ಆರ್‌ಬಿಐ ಮಂಡಳಿಯಿಂದ ಆರೆಸ್ಸೆಸ್ ಸಿದ್ಧಾಂತವಾದಿ ಎಸ್.ಗುರುಮೂರ್ತಿ ವಜಾಕ್ಕೆ ಎಐಆರ್‌ಬಿಇಎ ಆಗ್ರಹ

Update: 2022-05-18 15:12 GMT

ಹೊಸದಿಲ್ಲಿ,ಮೇ 18: ಆರೆಸ್ಸೆಸ್ ಪರ ಬಲಪಂಥೀಯ ಸಿದ್ಧಾಂತವಾದಿ ಸ್ವಾಮಿನಾಥನ್ ಗುರುಮೂರ್ತಿ ಅವರನ್ನು ಆರ್‌ಬಿಐ ಮಂಡಳಿಯಿಂದ ವಜಾಗೊಳಿಸುವಂತೆ ದೇಶದ ಅತ್ಯಂತ ಹಳೆಯ ಕಾರ್ಮಿಕ ಒಕ್ಕೂಟಗಳಲ್ಲಿ ಒಂದಾಗಿರುವ ಅಖಿಲ ಭಾರತ ರಿಸರ್ವ್ ಬ್ಯಾಂಕ್ ಉದ್ಯೋಗಿಗಳ ಸಂಘ (ಎಐಆರ್‌ಬಿಇಎ)ವು ಆಗ್ರಹಿಸಿದೆ.
ಗುರುಮೂರ್ತಿ ಅವರು ತಮಿಳು ಸಾಪ್ತಾಹಿಕ ‘ತುಘ್ಲಕ್’ನ ಸಂಪಾದಕರೂ ಆಗಿದ್ದಾರೆ. ಪ್ರಚಲಿತ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಕುರಿತು ತೀಕ್ಷ್ಣ ಕಾರ್ಟೂನುಗಳು ಮತ್ತು ವಿಡಂಬನೆಗಳನ್ನು ಪ್ರಕಟಿಸುವಲ್ಲಿ ‘ತುಘ್ಲಕ್’ ಹೆಸರಾಗಿದೆ.ಮೋದಿ ಸರಕಾರವು ಆರ್‌ಬಿಐ ಕಾಯ್ದೆ 1934ರ ಕಲಂ 8ರಡಿ ಗುರುಮೂರ್ತಿಯವರನ್ನು ಆರ್‌ಬಿಐ ಮಂಡಳಿಗೆ ಸೇರ್ಪಡೆಗೊಳಿಸಿತ್ತು.ಗುರುಮೂರ್ತಿ ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳನ್ನು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ಅವಮಾನಿಸಿದ್ದಾರೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿರುವ ಎಐಆರ್ಬಿಇಎ,ಗುರುಮೂರ್ತಿಯವರ ಟೀಕೆಗಳಿಗಾಗಿ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ.


ಭಾರತೀಯ ಆರ್ಥಿಕತೆಯನ್ನು ಸದೃಢಗೊಳಿಸುವಲ್ಲಿ ಮತ್ತು ರಕ್ಷಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಗುರುಮೂರ್ತಿ ಅವಮಾನಿಸಿದ್ದಾರೆ ಎಂದು ಎಐಆರ್‌ಬಿಇಎ ಹೇಳಿದೆ.ಆರೆಸ್ಸೆಸ್ ಬೆಂಬಲಿಗ ಗುರುಮೂರ್ತಿ ಮೇ 8ರಂದು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ‘ಕೊಳಕು’ಎಂದು ಬಣ್ಣಿಸಿದ್ದರು ಎಂದು ಎಐಆರ್‌ಬಿಇಎ ಆರೋಪಿಸಿದೆ.ತುಘ್ಲಕ್ ಸಾಪ್ತಾಹಿಕದ 52ನೇ ವಾರ್ಷಿಕ ಸಮಾರಂಭದಲ್ಲಿ ಓದುಗರೊಬ್ಬರ ಪ್ರಶ್ನೆಗೆ ಉತ್ತರಿಸಿದ್ದ ಗುರುಮೂರ್ತಿ ಸಾರ್ವಜನಿಕ ವಲಯದ ಬ್ಯಾಂಕುಗಳ ಉದ್ಯೋಗಿಗಳನ್ನು ‘ಕೊಳಕು ’ಎಂದು ಕರೆದಿದ್ದರು. ನಿರ್ಮಲಾ ಸೀತಾರಾಮನ್ ಉಪಸ್ಥಿತಿಯಲ್ಲಿಯೇ ಅವರು ಈ ಟೀಕೆಯನ್ನು ಮಾಡಿದ್ದರು ಎನ್ನಲಾಗಿದೆ.ಗುರುಮೂರ್ತಿಯವರ ಟೀಕೆಗೆ ಆಘಾತ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿರುವ ಎಐಆರ್‌ಬಿಇಎ,‘ಇದು ಅತ್ಯಂತ ಆಘಾತಕಾರಿ, ಅಸಹ್ಯಕರ ಮತ್ತು ಖಂಡನೀಯವಾಗಿದೆ. ದೇಶದ ಬ್ಯಾಂಕ್ ಉದ್ಯೋಗಿಗಳ ಜೊತೆಗೆ ನಾವು,ಆರ್ಬಿಐ ಉದ್ಯೋಗಿಗಳು ಇದನ್ನು ಸ್ಪಷ್ಟವಾಗಿ ಖಂಡಿಸುತ್ತೇವೆ ’ಎಂದು ಹೇಳಿದೆ.

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ನೌಕರರ ನಿಸ್ವಾರ್ಥ ಸೇವೆಯನ್ನು ತನ್ನ ಪತ್ರದಲ್ಲಿ ಬೆಟ್ಟು ಮಾಡಿರುವ ಎಐಆರ್‌ಬಿಇಎ,ಬ್ಯಾಂಕ್ ಉದ್ಯೋಗಿಗಳನ್ನು ಸೀತಾರಾಮನ್ ಪ್ರಶಂಸಿಸಿದ್ದನ್ನು ಉಲ್ಲೇಖಿಸಿದೆ.
ಇಂತಹ ಉನ್ನತ ಹುದ್ದೆಗೆ ತಾನು ಅನರ್ಹ ಎನ್ನುವುದನ್ನು ಗುರುಮೂರ್ತಿ ಖುದ್ದಾಗಿ ಸಾಬೀತುಗೊಳಿಸಿದ್ದಾರೆ ಎಂದೂ ಅದು ಹೇಳಿದೆ.
ತನ್ನ ವಿರುದ್ಧ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ,ಬಿಜೆಪಿಯ ಆರ್ಥಿಕ ನೀತಿಗಳ ಹಿಂದಿನ ಮಿದುಳು ಎಂದೇ ಪರಿಗಣಿಸಲ್ಪಟ್ಟಿರುವ ಗುರುಮೂರ್ತಿ,ಆರ್‌ಬಿಐ ಮಂಡಳಿಯಲ್ಲಿರುವುದು ದೊಡ್ಡ ವಿಷಯವೇನಲ್ಲ ಎಂದು ಹೇಳಿದರು.


‘ಆರ್‌ಬಿಐ ಮಂಡಳಿಯಲ್ಲಿ ಪ್ರತಿ ಅಭಿಪ್ರಾಯವನ್ನು ವ್ಯಕ್ತಪಡಿಸಲು ಹೆಚ್ಚಿನವರು ಇರಲಿಲ್ಲ,ಹೀಗಾಗಿ ಹುದ್ದೆಯನ್ನು ಸ್ವೀಕರಿಸುವಂತೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು. ನನಗೆ ಅದರ ಅಗತ್ಯವಿರಲಿಲ್ಲ,ಅದನ್ನು ಬಯಸಿಯೂ ಇರಲಿಲ್ಲ. ದಶಕಗಳಿಂದಲೂ ಸರಕಾರದಲ್ಲಿ ಅಥವಾ ಸರಕಾರದಿಂದ ಯಾವುದೇ ಹುದ್ದೆಯನ್ನು ನಾನು ಪಡೆದುಕೊಂಡಿಲ್ಲ, ಪಡೆಯುವುದೂ ಇಲ್ಲ. ಆರ್‌ಬಿಐ ಮಂಡಳಿಯಲ್ಲಿ ನನ್ನನ್ನು ಪಾಶ್ಚಾತ್ಯ ಜಗತ್ತಿನ ಹಣಕಾಸು ಮಾಧ್ಯಮಗಳು ಟೀಕಿಸಿವೆ. ನೀವು ಕಮ್ಯುನಿಸ್ಟ್ ಎನ್ನುವುದು ಸಂತಸದ ವಿಷಯ,ನೀವು ಈಗ ಅವರ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು’ ಎಂದು ಹೇಳಿದರು.‘ನಿಮ್ಮ ಮಾಹಿತಿಗಾಗಿ ಹೇಳುತ್ತಿದ್ದೇನೆ. ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ಆರ್‌ಬಿಐ ನಿರ್ದೇಶಕ ಎಂದು ನನ್ನನ್ನು ಪರಿಚಯಿಸಲು ನಾನು ಎಂದೂ ಯಾರಿಗೂ ಅವಕಾಶ ನೀಡಿಲ್ಲ. ನಾನು ಆರ್‌ಬಿಐ ಮಂಡಳಿಯಲ್ಲಿ ಇರುವುದಕ್ಕೆ ನೀವು ತೀವ್ರ ಕಳವಳ ವ್ಯಕ್ತಪಡಿಸಿದ್ದೀರಿ. ನಿಮಗೆ ತಿಳಿದಿರಲಿಕ್ಕಿಲ್ಲ,ನಾನು ಆರ್‌ಬಿಐ ಮಂಡಳಿಯಲ್ಲಿ ಇಲ್ಲದಿದ್ದರೆ ಅದು ನನಗೆ ಹೆಚ್ಚಿನ ವ್ಯತ್ಯಾಸವನ್ನುಂಟು ಮಾಡುವುದಿಲ್ಲ’ ಎಂದು ಗುರುಮೂರ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News