ಮಲಯಾಳಂ ನಟ ದಿಲೀಪ್ ಸ್ನೇಹಿತನ ಬಂಧನ

Update: 2022-05-17 17:15 GMT

ಕೊಚ್ಚಿ,ಮೇ 17: ನಟಿಯೋರ್ವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಮಲಯಾಳಂ ನಟ ದಿಲೀಪ ಅವರ ಸ್ನೇಹಿತ ಹಾಗೂ ಹೋಟೆಲ್ ಮಾಲಿಕ ಶರತ್ ಜಿ.ನಾಯರ್ ಅವರನ್ನು ಕೇರಳ ಕ್ರೈಬ್ರಾಂಚ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಾಧಾರಗಳನ್ನು ನಾಶಗೊಳಿಸಿದ್ದ ಆರೋಪದಲ್ಲಿ ನಾಯರ್ ರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಲನಚಿತ್ರ ನಿರ್ದೇಶಕ ಬಾಲಚಂದರ್ ಅವರು ನೀಡಿರುವ ಹೇಳಿಕೆಯ ಆಧಾರದಲ್ಲಿ ತನಿಖಾ ತಂಡವು ದಿಲೀಪ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಅವರ ನಿವಾಸಕ್ಕೆ ಭೇಟಿ ನೀಡಿದ್ದ ವಿಐಪಿ ನಾಯರ್ ಆಗಿದ್ದರು ಎಂದು ಶಂಕಿಸಿದೆ.

ದಿಲೀಪ ಅವರೆದ್ದನ್ನಲಾದ ಆಡಿಯೊ ಕ್ಲಿಪ್ ಆಧಾರದಲ್ಲಿ ತನಿಖಾಧಿಕಾರಿಯ ದೂರಿನ ಮೇರೆಗೆ ಕ್ರೈಂ ಬ್ರಾಂಚ್ ಪೊಲೀಸರು ಜ.9ರಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಟಿವಿ ವಾಹಿನಿಯೊಂದು ಬಿಡುಗಡೆಗೊಳಿಸಿದ್ದ ಈ ಆಡಿಯೊ ಕ್ಲಿಪ್‌ನಲ್ಲಿ ದಿಲೀಪ್ ತನಿಖಾಧಿಕಾರಿಯ ಮೇಲೆ ಹಲ್ಲೆ ನಡೆಸಲು ಸಂಚು ನಡೆಸುತ್ತಿರುವುದು ಕೇಳಿಬಂದಿತ್ತು. ತನಿಖಾಧಿಕಾರಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನ್ನನ್ನು ಸುಳ್ಳೇ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದಿಲೀಪ್ ಆರೋಪಿಸಿದ್ದರು.

2017,ಫೆ.17ರಂದು ರಾತ್ರಿ ತಮಿಳು,ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿರುವ ನಟಿಯ ಕಾರಿಗೆ ನುಗ್ಗಿದ್ದ ಕೆಲವು ಆರೋಪಿಗಳು ಎರಡು ಗಂಟೆ ಕಾಲ ಕಾರಿನಲ್ಲಿಯೇ ಲೈಂಗಿಕ ದೌರ್ಜನ್ಯವೆಸಗಿ ಜನನಿಬಿಡ ಪ್ರದೇಶವೊಂದರಲ್ಲಿ ಇಳಿದು ಪರಾರಿಯಾಗಿದ್ದರು.
ನಟಿಯನ್ನು ಬ್ಲಾಕ್‌ಮೇಲ್  ಮಾಡಲು ಅರೋಪಿಯಲ್ಲೋರ್ವ ಇಡೀ ಘಟನೆಯನ್ನು ವೀಡಿಯೊ ಚಿತ್ರೀಕರಿಸಿದ್ದ.
ಪ್ರಕರಣದಲ್ಲಿ 10 ಆರೋಪಿಗಳಿದ್ದು,ಆರಂಭದಲ್ಲಿ ಏಳು ಜನರನ್ನು ಪೊಲೀಸರು ಬಂಧಿಸಿದ್ದರು. ನಂತರ ದಿಲೀಪ್ರನ್ನು ಬಂಧಿಸಲಾಗಿದ್ದು,ಬಳಿಕ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು.ದಿಲೀಪ್ ಮತ್ತು ನಾಯರ್ ಸೇರಿದಂತೆ ಇತರ ಐವರ ವಿರುದ್ಧ ಐಪಿಸಿಯ ವಿವಿಧ ಕಲಮ್‌ಗಳಡಿ ಪೊಲೀಸರು ಆರೋಪಗಳನ್ನು ಹೊರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News