ನಾಳೆಯೇ ಬಿಜೆಪಿಗೆ ಸೇರ್ಪಡೆ: ಬಸವರಾಜ ಹೊರಟ್ಟಿ

Update: 2022-05-16 11:43 GMT

ಬೆಂಗಳೂರು: ವಿಧಾನಪರಿಷತ್ ಸದಸ್ಯ ಸ್ಥಾನ ಹಾಗೂ ಸಭಾಪತಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿರುವ ಬಸವರಾಜ ಹೊರಟ್ಟಿ ಅವರು, ನಾಳೆಯೇ (ಮಂಗಳವಾರ) ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದ್ದಾರೆ. 

ವಿಧಾನಸೌಧದ ಸಭಾಪತಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೊರಟ್ಟಿ, ನಾಳೆ ಬಿಜೆಪಿ ಕಚೇರಿಯಲ್ಲಿ ಸೇರ್ಪಡೆಯಾಗುವುದಾಗಿ ಹೇಳಿದರು. 

'ವಿಧಾನ ಪರಿಷತ್ ಸಚಿವಾಲಯದ ಆಡಳಿತದಲ್ಲಿ ಪ್ರಾಮಾಣಿಕ ಪಾರದರ್ಶಕತೆಗೆ ಆದ್ಯತೆ ನೀಡಿದ್ದೇನೆ. ಕಲುಷಿತವಾದ ರಾಜಕಾರಣದಲ್ಲಿ ನಮ್ಮಂತವರಿಗೆ ನೋವು ಆಗಿದೆ. ಆದರೆ ಮನಸ್ಸು ಇಲ್ಲದೆ ಇದ್ದರೂ ರಾಜಕೀಯದಲ್ಲಿ ಇರಬೇಕಾಗುತ್ತದೆ' ಎಂದರು.

ಇದನ್ನೂ ಓದಿ... ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಸವರಾಜ ಹೊರಟ್ಟಿ

'ಬಿಜೆಪಿ ಸೇರ್ಪಡೆ ಸಂಬಂಧಿಸಿದಂತೆ ಯಾವುದೇ ಷರತ್ತು ಹಾಕಿಲ್ಲ. ಕೇಂದ್ರ ಸಚಿವ ಅಮಿತ್ ಶಾ ಭೇಟಿ ಸಂದರ್ಭದಲ್ಲಿ ಯಾವುದೇ ಚರ್ಚೆ ಆಗಿಲ್ಲ'  ಸ್ಪಷ್ಟಪಡಿಸಿದರು.

‘ದೇವೇಗೌಡ ಅವರು ನಮಗೆಲ್ಲರಿಗೂ ಹಿರಿಯರು. ಅವರ ಮಾರ್ಗದರ್ಶನದಲ್ಲಿ ನಾನು ಬೆಳೆದೆ. ದೇವೇಗೌಡ ಹಾಗೂ ಕುಮಾರಸ್ವಾಮಿ ನನ್ನನ್ನು ಅವರ ಕುಟುಂಬದ ಸದಸ್ಯರಂತೇ ನೋಡಿಕೊಂಡರು. ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡುವ ಧೈರ್ಯ ಇಲ್ಲದ ಕಾರಣ ಅವರನ್ನು ಭೇಟಿ ಮಾಡಿಲ್ಲ. ಅವರಿಗೊಂದು 10 ಪುಟಗಳ ಪತ್ರವನ್ನು ಬರೆದಿದ್ದೇನೆ. ಕುಮಾರಸ್ವಾಮಿ ಅವರಿಗೆ ರಾಜೀನಾಮೆ ವಿಷಯ ತಿಳಿಸಿದ್ದು,  ಇಬ್ಬರ ಬಗ್ಗೆಯೂ ಬೇಸರವಿಲ್ಲ. ದೇವೇಗೌಡರ ಮಾರ್ಗದರ್ಶನ ಮುಂದೆಯೂ ಬೇಕು. ಅವರು ಪಕ್ಷಾತೀತವಾಗಿ ಮಾರ್ಗ ದರ್ಶನ ನೀಡುತ್ತಾರೆ’ ಎಂದು ಹೊರಟ್ಟಿ ತಿಳಿಸಿದರು.

ಜೆಡಿಎಸ್ ತೊರೆದು ಬಿಜೆಪಿ ಸೇರಲು ಮುಂದಾಗಿದ್ದ ಹೊರಟ್ಟಿ , ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಮೇ 18ಕ್ಕೆ  ರಾಜೀನಾಮೆ ನೀಡುವ ಕುರಿತು ತಿಳಿಸಿದ್ದರು. ಇದೀಗ ತುರ್ತು ಪತ್ರಿಕಾಗೋಷ್ಠಿ ನಡೆಸಿರುವ ಅವರು, ವಿಧಾನಪರಿಷತ್ ಸದಸ್ಯ ಸ್ಥಾನ ಹಾಗೂ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News