ಡಿ.ಎಸ್. ನಾಗಭೂಷಣ ನಿಧನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಸಂತಾಪ

Update: 2022-05-19 15:30 GMT

ಬೆಂಗಳೂರು, ಮೇ 19: ಲೇಖಕ ನಾಗಭೂಷಣ ಲೌಕಿಕದ ಯಾವ ಪ್ರಲೋಭನೆಗಳಿಂದಲೂ ವಿಚಲಿತಾರಾಗದೆ ಸತ್ಯ ನಿಷ್ಠುರಿಯಾಗಿ ಮಾತನಾಡಬಲ್ಲ ಅಪರೂಪದ ವ್ಯಕ್ತಿಯಾಗಿದ್ದರು ಎಂದು ವಿಮರ್ಶಕ ಎಸ್.ಆರ್. ವಿಜಯಶಂಕರ ಅಭಿಪ್ರಾಯಪಟ್ಟರು.

ಗುರುವಾರ ನಗರದ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಾದೇಶಿಕ ಕಚೇರಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಸಾಹಿತಿ ಡಿ.ಎಸ್. ನಾಗಭೂಷಣ ಅವರಿಗೆ ಸಂತಾಪ ಸೂಚಿಸಿ ಮಾತನಾಡಿದ ಅವರು, ಡಿ.ಎಸ್. ನಾಗಭೂಷಣ ವಿಮರ್ಶಾ ಕೃತಿಗಳಾದ 'ಗಮನ', 'ಅನೇಕ,’  'ಬೇರುಬಿಳಲು’ಗಳು ಅವರ ವಿಚಾರ-ವಿಮರ್ಶನ ಶಕ್ತಿಗೆ ಸಾಕ್ಷಿಯಾಗಿದೆ. ಸುಮಾರು 25 ಮುದ್ರಣಗಳಲ್ಲಿ 25 ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದ ಅವರ 'ಗಾಂಧಿಕಥನ' ಕೃತಿ ಹೊಸಕಾಲಕ್ಕೆ ಇನ್ನೊಮ್ಮೆ ಗಾಂಧಿಯನ್ನು ಪರಿಚಯಿಸಿತು ಎಂದರು.

ಭಿನ್ನಾಭಿಪ್ರಾಯಗಳನ್ನು ಹೊಂದಿಯೂ ಅವರೊಡನೆ ಸ್ನೇಹ ಸಾಧ್ಯವಿದ್ದ ಅವರ ಮಾನವೀಯ ಒಡನಾಟದ ಹಲವು ವಿವರಗಳನ್ನು ಅವರು ನೆನಪಿಸಿಕೊಂಡರು. 
ಈ ಸಂದರ್ಭದಲ್ಲಿ ಮಾತನಾಡಿದ ಅಕಾದೆಮಿಯ ಪ್ರಾಂತೀಯ ಕಾರ್ಯದರ್ಶಿ  ಮಹಾಲಿಂಗೇಶ್ವರ ಅವರು ಹಲವು ಸಾಹಿತ್ಯ ಸಭೆಗಳಲ್ಲಿ ನಾಗಭೂಷಣ ಅವರ ವೈಚಾರಿಕ ಚಿಂತನೆಗಳನ್ನು ನೆನಪಿಸಿಕೊಂಡರು. ಹೊಸ ಮನುಷ್ಯ ಪತ್ರಿಕೆ ಮೂಲಕ ಅವರು ನೀಡಿದ ಕೊಡುಗೆಯನ್ನು ವಿವರಿಸಿದರು. 

ಆನ್‍ಲೈನ್‍ನಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರು ನಾಗಭೂಷಣ ಅವರೊಡನೆ ಹಂಚಿಕೊಂಡ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಂಡರು. ಅವರು ಬಹಿರಂಗದ ಮಾತಿಗಿಂತಲೂ ಅಂತರಂಗ ಶುದ್ಧಿಯನ್ನು ಹೆಚ್ಚು ಗೌರವಿಸುತಿದ್ದ ವ್ಯಕ್ತಿ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News