ನಾಗಾಲ್ಯಾಂಡ್: 14 ನಾಗರಿಕರ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಸೇನೆ

Update: 2022-05-17 17:26 GMT

ಕೋಹಿಮಾ, ಮೇ 17: ನಾಗಾ ಲ್ಯಾಂಡ್‌ ನ ಮೊನ್ ಜಿಲ್ಲೆಯಲ್ಲಿ ಡಿಸೆಂಬರ್ನಲ್ಲಿ ನಡೆಸಿದ ಕಾರ್ಯಾಚರಣೆಯ ಸಂದರ್ಭ ಯೋಧರಿಂದ 14 ಮಂದಿ ಹತ್ಯೆಯಾದ ಘಟನೆ ಕುರಿತ ತನ್ನ ತನಿಖಾ ಕಲಾಪವನ್ನು ಭಾರತೀಯ ಸೇನೆ ಪೂರ್ಣಗೊಳಿಸಿದೆ ಎಂದು ಭಾರತೀಯ ಸೇನಾ ಪಡೆಯ ಪೂರ್ವ ಕಮಾಂಡ್ ವರಿಷ್ಠ ಸೋಮವಾರ ಹೇಳಿದ್ದಾರೆ. 

ಡಿಸೆಂಬರ್ 4ರಂದು ಸಂಜೆ ಕಲ್ಲಿದ್ದಲು ಗಣಿ ಕೆಲಸಗಾರರನ್ನು ಟಿರುವಿನಿಂದ ಓಟಿಂಗ್ ಗ್ರಾಮಕ್ಕೆ ಕೊಂಡೊಯ್ಯುತ್ತಿದ್ದ ಪಿಕ್-ಅಪ್ ವ್ಯಾನ್‌ ನ ಮೇಲೆ ಸೇನೆಯ 21 ಪ್ಯಾರಾ ವಿಶೇಷ ಪಡೆ ಗುಂಡು ಹಾರಿಸಿತ್ತು. ಇದರಿಂದ ಅದರಲ್ಲಿದ್ದ 6 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದರು. ಯೋಧರು ಕಾರ್ಮಿಕರ ಗುಂಪನ್ನು ದಂಗೆಕೋರರೆಂದು ತಪ್ಪಾಗಿ ಭಾವಿಸಿದ್ದರು. ಅನಂತರ ಪ್ರತಿಭಟನಕಾರರ ಗುಂಪೊಂದು ಸೇನೆಗೆ ಸೇರಿದ ವಾಹನಕ್ಕೆ ಬೆಂಕಿ ಹಚ್ಚಿತ್ತು. ಯೋಧರು ಮತ್ತೆ ಗುಂಡು ಹಾರಿಸಿದ್ದರು. ಇದರಿಂದ 7 ಮಂದಿ ನಾಗರಿಕರು ಮೃತಪಟ್ಟಿದ್ದರು. ಮೊನ್ನ ಜಿಲ್ಲಾ ಕೇಂದ್ರ ಕಚೇರಿಯಲ್ಲಿದ್ದ ಅಸ್ಸಾಂ ರೈಫಲ್ಸ್ ನ ಶಿಬಿರಕ್ಕೆ ಸ್ಥಳೀಯರು ಪ್ರವೇಶಿಸಿದ ಬಳಿಕ ಡಿಸೆಂಬರ್ 5ರಂದು ಅಪರಾಹ್ನ ಹಿಂಸಾಚಾರ ಭುಗಿಲೆದ್ದಿತ್ತು.

ಪ್ರತಿಭಟನಕಾರರ ಮೇಲೆ ಭದ್ರತಾ ಪಡೆ ಗುಂಡು ಹಾರಿಸಿದ ಪರಿಣಾಮ ಕನಿಷ್ಠ ಓರ್ವ ಸಾವನ್ನಪ್ಪಿದ್ದ. ನಾಗಾಲ್ಯಾಂಡ್ ಪೊಲೀಸರು ಸಲ್ಲಿಸಿದ ಪ್ರಥಮ ಮಾಹಿತಿ ವರದಿಯಲ್ಲಿ, ಸೇನೆಯ 21 ಪ್ಯಾರಾ ವಿಶೇಷ ಪಡೆ ನಾಗರಿಕರನ್ನು ಹತ್ಯೆಗೈಯುವ ಹಾಗೂ ಗಾಯಗೊಳಿಸುವ ಉದ್ದೇಶದಿಂದ ಗುಂಡು ಹಾರಿಸಿದೆ ಎಂದು ಹೇಳಲಾಗಿದೆ. ಈ ಹತ್ಯೆಯ ಕುರಿತು ತನಿಖೆ ನಡೆಸಲು ನಾಗಾಲ್ಯಾಂಡ್ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಿದ ಸಮಯದಲ್ಲೇ ಸೇನೆ ನ್ಯಾಯಾಂಗ ತನಿಖೆ ನಡೆಸಲು ಆರಂಭಿಸಿತ್ತು. ಸಿಟ್ ಈ ತಿಂಗಳ ಆರಂಭದಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ತನ್ನ ವರದಿ ಸಲ್ಲಿಸಿತ್ತು.

ಹತ್ಯೆಗೈದಿರುವುದು ‘‘ತಪ್ಪಾಗಿ ಗುರುತಿಸಿರುವ ಪ್ರಕರಣ ಹಾಗೂ ನಿರ್ಣಯದ ದೋಷ’’ ಎಂದು ಸೇನೆಯ ಪೂರ್ವ ಕಮಾಂಡ್ನ ವರಿಷ್ಠ ಜನರಲ್ ಆರ್.ಪಿ. ಕಾಲಿಟಾ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News