ಅಪಘಾತವಾದ ಬಿಬಿಎಂಪಿಯ ಕಸದ ಲಾರಿ ಬಿಡುಗಡೆಗೆ ಪೊಲೀಸರಿಗೆ ಹಣ: ಆರೋಪ

Update: 2022-05-16 17:09 GMT

ಬೆಂಗಳೂರು, ಮೇ 16: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸದ ಲಾರಿಗಳ ಅಪಘಾತ ಪ್ರಕರಣಗಳು ಸಂಭವಿಸಿದರೆ, ಸಂಚಾರ ಪೊಲೀಸರಿಗೆ ಅಂದು ಭಾರೀ ಭೋಜನ ಸಿಕ್ಕಿದಂತೆ ಎಂದು ಬಿಬಿಎಂಪಿ ಕಸ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ ವ್ಯಂಗ್ಯವಾಡಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನಲ್ಲಿ ಕಸದ ಲಾರಿಗಳಿಂದ ಅಪಘಾತಗಳು ನಡೆಯುತ್ತಿವೆ ಎನ್ನುವ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ, ವಾಸ್ತವದಲ್ಲಿ ನಮ್ಮ ಚಾಲಕರ ತಪ್ಪಿರುವುದಿಲ್ಲ. ಪೊಲೀಸರು ನಮ್ಮ ವಾಹನಗಳನ್ನು ಜಪ್ತಿ ಮಾಡಿದರೆ, ಅದನ್ನು ಹೊರತರಲು 1 ಲಕ್ಷ ರೂ. ಖರ್ಚು ಆಗುತ್ತದೆ. ಇವೆಲ್ಲವೂ ಲಂಚವೇ ಆಗಿದ್ದು, ಅಪಘಾತ ಸಂಭವಿಸಿದರೆ, ಪೊಲೀಸರಿಗೆ ಭಾರೀ ಭೋಜನ ಸಿಕ್ಕಿದಂತೆ ಎಂದು ಆರೋಪಿಸಿದರು.

ಬಿಬಿಎಂಪಿ ವ್ಯಾಪ್ತಿಯ ಕಸದ ಲಾರಿಗಳಿಂದ ಅನಾಹುತ ಪ್ರಕರಣಗಳಲ್ಲಿ ನಮ್ಮ ಚಾಲಕರ ತಪ್ಪಿಲ್ಲ. ನಮ್ಮ ಕಸದ ಲಾರಿಗಳಿಂದ ಅಪಘಾತ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರೆ, ನಾವೇ ಕ್ರಮ ತೆಗೆದುಕೊಳ್ಳುತ್ತೇವೆ. ಸುಖಾಸುಮ್ಮನೆ ಬಿಬಿಎಂಪಿ ಕಸ ಗುತ್ತಿಗೆದಾರರನ್ನು ಗುರಿ ಮಾಡಲಾಗುತ್ತಿದೆ. ನಮ್ಮ ಲಾರಿ ಜಪ್ತಿ ಮಾಡಿದರೆ ಬಿಡಿಸಿಕೊಳ್ಳಲು ಪೊಲೀಸರೇ ಲಂಚ ಪಡೆಯುತ್ತಾರೆ. ಲಕ್ಷ ರೂಪಾಯಿ ಕೊಡದೇ ನಮ್ಮ ಲಾರಿಗಳನ್ನು ಬಿಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಥಣಿಸಂಧ್ರದ ಘಟನೆಯಲ್ಲೂ ನಮ್ಮ ಚಾಲಕನ ತಪ್ಪಿರಲಿಲ್ಲ. ಆ ಡೆಲಿವರಿ ಬಾಯ್ ಮದ್ಯದ ಅಮಲಿನಲ್ಲಿ ಇರುವುದು ಪೊಲೀಸರಿಗೂ ಗೊತ್ತಾಗಿದೆ. ಆದರೆ, ವಿಮೆ ಸಿಗಲಿ ಎಂದೂ ಪೊಲೀಸರು ಆ ವಿಚಾರ ಕೈ ಬಿಡುವಂತೆ ಹೇಳಿದ್ದರು. ಮಾನವೀಯತೆ ದೃಷ್ಟಿಯಿಂದ ಹೋಗಲಿ ಬಿಡಿ ಎಂದೆವು. ಆದರೆ, ಮರುಕ್ಷಣವೇ ನಮ್ಮ ಚಾಲಕನಿಗೆ ಹೆವೀ ವೆಹಿಕಲ್ಸ್ ಬ್ಯಾಡ್ಜ್ ಇಲ್ಲ ಎಂದು ಹೇಳಲಾಯಿತು. ಆದರೆ, ಅದನ್ನು ನಾವು ಸಾಬೀತು ಮಾಡುತ್ತೇವೆ ಎಂದರು.

ಪರಿಶೀಲನೆ ಕಡ್ಡಾಯ

ಲಾರಿಗಳು 40 ಕೀ.ಮೀ ವೇಗ ಮೀರಿ ಚಲಿಸದಂತೆ ವ್ಯವಸ್ಥೆ ಆಗಬೇಕು. ಬಿಬಿಎಂಪಿ ಅಧಿಕಾರಿಗಳ ಮೂಲಕ ಮದ್ಯಪಾನ ಸೇವನೆ ಬಗ್ಗೆ ಆಲ್ಕೊಮೀಟರ್ ಮೂಲಕ ಪರಿಶೀಲನೆ ಮಾಡಿಸಬೇಕು ಎಂದು ನಗರ ಸಂಚಾರ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News