ಸೈಂಟ್ ಆ್ಯಗ್ನೆಸ್ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಅಂತರ್ ಕಾಲೇಜು ಉತ್ಸವ 'ಇಂಪೀರಿಯಾ-2022' ಉದ್ಘಾಟನೆ

Update: 2022-05-19 10:48 GMT

ಮಂಗಳೂರು, ಮೇ 19: ನಗರದ ಸ್ವಾಯತ್ತ ಶಿಕ್ಷಣ ಸಂಸ್ಥೆಯಾಗಿರುವ ಸೈಂಟ್ ಆ್ಯಗ್ನೆಸ್ ಕಾಲೇಜಿನಲ್ಲಿ ಇಂಪೀರಿಯಾ 2022 ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಉತ್ಸವವನ್ನು ಇಂಡಿಯನ್ ಐಡಲ್ ಖ್ಯಾತಿಯ ಯುವಗಾಯಕ ನಿಹಾಲ್ ತೌವ್ರೊ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸರಿಯಾಗಿ ಹುಡುಕಿದರೆ ಸಮಾಜದಲ್ಲಿ ಅವಕಾಶಗಳು ಸಾಕಷ್ಟಿವೆ. ಹುಡುಕುವ ಪ್ರಯತ್ನ ನಾವು ಮಾಡಬೇಕು. ಸಣ್ಣದಾಗಲಿ ದೊಡ್ಡದಾಗಲಿ ಅವಕಾಶ ಯಾವುದು ಸಿಕ್ಕರೂ ಬಳಸಿಕೊಳ್ಳಬೇಕು. ಸಣ್ಣ ಅವಕಾಶವೇ ಮುಂದಿನ ಮಹತ್ವದ ಯಶಸ್ಸಿಗೆ ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸೈಂಟ್ ಆ್ಯಗ್ನೆಸ್ ಸಂಸ್ಥೆಗಳ ಜೊತೆ ಕಾರ್ಯದರ್ಶಿ ಸಿಸ್ಟರ್ ಡಾ.ಲಿಡಿಯಾ ಎ.ಸಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಂಗಳೂರು ಬಹು ಪ್ರತಿಭೆಗಳ ಆಗರ. ಈ ಲವಲವಿಕೆಯ ನಗರದಲ್ಲಿ ಬೆಳೆಯುವ ಅವಕಾಶ ಬಹಳಷ್ಟಿವೆ. ನಾಯಕತ್ವದ ತರಬೇತಿ ನೀಡಬಹುದು. ಆದರೆ ಆ ಗುಣ ಆ ಮೊದಲೇ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಸೋಲೆಂಬುದು ಶಾಶ್ವತವಲ್ಲ. ಸತತ ಸಾಧನೆಯಿಂದ ಅದನ್ನು ಗೆಲುವಾಗಿ ಪರಿವರ್ತಿಸಲು ಸಾಧ್ಯ. ವಿದ್ಯಾರ್ಥಿನಿಯರಲ್ಲಿ ಅಂತಹ ಶ್ರಮ ಇರಬೇಕಾದುದು ಅವಶ್ಯ ಎಂದರು.

ಸೈಂಟ್ ಆ್ಯಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಡಾ.ಎಂ.ವೆನಿಸ್ಸಾ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಸಿಸ್ಟರ್ ಕಾರ್ಮೆಲ್ ರೀಟಾ, ಉಪಪ್ರಾಂಶುಪಾಲೆ ಸಿಸ್ಟರ್ ಕ್ಲೇರಾ ಎಸಿ, ಸ್ನಾತಕೋತ್ತರ ವಿಭಾಗದ ಸಂಯೋಜಕಿ ಸಿಸ್ಟರ್ ವಿನೋರಾ ಎಸಿ, ರಿಜಿಸ್ಟ್ರಾರ್ ಚಾರ್ಲ್ಸ್ ಪಾಯಸ್, ಸಹಸಂಯೋಜಕಿ ಅಮೋರಾ ಮೊಂತೇರೊ, ವಿದ್ಯಾರ್ಥಿನಿ ನಾಯಕಿ ರಿಯಾ ಲೀಲಿಯಾ ಸಿಕ್ವೇರ ಭಾಗವಹಿಸಿದ್ದರು.

ಕಾರ್ಯಕ್ರಮ ಸಂಯೋಜಕ ಡಾ.ಆರ್.ನಾಗೇಶ್ ಸ್ವಾಗತಿಸಿದರು. ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಿಕೆ ಪ್ರಜ್ವಲ್ ರಾವ್ ಎಚ್. ವಂದಿಸಿದರು. ವಿದ್ಯಾರ್ಥಿನಿಯರಾದ ದುಹಾ ಸಾಯೆದ್ ಮತ್ತು ನಂದನ ಕಾರ್ಯಕ್ರಮ ನಿರೂಪಿಸಿದರು.

 ಉತ್ಸವದಲ್ಲಿ ಥಿಮ್ಯಾಟಿಕ್ ನೃತ್ಯ, ಫೋಟೋಗ್ರಫಿ, ಬರವಣಿಗೆ, ಏಕವ್ಯಕ್ತಿ ಹಾಸ್ಯ, ಫ್ಯಾಷನ್ ಶೋ, ಶಾರ್ಕ್ಟಾಂಕ್, ಮೋಕ್ಪ್ರೆಸ್ ಹೀಗೆ ಏಳು ಪ್ರಕಾರಗಳಲ್ಲಿ ಸ್ಪರ್ಧೆಗಳು ನಡೆದವು. ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಅಂದು ಸಂಜೆ ಬ್ಯಾಟಲ್ ಆಫ್ ಬ್ಯಾಂಡ್ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಉಭಯ ಜಿಲ್ಲೆಗಳಿಂದ ಮಾತ್ರವಲ್ಲದೆ ದೇಶದ ನಾನಾ ರಾಜ್ಯಗಳಿಂದಲೂ ಕಾಲೇಜು ತಂಡಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News