ಆ್ಯಸಿಡ್ ದಾಳಿ ಇದೇ ಕೊನೆಯಾಗಲಿ

Update: 2022-05-16 18:40 GMT

ಮಾನ್ಯರೇ,

ಪ್ರೀತಿ ನಿರಾಕರಿಸಿದರೆಂಬ ಕಾರಣಕ್ಕೆ 24 ವರ್ಷದ ಯುವತಿಯ ಮೇಲೆ ಎಪ್ರಿಲ್ 28ರಂದು ಆ್ಯಸಿಡ್ ಎರಚಿ ಪರಾರಿಯಾಗಿದ್ದ ಆರೋಪಿ ನಾಗೇಶ್‌ನನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದು ಶ್ಲಾಘನೀಯ. ಪ್ರೀತಿ, ಪ್ರೇಮ, ಕೌಟುಂಬಿಕ ಕಲಹಗಳಿಂದ ಈ ರೀತಿ ಆ್ಯಸಿಡ್ ದಾಳಿಗಳಾಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಅಮಾಯಕ ಯುವತಿಯರು, ಮಹಿಳೆಯರು ಇಂತಹ ವಿಕೃತ ಕೃತ್ಯಕ್ಕೆ ಬಲಿಯಾಗಿದ್ದು, ಇಂದಿಗೂ ತಮ್ಮ ಜೀವನವನ್ನೇ ಕಣ್ಣೀರಿನ ಜತೆ ಕಳೆಯುತ್ತಿದ್ದಾರೆ. ಈ ನಾಗರಿಕ ಸಮಾಜದಲ್ಲಿ ಮಹಿಳೆಯರನ್ನು ರಕ್ಷಿಸಬೇಕಾದ ಪುರುಷರೇ ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ನಡೆಸಿ ಅವರು ಜೀವನ ಪರ್ಯಂತ ನರಳುವಂತೆ ಮಾಡುತ್ತಿರುವುದು ದುರಂತ. ಒಬ್ಬಿಬ್ಬರು ಮಾಡುವ ಇಂತಹ ಕೃತ್ಯಗಳು ಇಡೀ ಪುರುಷ ಸಮುದಾಯವೇ ತಲೆ ತಗ್ಗಿಸುವಂತೆ ಮಾಡುತ್ತವೆ.

ಆ್ಯಸಿಡ್ ದಾಳಿಗೆ ಒಳಗಾದ ಅನೇಕ ಮಹಿಳೆಯರು ಇಂದಿಗೂ ಸರಿಯಾದ ಉದ್ಯೋಗವಿಲ್ಲದೆ ಜೀವನ ನಿರ್ವಹಣೆಗೆ ಕಷ್ಟಪಡುವಂತಾಗಿದೆ. ಆದರೂ ತಮ್ಮ ನೋವು ನುಂಗಿಕೊಂಡು ಜೀವನ ನಡೆಸುತ್ತಿದ್ದಾರೆ. ನಾಗೇಶ್‌ನಂತಹ ವಿಕೃತ ಮನಸ್ಥಿತಿಯವರಿಗೆ ತಕ್ಕ ಶಿಕ್ಷೆಯಾಗಬೇಕು. ಕಠಿಣ ಶಿಕ್ಷೆಯಾಗುವಂತಹ ಕಾನೂನುಗಳನ್ನು ಜಾರಿಗೊಳಿಸಬೇಕಾಗಿದೆ. ಈ ಶಿಕ್ಷೆಯನ್ನು ನೋಡಿ ಮುಂದೆ ಯಾರೊಬ್ಬರೂ ಇಂತಹ ಕೃತ್ಯಕ್ಕೆ ಕೈ ಹಾಕಬಾರದು. ಆಗ ಮಾತ್ರ ಇಂತಹ ಆ್ಯಸಿಡ್ ದಾಳಿಗಳು ಕೊನೆಯಾಗಲಿವೆ. ಯಥಾಪ್ರಕಾರ ಎಲ್ಲ ಅಪರಾಧ ಪ್ರಕರಣಗಳಂತೆ ಆ್ಯಸಿಡ್ ದಾಳಿಯನ್ನು ಪರಿಗಣಿಸಿದರೆ, ಜಾಮೀನು ಪಡೆದು ಮತ್ತೆ ತಮ್ಮ ವಿಕೃತಿ ಮೆರೆಯುತ್ತಾರೆ ಮತ್ತು ಈ ಸಮಾಜದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗುತ್ತದೆ. ಇನ್ನು ಮುಖ್ಯಮಂತ್ರಿಯವರು ಆ್ಯಸಿಡ್ ದಾಳಿ ಸಂತ್ರಸ್ತರಿಗೆ ನೀಡುತ್ತಿದ್ದ ಮಾಸಿಕ ಪಿಂಚಣಿ ಮೊತ್ತವನ್ನು 3,000 ರೂ.ನಿಂದ 10,000 ರೂ.ಗೆ ಹೆಚ್ಚಿಸಿದ್ದಲ್ಲದೆ, ಅವರಿಗೆ ನಿವೇಶನ, ಮನೆ ಮತ್ತು ಸ್ವಯಂ ಉದ್ಯೋಗಕ್ಕೆ 5 ಲಕ್ಷ ರೂ. ನೆರವು ನೀಡುವ ಬಗ್ಗೆ ಘೋಷಣೆ ಮಾಡಿರುವುದು ಸ್ವಾಗತಾರ್ಹ.
 

Writer - -ರತ್ನಾ ಮೂರ್ತಿ, ತುಮಕೂರು

contributor

Editor - -ರತ್ನಾ ಮೂರ್ತಿ, ತುಮಕೂರು

contributor

Similar News