ಮೌನ ಸತ್ಯಾಗ್ರಹಕ್ಕೂ ಬೆಲೆ ಇಲ್ಲವೇ?

Update: 2022-05-16 18:39 GMT

ಮಾನ್ಯರೇ,

ಮಾಧ್ಯಮವು ಪ್ರಜಾಪ್ರಭುತ್ವದ 'ಕಾವಲು ನಾಯಿ' ಎಂಬ ಮಾತಿದೆ. ಪ್ರಜಾಪ್ರಭುತ್ವವನ್ನು ಕಾಯಬೇಕಾದ ಆ ಕಾವಲು ನಾಯಿ, ಸಾಕು ನಾಯಿ ಆಗುತ್ತಲೇ ಬೀದಿ ನಾಯಿ ಆಗುತ್ತಲಿರುವುದು ಅಪಾಯಕರ ಸಂಗತಿ. ಪ್ರಜಾಪ್ರಭುತ್ವದ ಆಶಯಗಳನ್ನು ಬಲಪಡಿಸಲು ಬಯಸುವ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲವಿದು.

 ''ಬೇಕೋ-ಬೇಡವೋ, ಆಧುನಿಕ ಜಗತ್ತಿನಲ್ಲಿ ರಾಜಕೀಯ ಆವರಿಸದ ಕ್ಷೇತ್ರವೇ ಇಲ್ಲ'' ಎಂದು ಹೇಳಿದ ಒಬ್ಬ ತಜ್ಞರ ಮಾತನ್ನು ನೆನಪಿಸಿಕೊಳ್ಳೋಣ. ಪ್ರಜಾಪ್ರತಿನಿಧಿಗಳ ಕೇಂದ್ರವಾಗಿರುವ ಶಾಸಕಾಂಗವು ಎಲ್ಲವೂ ತಾನೇ-ಎಲ್ಲವೂ ತನ್ನಿಂದಲೇ-ಎಲ್ಲವೂ ತನಗಾಗಿಯೇ ಎಂದು ಬಿಂಬಿಸಿಕೊಳ್ಳುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಕಾರ್ಯಾಂಗವೆಂಬುದು ಶಾಸಕಾಂಗದ ಭುಜದ ಮೇಲೆ ಕೈಯಿರಿಸಿ 'ನಿಮಗಾಗಿ ನಾನಿದ್ದೇನೆ' ಎಂದು ಶಾಸಕಾಂಗದ ಅನೈತಿಕತೆಯನ್ನೇ ನೈತಿಕತೆಯನ್ನಾಗಿಸುವ ದುಃಸ್ಥಿತಿ ಇಲ್ಲಿದೆ. ಇನ್ನು ನ್ಯಾಯಾಂಗವು, ಶಾಸಕಾಂಗ ಮತ್ತು ಕಾರ್ಯಾಂಗವನ್ನು ನಿರಂತರವಾಗಿ ಎಚ್ಚರಿಸುತ್ತಿದ್ದರೂ, ನ್ಯಾಯಾಂಗದ ತೀರ್ಪುಗಳು ಕಟ್ಟುನಿಟ್ಟಾಗಿ ಪಾಲನೆಯಾಗದೆ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲಾಗುತ್ತಿದೆ.
ಇಂತಹ ಅಪಾಯಕಾರಿ ಬೆಳವಣಿಗೆಯನ್ನು ಕಂಡ ನಾವು ಕೆಲವು ಸಮಾನ ಮನಸ್ಕರು ಸುದ್ದಿಮಾಧ್ಯಮಗಳ ವಿವೇಚನೆಯನ್ನು ಮತ್ತಷ್ಟು ಜವಾಬ್ದಾರಿಯುತಗೊಳಿಸಲು ದೂರದರ್ಶನ ಕಚೇರಿ ಮುಂದೆ ಆತ್ಮಾವಲೋಕನ ಮೌನ ಸತ್ಯಾಗ್ರಹ ನಡೆಸುವ ಮೂಲಕ ಅವರಿಗೆ ಮನವಿ ನೀಡಲು ದಿನಾಂಕ 11/05/2022ರಂದು 4 ಸುದ್ದಿವಾಹಿನಿಗಳ ಕಚೇರಿಗೆ ಹೋದೆವು. ಸುದ್ದಿವಾಹಿನಿಗಳ ಮುಖ್ಯಸ್ಥರು ನಮ್ಮ ಮೌನಸತ್ಯಾಗ್ರಹದ ಕಾಳಜಿಯನ್ನು ತಿರಸ್ಕಾರ ಭಾವನೆಯಿಂದ ಕಂಡಿದ್ದಲ್ಲದೆ, ಕಚೇರಿಯೊಳಕ್ಕೆ ಬರಬಾರದೆಂದು, ಯಾವುದೇ ಮನವಿಯನ್ನು ಸ್ವೀಕರಿಸುವುದಿಲ್ಲವೆಂದು ಹೇಳಿದರು. ಇದು ತೀರಾ ಬೇಸರದ ಸಂಗತಿ. ಹೈಗ್ರೌಂಡ್ ಪೊಲೀಸರು ನಮ್ಮನ್ನು ಠಾಣೆಗೆ ಕರೆದೊಯ್ದು 4/5 ತಾಸು ಕೂಡಿ ಹಾಕಿ ನಮಗೆ ಮಾನಸಿಕವಾಗಿ ಘಾಸಿಗೊಳಿಸಿದ್ದಾರೆ. ಇದೊಂದು ಆಘಾತಕಾರಿ ವಿಷಯ. ಹಾಗೆಂದು ಇಡೀ ವ್ಯವಸ್ಥೆಯನ್ನೇ ಕೆಟ್ಟದ್ದೆಂದು ನಾವು ದೂರಲಾರೆವು.
ಮತ್ತೊಂದೆಡೆ ಪೊಲೀಸರು ನಗು ನಗುತ್ತಲೇ ನಮ್ಮೊಂದಿಗೆ ಚರ್ಚಿಸಿ ನಮ್ಮ ಕಾಳಜಿಗೆ ಸ್ಪಂದಿಸುವ ಮೂಲಕ ಅನುಕೂಲ ಮಾಡಿಕೊಟ್ಟದ್ದು ವಿಶ್ವಾಸ ಮೂಡಿಸಿತು.
 ಯಾವುದೇ ರಾಜಕೀಯ ಉದ್ದೇಶವಿಲ್ಲದ ಸಾಮಾನ್ಯ ಜನರ ಕಳಕಳಿಯ ಮನವಿಗೆ ತಿರಸ್ಕಾರದ ನೋಟ ಎಷ್ಟರಮಟ್ಟಿಗೆ ಸರಿ?
ನಾವೇನು ಬೀದಿ ಪುಢಾರಿಗಳಲ್ಲ. ಘೋಷಣೆ ಕೂಗುವುದೇ ವೃತ್ತಿ ಮಾಡಿಕೊಂಡ ಯಾವುದೇ ಸಂಘಟನೆಯ ಧ್ವಜಾಧಾರಿಗಳಲ್ಲ.
ಒಂದು ಸುದ್ದಿ ವಾಹಿನಿಯ ಪ್ರತಿನಿಧಿ ನಮ್ಮ ಜೊತೆ 8/10 ನಿಮಿಷ ಇದ್ದರು. ಅವರು ನಮ್ಮನ್ನು ಯಾವುದೋ ವಿಚಿತ್ರ ಪ್ರಾಣಿಗಳನ್ನು ನೋಡುವಂತಿತ್ತು.
ಮಾನವೀಯ ಸಂಬಂಧಗಳಲ್ಲಿ ಪರಸ್ಪರ ಸಂವಹನ ಮತ್ತು ಸಂವೇದನೆ ಬಹುಮುಖ್ಯ. ಈ ಗುಣಗಳಿಗೆ ಮಹತ್ವ ಕೊಡಬೇಕೆಂದು ನಮ್ಮ ಸತ್ಯಾಗ್ರಹಕ್ಕೆ ಸುದ್ದಿ ಮಾಧ್ಯಮದವರು ಮತ್ತು ಸಾರ್ವಜನಿಕರು ಬೆಂಬಲ ಕೊಡಬೇಕೆಂದು ಆಶಿಸುತ್ತೇವೆ.

-ಡಾ.ವಡ್ಡಗೆರೆ ನಾಗರಾಜಯ್ಯ,
ಡಾ.ಬೈರಮಂಗಲ ರಾಮೇಗೌಡ,
ಸಿದ್ರಾಮಪ್ಪದಿನ್ನಿ, ಜಗನ್, ರೂಪೇಶ್ ಪುತ್ತೂರು,

ನಾರಾಯಣ ಡಿ., ಕೆ.ಪಿ. ನರಸಿಂಹಮೂರ್ತಿ ಉಮೇಶ್ ಎಚ್. ಸಿ., ಅಮಿತ್ ಸಿ.ಜಿ.
ಎಂ.ಯುವರಾಜ, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News