ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಅಂಕಿತ ಬೇಡ: ಕ್ರೈಸ್ತ ಸಮುದಾಯದಿಂದ ರಾಜ್ಯಪಾಲರಿಗೆ ಮನವಿ

Update: 2022-05-16 15:49 GMT

ಬೆಂಗಳೂರು, ಮೇ 16: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಮಸೂದೆ ಜಾರಿಯ ಸುಗ್ರೀವಾಜ್ಞೆಗೆ ಅಂಕಿತ ಹಾಕದಂತೆ ಕ್ರೈಸ್ತ ಸಮುದಾಯದ ಧರ್ಮ ಗುರುಗಳು ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದರು.

ಸೋಮವಾರ ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ನೇತೃತ್ವದಲ್ಲಿ ಕ್ರೈಸ್ತ ಸಮುದಾಯದ ಹಲವು ಸದಸ್ಯರು ಇಲ್ಲಿನ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ, ಮನವಿ ಸಲ್ಲಿಕೆ ಮಾಡಿದರು.

ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಕ್ರೈಸ್ತ ಸಮುದಾಯವು ಒಮ್ಮತದಿಂದ ವಿರೋಧಿಸುತ್ತದೆ. ಈಗಾಗಲೇ ನಮ್ಮ ಸಂವಿಧಾನದ 25ನೆ ಅನುಚ್ಚೇದವು ಭಾರತದ ಪ್ರಜೆಗಳಿಗೆ ಯಾವುದೇ ಧರ್ಮವನ್ನು ಪ್ರತಿಪಾದಿಸಲು, ಆಚರಿಸಲು ಮತ್ತು ಅದನ್ನು ಪ್ರಕಟಿಸಲು ಹಕ್ಕುಗಳನ್ನು ನೀಡಿದೆ. ಅದೇರೀತಿ, 26ನೆ ಅನುಚ್ಛೇದವು, ಧಾರ್ಮಿಕ ವಿಷಯಗಳಲ್ಲಿ ವಿವಿಧ ಪಂಗಡಗಳು ತಮ್ಮದೆ ಆದ ನೀತಿ-ನಿಯಮ, ರೀತಿ ರಿವಾಜುಗಳನ್ನು ಹೊಂದಬಹುದು ಎಂದೂ ಸಹ ಸ್ಪಷ್ಟವಾಗಿ ಹೇಳಿದೆ ಎಂಬುದನ್ನು ನೀವು ಅವಲೋಕಿಸಬೇಕು ಎಂದು ನಿಯೋಗದ ಸದಸ್ಯರು ಅಭಿಪ್ರಾಯಪಟ್ಟರು.

ದೇಶದಾದ್ಯಂತ ಇರುವ ನಮ್ಮ ಕಥೋಲಿಕ್ ಆಸ್ಪತ್ರೆಗಳಲ್ಲಿ ಜಾತಿ, ಧರ್ಮದ ಭೇದವಿಲ್ಲದೆ ಲಕ್ಷಾಂತರ ಜನರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ನಮ್ಮ ಸೇವಾ ಇತಿಹಾಸದಲ್ಲೇ ಇದುವರೆಗೂ ಒಬ್ಬೇ ಒಬ್ಬ ರೋಗಿಯನ್ನು ಮತಾಂತರ ಮಾಡಿದ ನಿದರ್ಶನವಿಲ್ಲ. ನಾವು ಮಾಡುವುದು ಮಾನವೀಯ ಸೇವೆಯೇ ಹೊರತು, ಮತಾಂತರ ಉದ್ದೇಶವೆಂಬುದೇ ನಮಗಿಲ್ಲ. ಆದ್ದರಿಂದ ರಾಜ್ಯದಲ್ಲಾಗಲಿ ಅಥವಾ ದೇಶದಲ್ಲಾಗಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು.

ದೇಶದ ಸ್ವಾತಂತ್ರ್ಯದ ನಂತರವೂ ಸಹ ಜನಸಂಖ್ಯೆಯಲ್ಲಿ ನಮ್ಮ ಸಮುದಾಯದ ಸಂಖ್ಯೆ ಕೇವಲ ಶೇ.1.8 ರಷ್ಟು ಮಾತ್ರವಿದೆ. ವಸ್ತುಸ್ಥಿತಿ ಹೀಗಿರುವಾಗ, ರಾಜ್ಯದಲ್ಲಿ ನಡೆದ ಒಂದೆರಡು ಘಟನೆಗಳನ್ನೇ ಮುಂದಿಟ್ಟುಕೊಂಡು, ಇಡೀ ಸಮುದಾಯವನ್ನೇ ದೂಷಿಸುವುದು ಸರಿಯಲ್ಲ. ಮತಾಂತರ ನಿಷೇಧ ಕಾಯ್ದೆಯಂತಹ ಸಂವಿಧಾನ ವಿರೋಧಿ, ಕರಾಳ ಕಾಯ್ದೆಯನ್ನು ಜಾರಿಗೆ ತಂದು ಕ್ರೈಸ್ತ ಸಮುದಾಯವನ್ನು ಗುರಿಯಾಗಿಸುವುದು ಇದರ ಉದ್ದೇಶವಾಗಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News