ದ.ಕ.ಜಿಲ್ಲೆಯಲ್ಲಿ ಭಾರೀ ಮಳೆ; 17 ಮನೆಗಳಿಗೆ ಭಾಗಶಃ ಹಾನಿ

Update: 2022-05-19 16:12 GMT

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಗುರುವಾರ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಮುಂಗಾರು ಪೂರ್ವ ಮಳೆಯು ಭಾರೀ ಪ್ರಮಾಣದಲ್ಲಿ ಸುರಿದಿದೆ. ಮುಂಗಾರು ಮಳೆಯನ್ನೂ ಮೀರಿಸುವಂತೆ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ 17 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಮುಂಜಾನೆಯಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ನಗರದಲ್ಲಿ ನಡೆಯುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ಅವಾಂತರಗಳು ಅಲ್ಲಲ್ಲಿ ಗೋಚರಿಸಿವೆ. ಅಲ್ಲದೆ ನಗರದಲ್ಲಿ ಸ್ಮಾರ್ಟ್‌ಸಿಟಿ ಹಾಗೂ ಹೊರವಲಯದ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾರಿ ಮಳೆಯು ತೊಡಕಾಗಿದೆ. ಹಲವು ಪ್ರಮುಖ ರಸ್ತೆಗಳು ಜಲಾವೃತವಾಗಿದ್ದು, ವಾಹನಿಗರು, ಜನಸಾಮಾನ್ಯರು ತತ್ತರಿಸಿದ್ದಾರೆ.

ಗುರುವಾರ ಮಧ್ಯಾಹ್ನದ ಬಳಿಕ ಸಾಧಾರಣ ಮಳೆಯಾಗಿದ್ದು, ಮೇ 20ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ರಜೆಯ ಗೊಂದಲ

ಈ ಮಧ್ಯೆ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಗುರುವಾರ ಬೆಳಗ್ಗೆ ಶಾಲೆಗಳಿಗೆ ದಿಢೀರ್ ರಜೆ ಘೊಷಿಸಿದ್ದರು. ಅಷ್ಟರಲ್ಲಿ ಕೆಲವು ಮಕ್ಕಳು ಶಾಲೆಗಳಿಗೆ ತಲುಪಿದ್ದರೆ ಇನ್ನು ಕೆಲವರು ಮನೆ, ಹಾಸ್ಟೆಲ್‌ಗಳಿಂದ ಶಾಲೆಗಳಿಗೆ ತೆರಳುವವರಿದ್ದರು. ಕೆಲವರು ಶಾಲೆಯಿಂದ ಮನೆಗೆ ಮರಳಿದರೆ ಇನ್ನು ಕೆಲವು ಖಾಸಗಿ ಶಾಲೆಗಳ ಆಡಳಿತ ಮಂಡಳಿಯು ತರಗತಿ ನಡೆಸಿದೆ. ಒಟ್ಟಿನಲ್ಲಿ ವಿಳಂಬವಾಗಿ ರಜೆ ಘೋಷಿಸಿದ ಕಾರಣ ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ಹಾಗೂ ಆಡಳಿತ ಮಂಡಳಿಗಳಲ್ಲಿ ಗೊಂದಲ ಸೃಷ್ಟಿಯಾಗಿತ್ತು.

ಮನೆಗಳಿಗೆ ಹಾನಿ

ಮಂಗಳೂರಿನಲ್ಲಿ ಎರಡು ಮನೆಗಳು ಪೂರ್ತಿ ಕುಸಿದಿದೆ. ಪುತ್ತೂರು, ಉಳ್ಳಾಲದಲ್ಲಿ ತಲಾ 3, ಬೆಳ್ತಂಗಡಿ 4, ಕಡಬದಲ್ಲಿ 7 ಸಹಿತ ಜಿಲ್ಲೆಯಲ್ಲಿ ಒಟ್ಟು 17 ಮನೆಗಳು ಭಾಗಶಃ ಹಾನಿಗೊಂಡಿವೆ.

ಸತತ ಮಳೆ

ಬುಧವಾರ ರಾತ್ರಿ ಆರಂಭಗೊಂಡ ಮಳೆಯು ರಾತ್ರಿಯಿಡೀ ಸುರಿದಿದೆ. ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆಯವರೆಗೆ ಮಳೆ ಮುಂದುವರಿದಿತ್ತು. ಆ ಬಳಿಕ ಹಗುರ ಮಳೆಯಾಗಿದೆ. ಜಿಲ್ಲಾದ್ಯಂತ ಧಾರಾಕಾರ ಮಳೆಯಿಂದ ಹಳ್ಳ ಕೊಳ್ಳಗಳು ಭರ್ತಿಯಾಗುತ್ತಿದ್ದು, ನದಿಯಲ್ಲಿ ನೀರಿನ ಮಟ್ಟ ಸ್ವಲ್ಪ ಹೆಚ್ಚಾಗಿವೆ. ಭಾರಿ ಮಳೆಯಿಂದಾಗಿ ನಗರ ಸಹಿತ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

ಮರವೂರು ಸೇತುವೆ ಬಳಿ ಸಂಚಾರಕ್ಕೆ ತೊಡಕು

ಮಂಗಳೂರು ವಿಮಾನ ನಿಲ್ದಾಣ ಸಂಪರ್ಕ ರಸ್ತೆಯ ಮರವೂರು ಸೇತುವೆ ಬಳಿ ಕಾಮಗಾರಿ ನಡೆಯುತ್ತಿದ್ದು, ಧಾರಾಕಾರ ಮಳೆಯ ಕಾರಣ ಒಂದು ಭಾಗದಿಂದ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಸಂಚಾರಕ್ಕೆ ತೊಡಕು ಉಂಟಾಗಿವೆ.

ಸುಳ್ಯದಲ್ಲಿ ಗರಿಷ್ಠ ಮಳೆ

ಗುರುವಾರ ಬೆಳಗ್ಗಿನವರೆಗೆ ಜಿಲ್ಲೆಯ ಸುಳ್ಯದಲ್ಲಿ ಗರಿಷ್ಠ ಶೇ.೧೦೩.೩ ಮಿಮೀ ಮಳೆ ದಾಖಲಾಗಿದೆ. ಮಂಗಳೂರು ೫೪ ಮಿ.ಮೀ, ಬಂಟ್ವಾಳ ೪೭.೮ ಮಿ.ಮೀ, ಬೆಳ್ತಂಗಡಿ ೪೭.೨ ಮಿ.ಮೀ, ಪುತ್ತೂರು ೩೯.೬ ಮಿ.ಮೀ, ಸುಳ್ಯ ೧೦೩.೩ ಮಿ.ಮೀ. ಮಳೆಯಾಗಿದ್ದು, ದಿನದ ಸರಾಸರಿ ಮಳೆ ಶೇ.೫೬.೧ ಮಿ.ಮೀ. ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News