ಕುತುಬ್ ಮಿನಾರ್ ಬಳಿಯಿರುವ ʼ27 ಹಿಂದು, ಜೈನ ದೇವಳಗಳ ಮರುಸ್ಥಾಪನೆʼ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

Update: 2022-05-17 16:25 GMT

ಹೊಸದಿಲ್ಲಿ: ಮೆಹ್ರೋಲಿಯಲ್ಲಿರುವ ಕುತುಬ್ ಮಿನಾರ್ ಸಂಕೀರ್ಣದಲ್ಲಿ 27 ಹಿಂದು ಮತ್ತು ಜೈನ ದೇವಳಗಳನ್ನು ಮರುಸ್ಥಾಪಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ಇಲ್ಲಿನ ಸಾಕೇತ್ ನ್ಯಾಯಾಲಯ ಮೇ 24ಕ್ಕೆ ಮುಂದೂಡಿದೆ.

ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ ಖುವ್ವತ್-ಉಲ್-ಇಸ್ಲಾಂ ಮಸೀದಿಯನ್ನು ದೇವಸ್ಥಾನವೊಂದರ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಜೈನ ತೀರ್ಥಂಕರ ರಿಷಬ್ ದೇವ್ ಮತ್ತು ಹಿಂದುಗಳ ದೇವರಾದ ವಿಷ್ಣು ಪರವಾಗಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪ್ರಕಾರ ಖುವ್ವತ್-ಉಲ್-ಇಸ್ಲಾಂ ದೇವಸ್ಥಾನದ ನಿರ್ಮಾಣಕ್ಕಾಗಿ 27 ಹಿಂದು ಮತ್ತು ಜೈನ ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆಯಲ್ಲದೆ ಈ ಧ್ವಂಸಗೊಳಿಸಲಾದ ದೇವಸ್ಥಾನಗಳನ್ನು ಮರುಸ್ಥಾಪಿಸಬೇಕೆಂದು ಕೋರಲಾಗಿತ್ತು.

ವಿಷ್ಣು, ಶಿವ, ಗಣೇಶ, ಸೂರ್ಯ ದೇವರುಗಳು, ಗೌರಿ ಮಾತೆ, ಹನುಮಾನ್ ಮತ್ತು ಜೈನ ತೀರ್ಥಂಕರ ರಿಷಬ್ ದೇವ್ ಅವರಿಗೆ ಈ ಸಂಕೀರ್ಣದಲ್ಲಿ ದೇವಸ್ಥಾನಗಳನ್ನು ಮರುನಿರ್ಮಿಸಿ ಗೌರವಪೂರ್ವಕವಾಗಿ ಪ್ರತಿಷ್ಠಾಪನೆಗೊಳ್ಳುವ ಹಕ್ಕಿದೆ ಎಂದು ಅರ್ಜೀಯಲ್ಲಿ ವಿವರಿಸಲಾಗಿದೆ.

ಕುತುಬ್ ಸಂಕೀರ್ಣದೊಳಗಿನ ದೇವಳ ಸಂಕೀರ್ಣದ ನಿರ್ವಹಣೆ ಮತ್ತು ಆಡಳಿತವನ್ನು ಟ್ರಸ್ಟ್ ಕಾಯಿದೆ 1882 ಅನ್ವಯ ಟ್ರಸ್ಟ್ ಒಂದಕ್ಕೆ ಹಸ್ತಾಂತರಿಸುವಂತೆಯೂ ಹಾಗೂ ಪ್ರತಿವಾದಿಗಳಿಗೆ ಇಲ್ಲಿ ದುರಸ್ತಿ ಕಾರ್ಯಗಳು, ನಿರ್ಮಾಣಕ್ಕೆ ಹಸ್ತಕ್ಷೇಪ ನಡೆಸದಂತೆ ಖಾಯಂ ತಡೆಯಾಜ್ಞೆ ವಿಧಿಸಬೇಕೆಂದೂ ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News