ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ: ಪತ್ರಕರ್ತರ ಸಹಕಾರ ಸಂಘ ಸದಸ್ಯರು-ಸಹ ಸದಸ್ಯರಿಗೆ ವಿಸ್ತರಿಸಲು ಮನವಿ

Update: 2022-05-19 15:05 GMT

ಬೆಂಗಳೂರು, ಮೇ 19: ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ'ಯನ್ನು ಪತ್ರಕರ್ತರ ಸಹಕಾರ ಸಂಘದ ಸದಸ್ಯರು ಮತ್ತು ಸಹ ಸದಸ್ಯರಿಗೆ ವಿಸ್ತರಿಸಬೇಕು' ಎಂದು ಕೋರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಅವರಿಗೆ, ಸಂಘದ ಅಧ್ಯಕ್ಷ ರಾಘವೇಂದ್ರ ಕೆ. ತೊಗರ್ಸಿ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.  

ಗುರುವಾರ ವಾರ್ತಾ ಸೌಧದಲ್ಲಿ ಆಯುಕ್ತರನ್ನು ಖುದ್ದು ಭೇಟಿ ಮಾಡಿದ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು, ಸಂಘದ ಮನವಿ ಬಗ್ಗೆ ಸರಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ, ‘ಯಶಸ್ವಿನಿ ಯೋಜನೆಯು ಸಂಘದ ಸದಸ್ಯ ಹಾಗೂ ಸಹ ಸದಸ್ಯರಿಗೆ ಅನ್ವಯವಾಗದಿರುವ ಹಿನ್ನೆಲೆಯಲ್ಲಿ, ಪರ್ಯಾಯವಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ನೆರವನ್ನು ದೊರಕಿಸಿಕೊಡಬೇಕು' ಎಂದು ಕೋರಿದರು.

‘ಪತ್ರಕರ್ತರ ಸಹಕಾರ ಸಂಘ ವೃತ್ತಿನಿರತ ಪ್ರತಿಷ್ಠಿತ ಸಹಕಾರ ಸಂಘಗಳಲ್ಲಿ ಒಂದು. 73 ವರ್ಷಗಳಿಂದ ಸದಸ್ಯರಿಗೆ ಆರ್ಥಿಕ ಬೆಂಬಲ ನೀಡುತ್ತಾ ಬಂದಿದೆ. ಸದಾ ಗಡುವಿನೊಳಗೆ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಯುಳ್ಳ ಸಮಾಜಮುಖಿ ವೃತ್ತಿಯನ್ನೆ ಜೀವನಾಧಾರವಾಗಿ ಮಾಡಿಕೊಂಡಿರುವ ಪತ್ರಕರ್ತರು ಮತ್ತು ದಿನನಿತ್ಯ ಭರಪೂರ ಸುದ್ದಿ ಪೂರೈಸಲು ಪತ್ರಕರ್ತರಷ್ಟೇ ಮಹತ್ವದ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತೇತರರಾದ ಸಂಘದ ಸಹ ಸದಸ್ಯರಿಗೆ ಈ ಯೋಜನೆಯು ಬಹಳ ಉಪಕಾರಿಯಾಗಬಲ್ಲದು' ಎಂದು ಅವರು ಒತ್ತಾಯಿಸಿದರು.

ನಿಯೋಗದಲ್ಲಿ ಉಪಾಧ್ಯಕ್ಷ ಶಿವಣ್ಣ, ನಿರ್ದೇಶಕರಾದ ಯತಿರಾಜು, ಮೋಹನ್ ಕುಮಾರ್ ಬಿ.ಎಸ್., ಸಂಘದ ಕಾರ್ಯದರ್ಶಿ ಎಸ್.ತೇಜಸ್ವಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News