ಕುಂದಾಪುರ ; ವೃದ್ಧೆಯ ಸರ ಅಪಹರಣ ಪ್ರಕರಣ: ಆರೋಪಿ ಸೆರೆ

Update: 2022-05-17 08:34 GMT
ತಿಲಕ್ ಕುಮಾರ್

ಕುಂದಾಪುರ : ಕಾಳವಾರ ನಡುಬೆಟ್ಟು ಎಂಬಲ್ಲಿ ಕಳೆದ ತಿಂಗಳು ನಡೆದ ವೃದ್ಧೆಯ ಚಿನ್ನದ ಸರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ತಿಲಕ್ ಕುಮಾರ್ ಬಂಧಿತ ಆರೋಪಿ. ಈತನಿಂದ ಕಳವುಗೈದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ವಿಳಾಸ ಕೇಳುವ ನೆಪದಲ್ಲಿ ಬೈಕಿನಲ್ಲಿ ಬಂದ ಅಪರಿಚಿತನೋರ್ವ ವೃದ್ದೆಯೊಬ್ಬರ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಎ.29 ಮಧ್ಯಾಹ್ನ  ಕಾಳಾವರ ನಡುಬೆಟ್ಟು ಎಂಬಲ್ಲಿ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಪದ್ದಮ್ಮ ಶೆಟ್ಟಿ(72) ಎಂಬವರು ಎ.29ರಂದು ನಡುಬೆಟ್ಟುವಿನಲ್ಲಿ ನಡೆದು ಹೋಗುತ್ತಿದ್ದಾಗ ವಿಳಾಸ ಕೇಳುವ ನೆಪದಲ್ಲಿ ಬಂದ ಬೈಕ್ ಸವಾರ, ಅವರ ಕುತ್ತಿಗೆ ಯಲ್ಲಿದ್ದ 75 ಸಾವಿರ ಮೌಲ್ಯದ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದನು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ತನಿಖೆ ನಡೆಸಿದ ಕುಂದಾಪುರ ಗ್ರಾಮಾಂತರ ಠಾಣೆ ಕಾನೂನು ಸುವ್ಯವಸ್ಥೆ ವಿಭಾಗದ ಎಸ್ಸೈ ನಿರಂಜನ್ ಗೌಡ, ತನಿಖಾ ಎಸ್ಸೈ ಸುಹಾಸ್ ಹಾಗೂ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಹಣ ಕಾಸಿನ ಸಮಸ್ಯೆಯಿಂದ ಈ ಕೃತ್ಯ ಎಸಗಿರುವುದಾಗಿ ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎಸ್ಪಿ ವಿಷ್ಣುವರ್ಧನ್ ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ವೃತ್ತ ನಿರೀಕ್ಷಕ ಕೆ.ಗೋಪಿಕೃಷ್ಣ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ವಿಶೇಷ ತಂಡದಲ್ಲಿ ಕುಂದಾಪುರ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಸಿಬ್ಬಂದಿ ರಾಜು ಬಿ., ನಾಗೇಶ್, ಅನಿಲ್ ಕುಮಾರ್ ಬಿ.ಎಸ್, ಚಿದಾನಂದ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಮತ್ತು ಶಿವಾನಂದ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News