×
Ad

ತಲಪಾಡಿ: ಬೆಳರಿಂಗೆ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿತ!

Update: 2022-05-17 15:56 IST

ಉಳ್ಳಾಲ : ಶಾಲೆ ಆರಂಭದ ದಿನದಂದೇ ಸುರಿದ ಭಾರೀ ಮಳೆಗೆ ಶಿಥಿಲಗೊಂಡಿದ್ದ ತಲಪಾಡಿ ಬಳಿಯ ಕಿನ್ಯ ಗ್ರಾಮದ ಬೆಳರಿಂಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ಧರೆಗುರುಳಿದ್ದು, ಅದೃಷ್ಟವಶಾತ್ ರಾತ್ರಿ ವೇಳೆ ಘಟನೆ ಸಂಭವಿಸಿದ್ದರಿಂದ ಅಪಾಯದಿಂದ ಪಾರಾಗುವಂತಾಗಿದೆ. 

ಕಿನ್ಯ ಗ್ರಾಮದ ಬೆಳರಿಂಗೆ ಹಿ.ಪ್ರಾ. ಶಾಲೆಯಲ್ಲಿ  ಸುಮಾರು 127 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಶಾಲಾ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಕಳೆದ ವರ್ಷವೇ ಹಲವು ಬಾರಿ ಶಿಕ್ಷಣ ಇಲಾಖಾಧಿಕಾರಿಗಳಿಗೆ ಶಾಲಾಭಿವೃದ್ಧಿ ಸಮಿತಿಯವರು ದೂರು ನೀಡಿದ್ದರು. ಈ ಸಂದರ್ಭ ಸ್ಥಳಕ್ಕೆ ಪರಿಶೀಲನೆಗೆ ಬಂದಿದ್ದ ಜಿಲ್ಲಾ ಪಂಚಾಯತ್ ಇಂಜಿನಿಯರ್ ನಿತಿನ್ ಎಂಬವರು ಕಟ್ಟಡ ಗಟ್ಟಿ ಮುಟ್ಟಾಗಿದೆ ಎಂದು ಸರ್ಟಿಫಿಕೇಟ್ ನೀಡಿ ವಾಪಾಸು ಆಗಿದ್ದಾರೆ ಎಂದು ಸ್ಥಳೀಯರ ಆರೋಪ ವ್ಯಕ್ತವಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಮೊದಲ ಮಳೆಗೇ ಶಿಥಿಲಗೊಂಡಿದ್ದ ಶಾಲಾ ಕಟ್ಟಡದ ಹಂಚಿನ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ. ಕಟ್ಟಡ ಶಿಥಿಲಗೊಂಡಿರುವುದನ್ನು ಗಮನಿಸಿದ್ದ ಶಾಲಾಭಿವೃದ್ಧಿ ಸಮಿತಿಯವರು ಸೋಮವಾರ ಆ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ತರಗತಿ ನೀಡದೆ ಪಕ್ಕದ ಮದರಸ ಕಟ್ಟಡದಲ್ಲಿ ತರಗತಿ ನೀಡಿ ಮುಂಜಾಗರೂಕತೆ ವಹಿಸಿದ್ದರು. ಘಟನಾ ಸ್ಥಳಕ್ಕೆ ಮಂಗಳವಾರ ಕಿನ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನಾದರೂ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಿ ಕೊಡುವಂತೆ ಶಾಲಾಭಿವೃದ್ಧಿ ಸಮಿತಿಯವರು ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News