನ್ನು ಕಲಿತಿದ್ದರೂ ಸಿದ್ಧಾರ್ಥ ಅದನ್ನು ಯಾರ ಮೇಲೂ ಪ್ರಯೋಗಿಸಲು ನಿರಾಕರಿಸುತ್ತಿದ್ದ. ತಾಯಿ ಪ್ರಜಾಪತಿ ಗೋತಮಿ ಸಿದ್ಧಾರ್ಥನಿಗೆ ‘‘ನೀನು ಕ್ಷತ್ರಿಯನೆಂಬುದನ್ನೂ ಯುದ್ಧ ಮಾಡುವುದು ನಿನ್ನ ಕರ್ತವ್ಯ ಎಂಬುದನ್ನು ಮರೆತಿದ್ದೀಯ, ಯುದ್ಧ ಕ್ಷತ್ರಿಯ ಧರ್ಮ’’ ಎಂದು ಹೇಳುತ್ತಿದ್ದಳು. ಆದರೆ ಸಿದ್ಧಾರ್ಥ ಮಾತ್ರ ‘‘ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕೊಲ್ಲುವುದು ಹೇಗೆ ಕರ್ತವ್ಯ ಹಾಗೂ ಧರ್ಮವಾಗುತ್ತದೆ?’’ ಎಂದು ಪ್ರಶ್ನಿಸುತ್ತಿದ್ದ. ತಾಯಿ ಇದಕ್ಕೆ ‘‘ಕ್ಷತ್ರಿಯರು ಹೋರಾಡಲೇಬೇಕು. ಅವರು ಹೋರಾಡದಿದ್ದರೆ ರಾಜ್ಯವನ್ನು ರಕ್ಷಿಸುವವರು ಯಾರು?’’ ಎಂದು ಕೇಳುತ್ತಿದ್ದಳು. ಇದಕ್ಕೆ ಸಿದ್ಧಾರ್ಥ ‘‘ಅಮ್ಮಾ ಎಲ್ಲಾ ಕ್ಷತ್ರಿಯರು ಪರಸ್ಪರ ಪ್ರೀತಿಸುವುದಾದರೆ ಯಾವ ಹಿಂಸೆಯೂ ಇಲ್ಲದೆ ತಮ್ಮ ತಮ್ಮ ರಾಜ್ಯವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೇ?’’ ಎಂದು ತನ್ನ ತಾಯಿಯನ್ನು ನಿರುತ್ತರಳನ್ನಾಗಿ ಮಾಡುತ್ತಿದ್ದ. ಬುದ್ಧ ಒಬ್ಬ ರೋಗಿ, ಮುದುಕ ಹಾಗೂ ಶವವನ್ನು ಕಂಡು ವೈರಾಗ್ಯಗೊಂಡು ಮಧ್ಯರಾತ್ರಿ ಹೊರಟುಹೋದ ಎಂಬ ಕಥೆಯೇ ಹೆಚ್ಚು ಪ್ರಚಲಿತದಲ್ಲಿದೆ. ಆದರೆ ಬುದ್ಧನ ಬಗೆಗೆ ಅತ್ಯಂತ ಶ್ರದ್ಧೆಯಿಂದ ಅಧ್ಯಯನ ಮಾಡಿದ, ಸ್ವತಃ ತಾವೇ ಬೌದ್ಧರಾದ ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ‘ಬುದ್ಧ ಮತ್ತು ಆತನ ಧಮ್ಮ’ ಕೃತಿಯಲ್ಲಿ ಹಾಗೂ ಧರ್ಮಾನಂದ ಕೋಸಂಬಿಯವರು ತಮ್ಮ ‘ಭಗವಾನ್ ಬುದ್ಧ’ ಕೃತಿಯಲ್ಲಿ ಬುದ್ಧ ಮನೆಬಿಟ್ಟು ಹೋಗಲು, ರೋಹಿಣಿ ನದಿಯ ವಿಷಯವಾಗಿ ಶಾಕ್ಯ ಹಾಗೂ ಕೋಲಿಯಾ ಬುಡಕಟ್ಟುಗಳ ನಡುವೆ ನಡೆದ ಸಂಘರ್ಷ ಕಾರಣವೆಂಬುದನ್ನು ಸಾಕ್ಷಿ ಸಮೇತ ಬಹಿರಂಗಪಡಿಸಿದ್ದಾರೆ.

ಶಾಕ್ಯ ಹಾಗೂ ಕೋಲಿಯಾ ರೋಹಿಣಿ ನದಿಯ ತೀರದಲ್ಲಿ ವಾಸವಿದ್ದ ಎರಡು ಬುಡಕಟ್ಟುಗಳು. ಇವೆರಡು ಸಮುದಾಯಗಳ ನಡುವೆ ನದಿಯ ನೀರಿನ ವಿಷಯಕ್ಕಾಗಿ ಪರಸ್ಪರ ಸಂಘರ್ಷ ನಡೆಯುತ್ತಿತ್ತು. ಬುಡಕಟ್ಟಿನ ನಿಯಮದಂತೆ ಶಾಕ್ಯ ಸಂಘದ ಸದಸ್ಯನಾಗಿದ್ದ ಸಿದ್ಧಾರ್ಥ. ನದಿನೀರಿನ ಹಂಚಿಕೆ ಸಮಸ್ಯೆ ಕೊನೆಗೊಳ್ಳಬೇಕಾದರೆ ಕೋಲಿಯಾರೊಂದಿಗೆ ಯುದ್ಧ ಮಾಡು ವುದೊಂದೇ ಪರಿಹಾರ ಎಂಬ ಶಾಕ್ಯ ಸಂಘದ ನಿರ್ಧಾರವನ್ನು ಖಂಡಿಸಿದ. ಯುದ್ಧ ಯಾವ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಬದಲಿಗೆ ಹಿಂಸೆಗೆ ಪ್ರಚೋದಿಸುತ್ತದೆ. ಇದು ಮತ್ತೊಂದು ಯುದ್ಧಕ್ಕೆ ಬೀಜವನ್ನು ಬಿತ್ತುತ್ತದೆ. ಹತ್ಯೆಗೈದವನನ್ನು ಸಂಹರಿಸಲು ಮತ್ತೊಬ್ಬ ಹುಟ್ಟಿಕೊಳ್ಳುತ್ತಾನೆ. ಇದರಿಂದ ಪರಸ್ಪರ ದ್ವೇಷ ನಿರಂತರವಾಗುತ್ತದೆ. ಹಿಂಸೆ ಕೊನೆಗೊಳ್ಳುವುದಿಲ್ಲ. ಯುದ್ಧದ ಬದಲು ಪ್ರೀತಿಯಿಂದ ಮಾತ್ರ ದ್ವೇಷವನ್ನು, ವೈರತ್ವವನ್ನು ಗೆಲ್ಲಬಹುದು ಎಂಬ ನಿಲುವನ್ನು ಸಿದ್ಧಾರ್ಥ ವ್ಯಕ್ತಪಡಿಸಿದ. ಆದರೆ ಈ ನಿಲುವನ್ನು ಶಾಕ್ಯ ಸಂಘದ ಬಹುಪಾಲು ಸದಸ್ಯರು ಖಂಡಿಸಿದರು. ಸಂಘದ ನಿಯಮದಂತೆ ಸಿದ್ಧಾರ್ಥನ ಮುಂದೆ ಮೂರು ಆಯ್ಕೆಗಳಿದ್ದವು. ಒಂದು; ಶಾಕ್ಯ ಸೈನ್ಯವನ್ನು ಸೇರಿ ಕೋಲಿಯರ ಮೇಲೆ ಯುದ್ಧ ಮಾಡುವುದು. ಎರಡು; ಮರಣದಂಡನೆ ಅಥವಾ ಗಡಿಪಾರಿಗೆ ಒಳಗಾಗುವುದು. ಮೂರು; ತನ್ನ ಕುಟುಂಬದ ಸದಸ್ಯರನ್ನು ಸಾಮಾಜಿಕ ಬಹಿಷ್ಕಾರಕ್ಕೆ ಈಡು ಮಾಡಿ ಅವರ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಲು ಅವಕಾಶ ಮಾಡುವುದು. ಮೊದಲ ಹಾಗೂ ಮೂರನೇ ನಿಯಮಗಳನ್ನು ಒಪ್ಪದ ಸಿದ್ಧಾರ್ಥ ಇದು ತನ್ನ ವೈಯಕ್ತಿಕ ನಿಲುವಾದ ಕಾರಣ ತಾನೇ ಶಿಕ್ಷೆ ಅನುಭವಿಸುವೆನೆಂದು ಸ್ವಯಂ ಗಡಿಪಾರಿಗೆ ಒಳಗಾಗುವುದನ್ನು ಆಯ್ಕೆಮಾಡಿಕೊಂಡು ಮನೆಯಿಂದ ಹೊರನಡೆದ. ಹೀಗೆ ಮನೆಯಿಂದ ಹೊರನಡೆದ ಬುದ್ಧ ತನ್ನ ಬದುಕಿನುದ್ದಕ್ಕೂ ಧ್ಯಾನಿಸಿದ್ದು ಮನುಷ್ಯ ಮನುಷ್ಯರ ನಡುವಿನ ಸೌಹಾರ್ದತೆಯನ್ನೆ. ಹಿಂಸೆಯನ್ನು ಪ್ರಚೋದಿಸುವ ಯಾವುದೇ ರಾಜಕಾರಣ ಇದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಸಹಿಷ್ಣುತೆಯ ಮಹಾನ್ ಸಂಕೇತ ಭಿಕ್ಷಾಪಾತ್ರೆ : ನಮ್ಮ ಭಾರತದ ಸಾಮಾಜಿಕ ವ್ಯವಸ್ಥೆ ತುಂಬ ಸಂಕೀರ್ಣವಾದುದು. ಚಾತುರ್ವರ್ಣ ಮತ್ತು ಜಾತಿಪದ್ಧತಿಯ ಕಾರಣಕ್ಕಾಗಿ ಜನತೆಯನ್ನು ಶ್ರೇಣೀಕರಣವಾಗಿ ವಿಂಗಡಿಸಿರುವ, ಈ ಮೂಲಕ ಅಸಮಾನತೆಯನ್ನು ಕಾಯ್ದುಕೊಂಡಿರುವ ಮನಸ್ಥಿತಿಯು ಆಯಾ ಸಮುದಾಯ ಮಾಡುವ ಊಟದ ಬಗೆಗೂ ತಾರತಮ್ಯವನ್ನು ಸೃಷ್ಟಿಸಿದೆ. ಶ್ರೇಣೀಕರಣ ವ್ಯವಸ್ಥೆಯಲ್ಲಿ ಯಾವ ಸಮುದಾಯಗಳನ್ನು ಮೇಲು ಎಂದು ಪರಿಗಣಿಸಲಾಗಿದೆಯೋ ಆ ಸಮುದಾಯಗಳ ಆಹಾರವು ಪವಿತ್ರವೆನಿಸಿದೆ. ಯಾವ ಸಮುದಾಯಗಳನ್ನು ಕೀಳು ಎಂಬುದಾಗಿ ಪರಿಗಣಿಸಲಾಗಿದೆಯೋ ಆ ಸಮುದಾಯಗಳ ಆಹಾರವನ್ನು ಅಪವಿತ್ರವೆಂದು ನಂಬಿಸಲಾಗಿದೆ. ಈ ನಂಬಿಕೆ ಇಂದಿಗೂ ಕಡಿಮೆಯಾಗಿಲ್ಲ. ತನ್ನ ಹಸಿವನ್ನು ತಣಿಸಿಕೊಳ್ಳಲು ಮನುಷ್ಯ ತಿನ್ನುವ ಆಹಾರದ ಜೊತೆಗೂ ಧರ್ಮ, ಜಾತಿಯ ಸಂಬಂಧವನ್ನು ತಳುಕು ಹಾಕಿರುವ ಕಾರಣ ಸಸ್ಯಹಾರ ಶ್ರೇಷ್ಠ, ಮಾಂಸಹಾರ ಕನಿಷ್ಠ ಎಂಬುದಾಗಿ ಮೇಲರಿಮೆ ಮತ್ತು ಕೀಳರಿಮೆಯ ರೋಗವನ್ನು ಹರಡಲಾಗಿದೆ. ಇದು ಇಲ್ಲಿಗೇ ನಿಲ್ಲದೆ ಆಹಾರ ವಿಷಯದ ಕಾರಣವಾಗಿಯೇ ಅಸಹನೆ ವ್ಯಕ್ತಪಡಿಸಿ ಹಲ್ಲೆ ನಡೆಸಿ ಕೊಲ್ಲುವ ಹಿಂಸೆಯ ಮನಸ್ಥಿತಿಯಿದೆ. ಆದರೆ ಇದಕ್ಕೆ ತದ್ವಿರುದ್ಧವಾದ ಪರ್ಯಾಯ ಚಿಂತನೆ ಬುದ್ಧನಲ್ಲಿ ಸಿಗುತ್ತದೆ. ಬುದ್ಧನ ವಿಶೇಷವೆಂದರೆ ಜನತೆಯ ಅನ್ನಾಹಾರದ ಬಗೆಗೆ ಯಾವುದೇ ಮೇಲರಿಮೆ-ಕೀಳರಿಮೆಯನ್ನು ಮೂಡಿಸದೆ ಇರುವುದು. ಆಹಾರ ಪದ್ಧತಿಗೂ ಜನರ ನಡವಳಿಕೆಗೂ ಯಾವುದೇ ಸಂಬಂಧವಿಲ್ಲವೆಂಬ ನಿಸರ್ಗ ಸತ್ಯವನ್ನು ಬುದ್ಧ ಅರಿತವನಾಗಿದ್ದ. ಹಾಗಾಗಿಯೇ ಯಾವುದೇ ತಾರತಮ್ಯ ಮಾಡದೆ ಜನತೆಯ ಆಹಾರವನ್ನು ಬುದ್ಧ ಗೌರವಿಸಿರುವುದು. ತನ್ನ ಚಿಂತನೆಗಳಿಗೆ ಮನಸೋತು ಅವುಗಳನ್ನು ಪ್ರಸಾರ ಮಾಡಲು ಭಿಕ್ಕುಗಳಾದವರಿಗೆ ಬುದ್ಧ ನೀಡಿದ್ದು ಭಿಕ್ಷಾಪಾತ್ರೆ.

ಈ ಭಿಕ್ಷಾಪಾತ್ರೆಯನ್ನು ಹಿಡಿದು ಬೌದ್ಧ ಭಿಕ್ಕುಗಳು ಜನತೆಯ ಬಳಿ ತೆರಳಬೇಕಿತ್ತು. ಈ ಸಂದರ್ಭದಲ್ಲಿ ಭಿಕ್ಕುಗಳು ತಮಗೆ ಊಟ ನೀಡುವ ವ್ಯಕ್ತಿ ಅಥವಾ ಸಮುದಾಯದ ಹಿನ್ನೆಲೆಯನ್ನು ಕೇಳುವಂತಿರಲಿಲ್ಲ. ಆ ವ್ಯಕ್ತಿ-ಸಮುದಾಯ ನೀಡಿದ ಆಹಾರವನ್ನು ಪ್ರೀತಿಯಿಂದ ಸ್ವೀಕರಿಸಿ ತಮ್ಮ ಹಸಿವನ್ನು ನೀಗಿಸಿಕೊಳ್ಳಬೇಕಾಗಿತ್ತು. ಈ ಕಾರಣವಾಗಿ ಬೌದ್ಧಭಿಕ್ಕುಗಳು ಎಲ್ಲಾ ಬಗೆಯ ಮೇಲರಿಮೆ-ಕೀಳರಿಮೆಗಳನ್ನು ಮೀರಿ ಎಲ್ಲರೊಳಗೆ ಒಬ್ಬರಾಗುತ್ತಿದ್ದರು. ಸ್ವತಃ ಬುದ್ಧ ಕೂಡ ಹೀಗೇ ಇದ್ದವನು. ಆಹಾರದ ವಿಷಯದಲ್ಲಿ ಸೌಹಾರ್ದತೆಯ ಘನತೆ ಸಾರಿದ ಬುದ್ಧನ ವೈಶಾಲ್ಯತೆಯನ್ನು ಇದು ಸಾಕ್ಷೀಕರಿಸುತ್ತದೆ. ಪ್ರಶ್ನೆಯೆಂಬುದು ಅರಿವಿನ ತಾಯಿ :

ಯಾವುದೇ ವಿಷಯದ ಕುರಿತು ಇದೇ ಅಂತಿಮ ಸತ್ಯವೆಂದು ಹೇಳುವುದರ ಬಗೆಗೆ ಬುದ್ಧನ ವಿರೋಧವಿತ್ತು. ಮಾನವ ತನ್ನ ಅರಿವನ್ನು ವಿಸ್ತರಿಸಿಕೊಳ್ಳಲು ಪ್ರಶ್ನೆಯ ಅನಿವಾರ್ಯತೆ, ಮುಕ್ತ ಸಂವಾದ, ಆರೋಗ್ಯಕರ ಚರ್ಚೆಗಳಿಗೆ ಹೆಚ್ಚು ಆದ್ಯತೆ ಇರಬೇಕು ಎಂದು ಬುದ್ಧ ಹೇಳುತ್ತಿದ್ದ. ಇಂದು ಧರ್ಮವನ್ನು, ಧರ್ಮದೊಳಗಿನ ಅಮಾನವೀಯತೆಯನ್ನು, ಶಾಸ್ತ್ರಗ್ರಂಥಗಳನ್ನು, ಸಾಂಪ್ರದಾಯಿಕ ಮೌಢ್ಯಗಳನ್ನು ಸಮಾನತೆ, ಮಾನವೀಯತೆ, ವೈಜ್ಞಾನಿಕ ಹಾಗೂ ವೈಚಾರಿಕ ಹಿನ್ನೆಲೆಯಲ್ಲಿ ಪ್ರಶ್ನೆಮಾಡಿದರೆ ಪ್ರಶ್ನೆ ಮಾಡಿದವರನ್ನು ದಮನಿಸುವ, ಅವರ ಮೇಲೆ ಹಲ್ಲೆ ನಡೆಸುವ, ಹತ್ಯೆಗೈಯುವ ಕ್ರೌರ್ಯ ತಾಂಡವವಾಡುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ಜನತೆಯು ಭಯದಲ್ಲಿ ಬದುಕುವ ವಾತಾವರಣ ನಿರ್ಮಾಣವಾಗುತ್ತಿದೆ. ಮತ್ತೆ ಮತ್ತೆ ನೆನೆಯಲೇಬೇಕಾದ ಸಾಮ್ರಾಟ ಅಶೋಕನ ಶಿಲಾಶಾಸನಗಳು:

ಕಳಿಂಗ ಯುದ್ಧದ ಹಿಂಸೆ ಮತ್ತು ಭೀಕರತೆಗೆ ಮನನೊಂದು ಬುದ್ಧನ ಕಾರುಣ್ಯದ ತತ್ವಗಳನ್ನು ಅವಲಂಬಿಸಿದವನು ಸಾಮ್ರಾಟ ಅಶೋಕ. ಮುಂದೆ ಇಡೀ ತನ್ನ ಸಾಮ್ರಾಜ್ಯವನ್ನು ಬುದ್ಧಮಯಗೊಳಿಸಿದ್ದು, ಬುದ್ಧನ ಸಂದೇಶಗಳನ್ನು ಪಸರಿಸಲು ತನ್ನೆರಡು ಮಕ್ಕಳನ್ನು ವಿದೇಶಗಳಿಗೂ ಕಳಿಸಿದುದು ಇತಿಹಾಸ. ಅಶೋಕನ ಹಲವು ಶಿಲಾಶಾಸನಗಳು ಸಹಿಷ್ಣುತೆಯ ಮಹತ್ವವನ್ನು ಸಾರುತ್ತವೆ. ಮಾತ್ರವಲ್ಲ ಅಶೋಕನ ಆಡಳಿತ ಹೇಗಿತ್ತು ಎಂಬ ಅರಿವನ್ನು ನೀಡುತ್ತವೆ. ಅವುಗಳಲ್ಲಿ ಎರಡನ್ನೂ ಇಲ್ಲಿ ಉಲ್ಲೇಖಿಸಬಹುದು. ಏಳನೇ ಶಿಲಾಶಾಸನದಲ್ಲಿ ತನ್ನ ಸಾಮ್ರಾಜ್ಯದ ಎಲ್ಲೆಡೆಯಲ್ಲಿಯೂ ಎಲ್ಲ ವರ್ಣ, ಜಾತಿ, ಪಂಥದವರೂ ಸೌಹಾರ್ದದಿಂದ ಸಮರಸದಿಂದ ಬದುಕಬೇಕೆಂಬುದೇ ದೇವರಿಗೆ ಪ್ರಿಯನಾದ ದೊರೆ ಪ್ರಿಯದರ್ಶಿಯ ಆಪೇಕ್ಷೆ ಎಂದಿದ್ದಾನೆ. ಹನ್ನೆರಡನೇ ಶಿಲಾಶಾಸನವಂತೂ ಸಹಿಷ್ಣುತೆಯ ಮಹತ್ವವನ್ನು ಇನ್ನೂ ಸ್ಪಷ್ಟ ಮಾತುಗಳಲ್ಲಿ ಸಾರುತ್ತದೆ. ಅದು ಹೀಗಿದೆ: ಸ್ವಧರ್ಮವನ್ನು ಪ್ರಶಂಸಿಸಿ, ಪರಧರ್ಮವನ್ನು ನಿಂದಿಸುವ ಅಥವಾ ಪರಧರ್ಮವನ್ನು ಕುರಿತು ಅನಾವಶ್ಯಕವಾಗಿಯೂ, ಅಪ್ರಾಸಂಗಿಕವಾಗಿಯೂ, ಲಘುವಾಗಿ ಮಾತನಾಡದಂತೆ ಮಾತಿನಲ್ಲಿ ಸಂಯಮವನ್ನು ಕಾಪಾಡಿಕೊಳ್ಳಬೇಕು. ಉಚಿತ ಸಂದರ್ಭಗಳಲ್ಲಿ ಪರಧರ್ಮಾನುಯಾಯಿಗಳನ್ನು ತಕ್ಕ ರೀತಿಯಲ್ಲಿ ಸತ್ಕರಿಸಿ ಗೌರವಿಸಬೇಕು. ಹೀಗೆ ನಡೆಯುವುದರಿಂದ ತನ್ನ ಸ್ವಧರ್ಮವನ್ನೇ ಗೌರವಿಸುವುದಂತಾಗುವುದಲ್ಲದೆ ಪರಧರ್ಮದವರಿಗೆ ಸಹಾಯ ಮಾಡಿದಂತಾಗುತ್ತದೆ. ತದ್ವಿರುದ್ಧವಾಗಿ ವರ್ತಿಸುವವರು ತಮ್ಮ ಸ್ವಧರ್ಮಕ್ಕೂ ಹಾನಿಯನ್ನುಂಟು ಮಾಡುವರು. ಯಾರು ಸ್ವಧರ್ಮ ಶ್ರದ್ಧೆಯಿಂದ ಪರಧರ್ಮವನ್ನು ನಿಂದಿಸಿ ಸ್ವಧರ್ಮವನ್ನು ಗೌರವಿಸುವರೋ, ತಮ್ಮ ಸ್ವಧರ್ಮವು ಪರಧರ್ಮಗಳಿಗಿಂತ ಉತ್ತಮವೆಂದು ಸ್ವಧರ್ಮ ಪ್ರಶಂಸೆ ಮಾಡುವರೋ ಅಂಥವರು ನಿಶ್ಚಯವಾಗಿಯೂ ತಮ್ಮ ಸ್ವಧರ್ಮಕ್ಕೆ ಹಾನಿಯನ್ನುಂಟುಮಾಡುವರು. ಸರ್ವಧರ್ಮ ಸಮನ್ವಯವೇ ಶ್ರೇಷ್ಠವಾದುದು. ಅಶೋಕ ಚಕ್ರವರ್ತಿಯು ತನ್ನ ಆಳ್ವಿಕೆಯ ಕಾಲಘಟ್ಟದಲ್ಲಿ ಇಂತಹ ಶಾಸನಗಳನ್ನು ಬರೆಸಲು ಹಾಗೂ ನಿಜದಲ್ಲಿ ತಾನು ಹಾಗೆಯೇ ನಡೆದುಕೊಳ್ಳಲು ಪ್ರೇರಣೆ ಬುದ್ಧತತ್ವ. ಇದನ್ನು ಹೃದಯಾಂತರಾಳಕ್ಕೆ ಅಂತರ್ಗತಗೊಳಿಸಿಕೊಂಡ ಕಾರಣದಿಂದ ಆತನ ಮನಸ್ಸು ‘‘ಎಲ್ಲಾ ಜನರ ಕಲ್ಯಾಣವೇ ನನ್ನ ಗುರಿ. ಎಲ್ಲ ಮತದವರು ಸೌಹಾರ್ದತೆಯಿಂದ ಬಾಳಲಿ. ಸರ್ವಧರ್ಮ ಸಮನ್ವಯವೇ ಶ್ರೇಷ್ಠ’’ ಎಂಬ ಉದಾತ್ತ ಮೌಲ್ಯಗಳನ್ನು ಸಾರಲು ಸಾಧ್ಯವಾಯಿತು. ಇದು ಈ ಕ್ಷಣಕ್ಕೂ ನಮ್ಮ ದೇಶಕ್ಕೆ ಮಾತ್ರವಲ್ಲ ಜಗತ್ತಿಗೆ ಅತ್ಯಗತ್ಯವೆನಿಸುತ್ತದೆ. ಆಧುನಿಕ ಬೋಧಿಸತ್ವ ಬಾಬಾಸಾಹೇಬರ ಆಶಯ :

ಬುದ್ಧ ತನ್ನ ಸಂಪರ್ಕಕ್ಕೆ ಬಂದವರಿಗೆ ಹೇಳುತ್ತಿದ್ದುದು ‘‘ಹೆಚ್ಚು ಹೆಚ್ಚು ಪ್ರಜ್ಞಾವಂತರಾಗಿರಿ. ಸದಾಕಾಲ ಎಚ್ಚರದಿಂದಿರಿ. ಪ್ರಶ್ನಿಸದೆ, ನಿಮಗೆ ಮನವರಿಕೆಯಾಗದೆ ಯಾವುದನ್ನೂ ಒಪ್ಪಬೇಡಿ. ನಿಮಗೂ ಇತರರಿಗೂ ಒಳಿತಾಗುವುದನ್ನೇ ಅನುಸರಿಸಿ. ನಿಮಗೆ ನೀವೇ ಬೆಳಕು’’ ಎಂಬುದಾಗಿ. ಬುದ್ಧನ ಬೆಳಕಿನಲ್ಲಿ ತನ್ನ ವಿಮೋಚನೆ ಮಾತ್ರವಲ್ಲದೆ ಸಮುದಾಯದ ವಿಮೋಚನೆಯ ಕನಸನ್ನು ಕಂಡವರು ಬಾಬಾಸಾಹೇಬ್ ಅಂಬೇಡ್ಕರ್. ಅವರು ತಮ್ಮ ಅಧ್ಯಯನದ ಮೂಲಕ ಬುದ್ಧತತ್ವದ ಸಾರಾಂಶವನ್ನು ಸಂಕ್ಷಿಪ್ತವಾಗಿ ಗುರುತಿಸಿರುವಂತೆ ನೈತಿಕತೆಯೇ ಧಮ್ಮ, ದೇವರಿಲ್ಲದ ಕಾರಣ ನೈತಿಕತೆಯೇ ದೇವರ ಸ್ಥಾನವನ್ನು ಪಡೆಯುತ್ತದೆ. ದೇವರನ್ನು ಸಂತೃಪ್ತಿ ಪಡಿಸುವುದಕ್ಕಾಗಿ ಮಾತ್ರವೇ ಮನುಷ್ಯ ನೈತಿಕತೆ ಉಳ್ಳವನಾಗಬೇಕಾಗಿಲ್ಲ. ತನ್ನ ಒಳ್ಳೆಯದಕ್ಕಾಗಿಯೇ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಪ್ರೀತಿಸಬೇಕು. ನಿಜವಾದ ಧರ್ಮ ಮಾನವನ ಹೃದಯದಲ್ಲಿದೆ ಶಾಸ್ತ್ರಗಳಲ್ಲಿ ಅಲ್ಲ.ನೈತಿಕತೆ ಜೀವನದ ಆದರ್ಶವಾದರೆ ಸಾಲದು. ಎಲ್ಲಾ ಮಾನವರು ಸಮಾನರು. ಎಲ್ಲರ ಬಗೆಗೂ ಮೈತ್ರಿ ಇರಬೇಕು. ಶತ್ರುವಿನ ಬಗೆಗೂ ಮೈತ್ರಿ ಇರಬೇಕು. ಶೀಲವಿಲ್ಲದ ಜ್ಞಾನ ಅಪಾಯಕಾರಿ. ಯಾವುದೂ ನಿರ್ದೋಷವಲ್ಲ. ಯಾವುದೂ ಸದಾ ಬದ್ಧವಲ್ಲ. ಪ್ರತಿಯೊಂದು ಕೂಡ ವಿಚಾರಣೆಗೂ ಪರಿಶೀಲನೆಗೂ ಅಧೀನವಾಗಿವೆ. ಯಾವುದೂ ಅಂತಿಮವಲ್ಲ. ಯಾವುದೂ ಸನಾತನವಲ್ಲ ಅಥವಾ ಶಾಶ್ವತವಲ್ಲ. ಎಲ್ಲವೂ ಪರಿವರ್ತಶೀಲವಾದದ್ದು.ಗೆದ್ದವನು ಸೋತವನನ್ನು ಧರ್ಮದಿಂದ ಕಾಣಬೇಕು ಬಾಬಾಸಾಹೇಬರ ಈ ಗ್ರಹಿಕೆಯನ್ನು ನಾವು ಅಂತರ್ಗತವಾಗಿಸಿಕೊಂಡರೆ ಸಹಿಷ್ಣುತೆ ತಾನಾಗಿಯೇ ನಮ್ಮ ಜೀವನ ವಿಧಾನದ ಭಾಗವಾಗುವುದರಲ್ಲಿ ಸಂದೇಹವಿಲ್ಲ. ಆಧುನಿಕ ಬೋಧಿಸತ್ವ ಎಂದೇ ಗೌರವಿಸಲ್ಪಡುವ ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತದ ಸಂವಿಧಾನದಲ್ಲೂ ಇವುಗಳನ್ನು ಅಳವಡಿಸಿದ್ದಾರೆ.

ಸಹಿಷ್ಣುತೆಗೆ ಸಾಕ್ಷಿಪ್ರಜ್ಞೆಯಾಗಿದ್ದ ಬುದ್ಧನ ವಿಚಾರ ಎಂದರೆ ಅದು ನುಡಿಗೆ ಸಂಬಂಧಿಸಿದ್ದಲ್ಲ, ನಡೆಗೆ ಸಂಬಂಧಿಸಿದ್ದು. ಅಸಹಿಷ್ಣುತೆಯ ಜಗತ್ತಿಗೆ ಬುದ್ಧ ಎಂದೆಂದಿಗೂ ಪ್ರಸ್ತುತನಾಗುವುದು ಈ ಕಾರಣಗಳಿಗಾಗಿಯೆ.

Writer - ಡಾ. ಎಸ್. ನರೇಂದ್ರಕುಮಾರ್

contributor

Editor - ಡಾ. ಎಸ್. ನರೇಂದ್ರಕುಮಾರ್

contributor

Similar News