ʼಶಿವಲಿಂಗʼ ಪತ್ತೆ ಕುರಿತು ಸಾಮಾಜಿಕ ತಾಣದಲ್ಲಿ ʼಆಕ್ಷೇಪಾರ್ಹʼ ಪೋಸ್ಟ್: ಪ್ರೊಫೆಸರ್‌ ವಿರುದ್ಧ ಪ್ರಕರಣ ದಾಖಲು

Update: 2022-05-18 13:07 GMT
Photo: Twitter

ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನ ಸಹಾಯಕ ಪ್ರಾಧ್ಯಾಪಕರೊಬ್ಬರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ, ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಕಂಡುಬಂದಿದೆ ಎನ್ನಲಾದ ವಿಚಾರದ ಕುರಿತು ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಪ್ರೊಫೆಸರ್ ರತನ್ ಲಾಲ್ ಅವರು 'ಶಿವಲಿಂಗ' ಎನ್ನಲಾದ ಫೋಟೋವನ್ನು ಪೋಸ್ಟ್ ಮಾಡಿ, ಅದರ ಜೊತೆಗೆ ಆಕ್ಷೇಪಾರ್ಹ ಕಾಮೆಂಟ್‌ ಗಳನ್ನು ಮಾಡಿದ್ದಾರೆ ಎನ್ನಲಾಗಿದೆ.

ಅವರ ವಿರುದ್ಧ ಐಪಿಸಿ ಸೆಕ್ಷನ್ 295-ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆದ ನಂತರ, "ಆನ್‌ಲೈನ್‌ನಲ್ಲಿ ಅನೇಕ ಬಳಕೆದಾರರಿಂದ ಬೆದರಿಕೆಗಳು ಬರುತ್ತಿದೆ" ಎಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದು, "ಭದ್ರತೆ" ಮತ್ತು ಸಹಾಯಕ್ಕಾಗಿ ಪೊಲೀಸರೊಂದಿಗೆ ಮನವಿ ಮಾಡಿದ್ದಾರೆ.

Indianexpress.com ನೊಂದಿಗೆ ಮಾತನಾಡಿದ ಅವರು, “ನನಗೆ ಇನ್ನೂ ಪೊಲೀಸರಿಂದ ಯಾವುದೇ ಸೂಚನೆ ಬಂದಿಲ್ಲ, ಸೂಚನೆ ಬಂದರೆ ನಾನು ಅವರೊಂದಿಗೆ ಸಹಕರಿಸುತ್ತೇನೆ. ಈ ಹೇಳಿಕೆಗಾಗಿ ನಾನು ಬೆದರಿಕೆ ಮತ್ತು ನಿಂದನೆಗಳನ್ನು ನಿರೀಕ್ಷಿಸಿರಲಿಲ್ಲ. ಹಿಂದೂ ಧರ್ಮದಲ್ಲಿ ಫುಲೆ, ರವಿದಾಸ್ ಮತ್ತು ಅಂಬೇಡ್ಕರ್ ಅವರನ್ನೊಳಗೊಂಡ ಸುದೀರ್ಘವಾದ ವಿಮರ್ಶೆಯ ಸಂಪ್ರದಾಯವಿದೆ. ಇಲ್ಲಿ, ನಾನು ಅದನ್ನು ವಿಮರ್ಶಿಸಿಲ್ಲ, ಇದು ಕೇವಲ ಒಂದು ಅವಲೋಕನ ಮತ್ತು ಅಭಿಪ್ರಾಯವಾಗಿದೆ. ನಮ್ಮ ದೇಶದಲ್ಲಿ ಎಲ್ಲಕ್ಕಿಂತ ಮೊದಲು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಬಾಯಿಗೆ ಪಟ್ಟಿ ಹಾಕಿಕೊಂಡು ಜನ ಏನು ಮಾಡುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News