ರಾಜ್ಯ ಬಿಜೆಪಿ ಸರಕಾರ ಶೇ.100 ಕಮಿಷನ್ ಪಡೆಯುತ್ತಿದೆ ಎಂಬ ಭಾವನೆ ಮೂಡುತ್ತಿದೆ: ಸಿದ್ದರಾಮಯ್ಯ

Update: 2022-05-19 16:07 GMT
 ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ 

ಬೆಂಗಳೂರು, ಮೇ 19: 'ರಾಜ್ಯ ಸರಕಾರ ಮಳೆ ನೀರು ಕಾಲುವೆ, ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲು 1500 ಕೋಟಿ ವಿನಿಯೋಗಿಸುವುದಾಗಿ ತಿಳಿಸಿದ್ದರು. ಆದರೆ, ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ರಸ್ತೆಗಳೆಲ್ಲವೂ ಜಲಾವೃತವಾಗಿರುವುದನ್ನು ಕಂಡರೇ ರಾಜ್ಯ ಬಿಜೆಪಿ ಸರಕಾರ ಶೇ.40 ಅಲ್ಲ, ಶೇ.100 ಕಮಿಷನ್ ಪಡೆಯುತ್ತಿದೆ ಎಂಬ ಭಾವನೆ ಮೂಡುತ್ತಿದೆ' ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಗುರುವಾರ ಮಳೆಯಿಂದ ಹಾನಿಗೊಳಗಾಗಿರುವ ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜಕಾಲುವೆಗಳ ಒತ್ತುವರಿಯೂ ಪ್ರಮುಖ ಸಮಸ್ಯೆ ಇದೆ. ಅದನ್ನು ಬಗೆಹರಿಸುವ ಅನಿವಾರ್ಯತೆ ಇದೆ. ಈ ಅನಿವಾರ್ಯತೆಯನ್ನು ಮನಗಂಡು ನಮ್ಮ ಕಾಂಗ್ರೆಸ್ ಸರಕಾರ ಒತ್ತುವರಿಯನ್ನು ತೆರವು ಮಾಡಲು ಪ್ರಾರಂಭಿಸಿತ್ತು. ಈಗ ಅದೂ ಕೂಡ ನೆನೆಗುದಿಗೆ ಬಿದ್ದಿದೆ' ಎಂದು ಕಿಡಿಕಾರಿದರು.

ರಾಜಕಾಲುವೆ ಅಭಿವೃದ್ಧಿ ಮಾಡುವುದೆಂದರೆ ಚರಂಡಿಗಳ ಅಗಲ ಕಡಿಮೆ ಮಾಡಿ ಕೇವಲ ಕಾಂಕ್ರೀಟ್ ಗೋಡೆ ಕಟ್ಟಿಕೊಂಡು ಹೋಗುವುದು ಎನ್ನುವಂತಾಗಿದೆ. ಇದರಿಂದ, ಯಾವ ಸಮಸ್ಯೆ ಬಗೆಹರಿಸಲು ಸಾಧ್ಯ? ಈ ರಾಜಕಾಲುವೆಗಳು ಎಲ್ಲೆಲ್ಲಿ ಸಮಸ್ಯೆ ಅನುಭವಿಸುತ್ತಿವೆಯೊ ಅಂಥ ಅನೇಕ ಕಡೆ ಜಲಮಂಡಳಿಯವರ ಪೈಪುಗಳೂ ಇವೆ. ಅವುಗಳನ್ನು ಶಿಫ್ಟ್ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

ಬೆಂಗಳೂರಿನ ಎಂಟು ವಲಯಗಳೂ ಸೇರಿದಂತೆ ಸುಮಾರು 700 ಪಾಯಿಂಟ್‍ಗಳಿವೆ. ಈ ಪಾಯಿಂಟ್ ಗಳಲ್ಲೆ ರಾಜಕಾಲುವೆ? ಮಳೆ ನೀರು ಕಾಲುವೆಗಳ ಸಮಸ್ಯೆ ಇದೆ. ಈ ಸಮಸ್ಯೆಯನ್ನು ನಿಭಾಯಿಸಬೇಕಾದರೆ ಸಂಪೂರ್ಣ ವೈಜ್ಞಾನಿಕವಾದ ತಿಳುವಳಿಕೆ ಇರಬೇಕಾಗುತ್ತದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News