ನಾರಾಯಣ ಗುರುಗಳಿಗೆ ಬಿಜೆಪಿ ಸರಕಾರದಿಂದ ನಿರಂತರ ಅವಮಾನ: ರಕ್ಷಿತ್ ಶಿವರಾಂ ಖಂಡನೆ

Update: 2022-05-19 06:32 GMT
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

ಮಂಗಳೂರು, ಮೇ 19: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದಿಂದ ಸಾಮಾಜಿಕ ಕ್ರಾಂತಿಯ ಹರಿಕಾರರು, ಮಾನವತಾವಾದಿ ಶ್ರೀ ನಾರಾಯಣ ಗುರುಗಳಿಗೆ ವ್ಯವಸ್ಥಿತವಾಗಿ ಅವಮಾನ ನಡೆಯುತ್ತಿದೆ ಇದು ಖಂಡನೀಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದ್ದಾರೆ.

ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಗಣರಾಜ್ಯೋತ್ಸವ ಪರೇಡ್ ನಿಂದ ಮೋದಿ ಸರಕಾರ ಹೊರಗಿಟ್ಟಿದ್ದು ಆಕಸ್ಮಿಕ ಅಲ್ಲ ಎನ್ನುವುದಕ್ಕೆ ನಾರಾಯಣ ಗುರುಗಳನ್ನು ಶಾಲಾ ಪಠ್ಯದಿಂದ ಹೊರಗಿಡುವ ಮೂಲಕ ರಾಜ್ಯದ ಬಿಜೆಪಿ‌ ಸರಕಾರ ಸಾಕ್ಷ್ಯ ಒದಗಿಸಿದೆ. ಈ ಮೂಲಕ ನಾಡಿಗೆ ಹಾಗೂ ಇತಿಹಾಸಕ್ಕೆ ದ್ರೋಹ ಬಗೆದಿದೆ ಎಂದು ರಕ್ಷಿತ್ ಶಿವರಾಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶ್ರೀ ನಾರಾಯಣ ಗುರುಗಳಿಗೆ ಬಿಜೆಪಿ ಸರಕಾರದಿಂದ ನಿರಂತರವಾಗಿ ಅವಮಾನವಾಗುತ್ತಿದೆ. ಬಿಜೆಪಿಗೆ  ಸಮಾನತೆಯ ರಾಜಕಾರಣ ಬೋಧಿಸಿದ ನಾರಾಯಣ ಗುರುಗಳು, ಸ್ವತಂತ್ರ ಹೋರಾಟದ ಸ್ಫೂರ್ತಿಯ ವ್ಯಕ್ತಿತ್ವಗಳಾದ ಭಗತ್ ಸಿಂಗ್, ಸುಭಾಷ್ ಚಂದ್ರ ಭೋಸ್ ಮುಂತಾದವರು ಇಷ್ಟವಾಗಲು ಸಾಧ್ಯವೇ ಇಲ್ಲ. ಶೋಷಿತ ಸಮುದಾಯಗಳಿಗೆ ಸ್ವಾಭಿಮಾನ, ಘನತೆಯ ಬದುಕನ್ನ ನೀಡಲು ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಮಹಾಪುರುಷರ ಇತಿಹಾಸವನ್ನ ಇಂದಿನ ಮಕ್ಕಳಿಗೆ ಅರಿವು ಮೂಡಿಸಬೇಕಿದೆ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟದ ವಿರುದ್ಧವಾಗಿದ್ದವರಿಂದ, ಜಾತಿ ಶ್ರೇಣೀಕೃತ ವ್ಯವಸ್ಥೆಯ ಪರವಾಗಿದ್ದವರಿಂದ ಹೆಚ್ಚೇನು ನಿರೀಕ್ಷಿಸಲು ಸಾಧ್ಯವಿಲ್ಲ. ಶ್ರೀ ನಾರಾಯಣ ಗುರುಗಳು, ಭಗತ್ ಸಿಂಗ್ ಹಾಗೂ ಇನ್ನಿತರ ಮಹನೀಯರು ಸಾಮಾಜಿಕ ಸೇವೆ, ತ್ಯಾಗ ಬಲಿದಾನವನ್ನ ಪಠ್ಯಪುಸ್ತಕದಿಂದ ಕೈ ಬಿಟ್ಟಿರುವುದು ಬಿಜೆಪಿ ಸರಕಾರ ಮಹಾಪುರುಷರಿಗೆ ಮಾಡಿದ ಅವಮಾನ. ಆದ್ದರಿಂದ ಕೂಡಲೇ ರಾಜ್ಯ ಸರಕಾರ ಪರಿಷ್ಕೃತ ಪಠ್ಯಪುಸ್ತಕವನ್ನ ತಡೆ ಹಿಡಿಯಬೇಕು. ಶ್ರೀ ನಾರಾಯಣ ಗುರು ಹಾಗೂ ಭಗತ್ ಸಿಂಗ್ ಸೇರಿದಂತೆ ಅನೇಕ ಮಹನೀಯರ ಸಾಧನೆ, ಜೀವನ ಚರಿತ್ರೆಯನ್ನ ಈ‌ ಹಿಂದೆ ಇದ್ದಂತೆ ಪಠ್ಯ ಪುಸ್ತಕ ರಚಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News