ಇಸ್ರೇಲ್‌ ಸೈನಿಕರ ದಾಳಿಗೆ ಮೃತಪಟ್ಟ ಪತ್ರಕರ್ತೆ ಶಿರೀನ್ ಗೆ ಅಮೆರಿಕದಲ್ಲಿ ಶ್ರದ್ಧಾಂಜಲಿ

Update: 2022-05-18 16:53 GMT
PHOTO SOURCE:ALJAZEERA

ವಾಷಿಂಗ್ಟನ್, ಮೇ 18: ಕಳೆದ ವಾರ ಆಕ್ರಮಿತ ಪಶ್ಚಿಮದಂಡೆಯಲ್ಲಿ ಇಸ್ರೇಲ್ ಪಡೆಗಳ ಗುಂಡೇಟಿನಿಂದ ಮೃತಪಟ್ಟಿದ್ದ ಅಲ್ ಜಝೀರಾದ ಪತ್ರಕರ್ತೆ ಶಿರೀನ್ ಗೆ ಶ್ರದ್ಧಾಂಜಲಿ ಅರ್ಪಿಸುವ ಮತ್ತು ನ್ಯಾಯಕ್ಕಾಗಿ ಒತ್ತಾಯಿಸಲು ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಮಂಗಳವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಪೆಲೆಸ್ತೀನಿಯರ ಹಕ್ಕುಗಳ ಬೆಂಬಲಿಗರು ಮತ್ತು ಮಾಧ್ಯಮ ಸ್ವಾತಂತ್ರ್ಯದ ಪ್ರತಿಪಾದಕರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ. 

ಮಂಗಳವಾರ ರಾತ್ರಿ ನ್ಯಾಷನಲ್ ಪ್ರೆಸ್‌ ಕ್ಲಬ್‌ ನ ಹೊರಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಮೋಂಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಶಿರೀನ್ ಅವರನ್ನು ಬಾಲ್ಯಕಾಲದಿಂದಲೂ ನೋಡುತ್ತಿದ್ದೆವು. ಅವರು ನಮ್ಮೆಲ್ಲರ ಧ್ವನಿಯಾಗಿದ್ದರು. ಈಗ ನಮ್ಮ ಧ್ವನಿಯನ್ನು ಕಳೆದುಕೊಂಡಿರುವಂತೆ ಭಾಸವಾಗುತ್ತಿದೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರು ಸಂತಾಪ ಸಂದೇಶದಲ್ಲಿ ಹೇಳಿದರು. ಮಾಧ್ಯಮ ಎಂಬ ಬರಹ ಸ್ಪಷ್ಟವಾಗಿ ಕಾಣುವ ಜಾಕೆಟ್ ತೊಟ್ಟು ವರದಿಗಾರಿಕೆಯ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಶಿರೀನ್ ಹತ್ಯೆಗೈದಿರುವುದು ಅಂತಿಮ ಅನ್ಯಾಯವಾಗಿದೆ ಎಂದು ಅಮೆರಿಕದಲ್ಲಿ ನೆಲೆಸಿರುವ ಪೆಲೆಸ್ತೀನ್ ಮೂಲದ ಶಿಕ್ಷಕಿ ಸಲ್ಮಾ ಶನಾ ಹೇಳಿರುವುದಾಗಿ ಅಲ್ಜಝೀರಾ ವರದಿ ಮಾಡಿದೆ. 

ಪೆಲೆಸ್ತೀನಿಯರಿಗೆ ಆಗಿರುವ ಅನ್ಯಾಯದ ಬಗ್ಗೆ ಜಗತ್ತಿಗೆ ಮಾಹಿತಿ ನೀಡುತ್ತಿದ್ದಾಗ ಶಿರೀನ್ರನ್ನು ಹತ್ಯೆಗೈಯಲಾಗಿದೆ. ಅವರ ಹತ್ಯೆ ಮತ್ತು ಮೃತದೇಹದ ಅಂತಿಮ ಮೆರವಣಿಗೆ ಸಂದರ್ಭ ಇಸ್ರೇಲ್ ಪೊಲೀಸರು ನಡೆಸಿದ ದೌರ್ಜನ್ಯವನ್ನು ನಂಬಲು ಕಷ್ಟವಾಗಿದೆ ಎಂದು ಪೆಲೆಸ್ತೀನ್ ಬೆಂಬಲಿಗರಾದ ಲೀನಾ ಮುಸ್ಮಾರ್ ಹೇಳಿದ್ದಾರೆ. ಕಾರ್ಯಕ್ರಮದ ಅಂತ್ಯದಲ್ಲಿ, ಪೆಲೆಸ್ತೀನೀಯರ ಅನಧಿಕೃತ ರಾಷ್ಟ್ರಗೀತೆ ‘ನನ್ನ ತಾಯ್ನಾಡು’ ಹಾಡಿಗೆ ಸಭೆಯಲ್ಲಿದ್ದವರು ಧ್ವನಿಗೂಡಿಸಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News