ಪುರಾತನ ಐತಿಹ್ಯಗಳನ್ನು ಏಕಾಏಕಿ ತನಿಖೆ ಮಾಡಿ ಅಂದರೆ ಸಾಧ್ಯವೆ ?: ಯುಟಿ ಖಾದರ್ ಗೆ ಶಾಸಕ ಭರತ್ ಶೆಟ್ಟಿ ಪ್ರಶ್ನೆ

Update: 2022-05-17 16:15 GMT
ಭರತ್ ಶೆಟ್ಟಿ - ಯು.ಟಿ. ಖಾದರ್

ಸುರತ್ಕಲ್, ಮೇ 17: ಮಳಲಿ ಮಸೀದಿಗೆ ಪುರಾತನ ಐತಿಹ್ಯ ಇದ್ದು ಇದನ್ನು ಏಕಾಏಕಿ ತನಿಖೆ ಮಾಡಿ ಅಂದರೆ ಜಿಲ್ಲಾಡಳಿತದಿಂದ ಇದು ಸಾಧ್ಯವೇ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ ಭರತ್ ಶೆಟ್ಟಿ ಅವರು ಮಾಜಿ ಸಚಿವ ಯು.ಟಿ. ಖಾದರ್ ಅವರನ್ನು ಪ್ರಶ್ನಿಸಿದ್ದಾರೆ.

ಮಳಲಿ ಮಸೀದಿಯಲ್ಲಿ ಪುರಾತನ ಹಿಂದೂ ವಾಸ್ತು ವಿನ್ಯಾಸ ಕಂಡು ಬಂದಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ದ.ಕ. ಜಿಲ್ಲಾಧಿಕಾರಿ ತನಿಖೆ ಕೈಗೊಂಡಿದ್ದಾರೆ. ಇದನು ತಕ್ಷಣ ಬಿಟ್ಟು ಕೊಡಲು ಸಾಧ್ಯವೇ? ಜಿಲ್ಲಾಧಿಕಾರಿಯವರ ವಿರುದ್ಧ ಶಾಸಕ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿರುವುದು ಮುಸ್ಲಿಂ ಸಮುದಾಯದ ಲೀಡರ್ ಎಂದು ತೋರಿಸಿಕೊಳ್ಳಲು ಇರಬಹುದು ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದಾರೆ.

ಐನೂರು ವರ್ಷಗಳ ಹಿಂದಿನ ಮಸೀದಿಯ ಕೆತ್ತನೆ ಹಿಂದೂ ಶೈಲಿಯಲ್ಲಿಯೇ ಇರಬಹುದು ಎಂದಾದರೆ, ಹಿಂದೂ ಬಾಂಧವರ ಕೈಯ್ಯಲ್ಲಿ ಈ ಭೂಮಿಯೂ ಇದ್ದಿರಬಹುದಲ್ಲವೆ ? ಅಲ್ಲಿ ದೈವಸ್ಥಾನ ನಿರ್ಮಿಸಿ ಕಾಲಕ್ರಮೇಣ ವಂಶಾವಳಿ ಇಲ್ಲದ ಹಾಗೆ ಆಗಿರಬಹುದಲ್ಲೆವೇ ? ಈ ಬಗ್ಗೆಯೂ ಜಿಲ್ಲಾಧಿಕಾರಿ ಅವರಿಗೆ ಸಮಗ್ರವಾಗಿ ತನಿಖೆ ನಡೆಸಲು ಸಮಯಾವಕಾಶ ನೀಡಬೇಕಿದೆ. ಇದನ್ನೇ ಸರಕಾರ ಮಾಡಿದೆ. ಅವಸರ ಮಾಡಿದರೆ ನ್ಯಾಯಾಲಯದ ಕಟಕಟೆಯಲ್ಲಿ ಮತ್ತಷ್ಟು ವಿಳಂಬ ಆಗಬಹುದು. ಮಾಜಿ ಸಚಿವರು ಹೆಚ್ಚಿನ ಜ್ಞಾನ ಉಳ್ಳವರು ಈ ಬಗ್ಗೆ ಸ್ವಲ್ಪ ತಾಳ್ಮೆಯಿಂದ ಇರಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News