ಅಸ್ಸಾಮಿನ ಅಂತಿಮ ಎನ್‌ಆರ್‌ಸಿ ನಿಜಕ್ಕೂ ಅಂತಿಮವೇ?

Update: 2022-05-20 04:54 GMT

ಅಸ್ಸಾಮಿನ ಅಂತಿಮ ಎನ್‌ಆರ್‌ಸಿಯನ್ನು 2019, ಆಗಸ್ಟ್‌ನಲ್ಲಿ ಭಾರೀ ಆಡಂಬರದೊಂದಿಗೆ ಪ್ರಕಟಿಸಲಾಗಿತ್ತು. ರಾಜ್ಯದಲ್ಲಿ ವಾಸವಿರುವ ಕಾನೂನುಬದ್ಧ ಭಾರತೀಯ ಪ್ರಜೆಗಳ ಪಟ್ಟಿಯಾಗಲಿದ್ದ ಇದನ್ನು ಎರಡು ಕರಡು ಆವೃತ್ತಿಗಳ ಬಳಿಕ ಸಂಕಲಿಸಲಾಗಿತ್ತು ಮತ್ತು 19 ಲ.ಅರ್ಜಿದಾರರನ್ನು ಪಟ್ಟಿಯಿಂದ ಹೊರಗಿರಿಸಲಾಗಿತ್ತು. ಆದರೆ ಕೆಲವೊಂದು ಬೆಳವಣಿಗೆಗಳು ಜಟಿಲ ಪ್ರಶ್ನೆಯೊಂದನ್ನು ಹುಟ್ಟುಹಾಕಿವೆ;ಅಸ್ಸಾಮಿನ ಅಂತಿಮ ಎನ್‌ಆರ್‌ಸಿ ನಿಜಕ್ಕೂ ಅಂತಿಮವೇ?

ಎಪ್ರಿಲ್‌ನಲ್ಲಿ ಅಸ್ಸಾಮಿನ ವಿದೇಶಿಯರ ನ್ಯಾಯಾಧಿಕರಣಗಳಿಗೆ ಪತ್ರವನ್ನು ಬರೆದಿದ್ದ ರಾಜ್ಯ ಎನ್‌ಆರ್‌ಸಿ ಸಂಯೋಜಕ ಎಚ್.ಡಿ.ಶರ್ಮಾ ಅವರು,ಪೌರತ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸುವಾಗ ಆಗಸ್ಟ್ 2019ರ ಪಟ್ಟಿಯನ್ನು ನೆಚ್ಚಿಕೊಳ್ಳದಂತೆ ಸೂಚಿಸಿದ್ದರು. ಆಗಸ್ಟ್ 2019ರ ಎನ್‌ಆರ್‌ಸಿಯು ಅಂತಿಮ ಅಲ್ಲವೇ ಅಲ್ಲ ಮತ್ತು ಅದರ ‘ಫಲಿತಾಂಶಗಳು’ ಬದಲಾಗುವ ಸಾಧ್ಯತೆಯಿದೆ ಎನ್ನುವುದು ಶರ್ಮಾರ ತಾರ್ಕಿಕತೆಯಾಗಿತ್ತು. ಹೀಗಾಗಿ ನ್ಯಾಯಾಂಗ ಅಥವಾ ಅರೆನ್ಯಾಯಾಂಗ ಪ್ರಕ್ರಿಯೆಯಡಿ ಪ್ರಕರಣಗಳ ವಿಲೇವಾರಿಗೆ ಅದನ್ನು ಪುರಾವೆಯನ್ನಾಗಿ ಪರಿಗಣಿಸುವಂತಿಲ್ಲ ಎಂದು ಶರ್ಮಾ ಒತ್ತಿ ಹೇಳಿದ್ದರು.

ತಮ್ಮೆದುರಿಗಿದ್ದ ಪ್ರಕರಣಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಧಿಕರಣಗಳು ರಾಜ್ಯ ಮತ್ತು ಜಿಲ್ಲಾ ಕಚೇರಿಗಳಿಂದ ಎನ್‌ಆರ್‌ಸಿ ಸಂಬಂಧಿತ ದಾಖಲೆಗಳಿಗಾಗಿ ನಿರಂತರವಾಗಿ ಕೇಳುತ್ತಿದ್ದರಿಂದ ಅವುಗಳಿಗೆ ಈ ಸೂಚನೆಯನ್ನು ನೀಡುವುದು ತನಗೆ ಅನಿವಾರ್ಯವಾಗಿತ್ತು ಎಂದು ಶರ್ಮಾ ಹೇಳಿದರು. ಮುಖ್ಯವಾಗಿ ಎನ್‌ಆರ್‌ಸಿಯಲ್ಲಿ ವ್ಯಕ್ತಿಯ ಸೇರ್ಪಡೆ ಅಥವಾ ಹೊರಗಿಡುವಿಕೆಯು ಆ ವ್ಯಕ್ತಿ ವಿದೇಶಿಯನೇ ಅಥವಾ ಭಾರತೀಯ ಪ್ರಜೆಯೇ ಎಂಬ ನ್ಯಾಯಾಧಿಕರಣಗಳ ದೃಷ್ಟಿಕೋನವನ್ನು ಬಣ್ಣಿಸಬಾರದು ಎಂದು ಶರ್ಮಾ ಅವುಗಳಿಗೆ ಸೂಚಿಸಿದ್ದರು.

ಮೇ 10ರಂದು ನ್ಯಾಯಮಂಡಳಿಯ ಸದಸ್ಯ (ನ್ಯಾಯಾಧೀಶ) ರೋರ್ವರು ಶರ್ಮಾರಿಗೆ ಪತ್ರವನ್ನು ಬರೆದು ಸೂಚನೆಯನ್ನು ಹಿಂದೆಗೆದುಕೊಳ್ಳುವಂತೆ ಕೋರಿದ್ದರು. ಎನ್‌ಆರ್‌ಸಿ ಅಂತಿಮವಲ್ಲ ಎಂಬ ಶರ್ಮಾರ ವಾದವು ಲಭ್ಯ ದಾಖಲೆಗಳು ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶಗಳಿಗೆ ನೇರ ವಿರುದ್ಧವಾಗಿವೆ ಎಂದು ಅವರು ಪತ್ರದಲ್ಲಿ ಬೆಟ್ಟು ಮಾಡಿದ್ದರು.
   
ಶರ್ಮಾರ ಪತ್ರವು ಹಸ್ತಕ್ಷೇಪಕ್ಕೆ ಸಮನಾಗಿತ್ತು ಮತ್ತು ಅವರ ಅಧಿಕಾರವ್ಯಾಪ್ತಿಯನ್ನು ಮೀರಿತ್ತು ಎಂದು ಹೆಸರು ಹೇಳಿಕೊಳ್ಳಲು ಬಯಸದ ಈ ಸದಸ್ಯರು scroll.in ಗೆ ತಿಳಿಸಿದರು. ಆಗಸ್ಟ್,2019ರ ಪಟ್ಟಿಯು 19 ಲ.ಅರ್ಜಿದಾರರನ್ನು ಹೊರಗಿರಿಸಿದ್ದು,ಅವರು ತಮ್ಮ ಪೌರತ್ವಕ್ಕಾಗಿ ವಿದೇಶಿಯರ ನ್ಯಾಯಾಧಿಕರಣದಲ್ಲಿ ಮೇಲ್ಮನವಿಗಳನ್ನು ಸಲ್ಲಿಸಬೇಕಿತ್ತು. ಎನ್‌ಆರ್‌ಸಿ ಅಧಿಕಾರಿಗಳ ಕೆಲಸ ಅಲ್ಲಿಗೆ ಮುಗಿದಿದೆ ಎಂದು ಭಾವಿಸಲಾಗಿತ್ತು.

ಅಧಿಕಾರವ್ಯಾಪ್ತಿಯ ಹಗ್ಗಜಗ್ಗಾಟ ಬದಿಗಿರಲಿ,ಶರ್ಮಾ ಮತ್ತು ನ್ಯಾಯಾಧಿಕರಣ ಸದಸ್ಯರ ನಡುವಿನ ಇತ್ತೀಚಿನ ಪತ್ರ ವಿನಿಮಯವು ಅಸ್ಸಾಮಿನಲ್ಲಿ ಪೌರತ್ವದ ಅಂತಿಮ ಪರೀಕ್ಷೆಯಾಗಬೇಕಿದ್ದ ಎನ್‌ಆರ್‌ಸಿ ಕುರಿತು ನಿರ್ಣಾಯಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಗಸ್ಟ್,2019ರ ಪಟ್ಟಿ ಬದಲಾಗಲಿದೆಯೇ? ಅದರಲ್ಲಿ ಸೇರ್ಪಡೆಗೊಳಿಸಿರುವ ಜನರನ್ನು ಹೊರಗಿಡಲಾಗುವುದೇ? ಈ ಪ್ರಶ್ನೆಗಳಿಗೆ ಉತ್ತರಗಳು ನಿಜಕ್ಕೂ ಅವುಗಳನ್ನು ನೀವು ಯಾರಿಗೆ ಕೇಳುತ್ತಿದ್ದೀರಿ ಎನ್ನುವುದನ್ನು ಅವಲಂಬಿಸಿದೆ.

ಆಗಸ್ಟ್,2019ರ ಎನ್‌ಆರ್‌ಸಿಯು ಅಂತಿಮವಲ್ಲ ಎಂಬ ಶರ್ಮಾರ ವಾದವು ಭಾರತದ ರಿಜಿಸ್ಟ್ರಾರ್ ಜನರಲ್ ಪಟ್ಟಿಯನ್ನು ಇನ್ನೂ ಅಧಿಸೂಚಿಬೇಕಿದೆ ಎಂಬ ಅಂಶದ ಮೇಲೆ ನಿಂತಿದೆ. ರಿಜಿಸ್ಟ್ರಾರ್ ಜನರಲ್ ಎನ್‌ಆರ್‌ಸಿ ಪ್ರಕ್ರಿಯೆಯ ಒಟ್ಟಾರೆ ಮೇಲ್ವಿಚಾರಣೆಯನ್ನು ಹೊಂದಿದ್ದಾರೆ. ರಿಜಿಸ್ಟ್ರಾರ್ ಜನರಲ್ ಅಧಿಸೂಚಿಸದೇ ಇರಬಹುದು,ಆದರೆ ಎನ್‌ಆರ್‌ಸಿ ಪ್ರಕ್ರಿಯೆಗಾಗಿ ತನ್ನ ಅಧಿಸೂಚನೆಯನ್ನು ಅವರು 2019,ಆ.31ರಾಚೆಗೆ ವಿಸ್ತರಿಸಿಲ್ಲ ಎನ್ನುವುದು ನ್ಯಾಯಮಂಡಳಿ ಸದಸ್ಯರ ವಾದವಾಗಿದೆ.

ನ್ಯಾಯಮಂಡಳಿ ಸದಸ್ಯರ ವಾದವು ಪರಿಷ್ಕರಣೆ ಪ್ರಕ್ರಿಯೆಯು ಮುಗಿದಿದೆ ಮತ್ತು ಶರ್ಮಾ ತನ್ನ ಪತ್ರದಲ್ಲಿ ಸೂಚಿಸಿರುವಂತೆ ಎನ್‌ಆರ್‌ಸಿ ಕಚೇರಿಯು ಪಟ್ಟಿಯಲ್ಲಿ ತಿದ್ದುಪಡಿಯನ್ನು ಮಾಡುವಂತಿಲ್ಲ ಮತ್ತು 2019ರ ಪಟ್ಟಿಗೆ ಲಗತ್ತಿಸಲಾಗಿರುವ ಅಡಿ ಟಿಪ್ಪಣಿಯು ಸ್ಪಷ್ಟಪಡಿಸಿರುವಂತೆ ಬದಲಾವಣೆಗಳು ಆಗಬೇಕಿದ್ದರೆ ಅವು ವಿದೇಶಿಯರ ನ್ಯಾಯಾಧಿಕರಣಗಳ ಮೂಲಕವೇ ಆಗಬೇಕು ಎಂಬ ಪರಿಣಾಮಕಾರಿ ಅರ್ಥವನ್ನು ನೀಡುತ್ತದೆ. ಅಲ್ಲದೆ 2019,ಆಗಸ್ಟ್‌ನ ಪಟ್ಟಿಯ ಪ್ರಕಟಣೆಗೆ ಮುನ್ನ ಸರ್ವೋಚ್ಚ ನ್ಯಾಯಾಲಯವು ಅದನ್ನು ‘ಅಂತಿಮ ಎನ್‌ಆರ್‌ಸಿ ’ಎಂದು ಪದೇಪದೇ ಪ್ರಸ್ತಾಪಿಸಿತ್ತು ಎನ್ನುವುದನ್ನು ಸದಸ್ಯರು ಬೆಟ್ಟು ಮಾಡಿದ್ದಾರೆ.

ಆ.31,2019ರಂದು ಪ್ರಕಟಿಸಲಾದ ಎನ್‌ಆರ್‌ಸಿಯೇ ಅಂತಿಮ ಎಂದು ಅದೇ ದಿನ ರಾಜ್ಯ ಎನ್‌ಆರ್‌ಸಿ ಕಚೇರಿ ಮತ್ತು ರಿಜಿಸ್ಟ್ರಾರ್ ಜನರಲ್ ಅವರ ಕಚೇರಿ ಜಂಟಿಯಾಗಿ ಹೊರಡಿಸಿದ್ದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರ ಬಗ್ಗೆಯೂ ಸದಸ್ಯರು ಗಮನ ಸೆಳೆದಿದ್ದಾರೆ. ಎನ್‌ಆರ್‌ಸಿಯಿಂದ ಹೊರಗಿರುವವರ ಪ್ರಕರಣಗಳನ್ನು ವಿದೇಶಿಯರ ನ್ಯಾಯಾಧಿಕರಣಗಳು ನಿರ್ಧರಿಸುವಂತಾಗಲು ಅಂತಹವರಿಗೆ ನಿರಾಕರಣೆ ಚೀಟಿಗಳನ್ನು ನೀಡುವಂತೆ ಕೇಳಿಕೊಂಡು ರಿಜಿಸ್ಟ್ರಾರ್ ಜನರಲ್ ಅವರೇ ಶರ್ಮಾರಿಗೆ ಹಲವಾರು ಪತ್ರಗಳನ್ನು ಬರೆದಿದ್ದರು. ಇದು 2019ರ ಪಟ್ಟಿಯಲ್ಲಿ ಎನ್‌ಆರ್‌ಸಿ ಕಚೇರಿಯು ಖುದ್ದು ಬದಲಾವಣೆಗಳನ್ನು ಮಾಡಬಹುದು ಎಂಬ ಶರ್ಮಾರ ಹೇಳಿಕೆಯನ್ನು ನಿರಾಕರಿಸುವಂತಿದೆ.

ನಿರಾಕರಣೆ ಚೀಟಿಗಳನ್ನು ಇನ್ನೂ ವಿತರಿಸಲಾಗಿಲ್ಲ ಮತ್ತು ಇದು ಪಟ್ಟಿಯಿಂದ ಹೊರಗಿರುವ 19 ಲ.ಜನರನ್ನು ತ್ರಿಶಂಕು ಸ್ಥಿತಿಯಲ್ಲಿರಿಸಿದೆ. 2019ರ ಎನ್‌ಆರ್‌ಸಿ ಪಟ್ಟಿಯು ಅಂತಿಮ ಎಂಬ ಮುದ್ರೆಯನ್ನೊತ್ತಲು ಶರ್ಮಾರ ನಿರಾಕರಣೆಯು ಈ ವಿಳಂಬಕ್ಕೆ ಕಾರಣ ಎಂದು ಪರಿಸ್ಥಿತಿಯ ಬಗ್ಗೆ ತಿಳಿದಿರುವರು ಹೇಳುತ್ತಾರೆ.

ಈ ವಿಷಯದಲ್ಲಿ ಶರ್ಮಾರ ನಿಲುವು ಅವರ ವೈಯಕ್ತಿಕ ರಾಜಕೀಯದಿಂದ ನಿರ್ದೇಶಿಸಲ್ಪಟ್ಟಿರಬಹುದು. ಆಗಸ್ಟ್,2019ರ ಪಟ್ಟಿಯು ಪ್ರಕಟಗೊಂಡ ಬಳಿಕ ಅವರನ್ನು ರಾಜ್ಯ ಎನ್‌ಆರ್‌ಸಿ ಸಂಯೋಜಕರನ್ನಾಗಿ ನೇಮಕಗೊಳಿಸಲಾಗಿತ್ತು. ಪಟ್ಟಿಯನ್ನು ರಾಜ್ಯದ ಆಡಳಿತಾರೂಢ ಬಿಜೆಪಿಯ ಅಸ್ಸಾಂ ಘಟಕವು ತೀಕ್ಷ್ಣವಾಗಿ ಪ್ರಶ್ನಿಸಿತ್ತು.

ವಿಶೇಷವಾಗಿ, ವಲಸಿಗ ಸಮುದಾಯಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿಯ ಶರ್ಮಾರ ಹೇಳಿಕೆಗಳಿಂದಾಗಿ ಅವರ ನೇಮಕದ ಸುತ್ತ ವಿವಾದದ ಮೋಡ ಆವರಿಸಿತ್ತು. ಅಸ್ಸಾಮಿನಲ್ಲಿ ‘ಪೂರ್ವ ಪಾಕಿಸ್ತಾನಿ ಮುಸ್ಲಿಮರು ’ ವಾಸವಿದ್ದರು ಮತ್ತು ಲಕ್ಷ ಲಕ್ಷ ಬಾಂಗ್ಲಾದೇಶಿಗಳು ಅಂತಿಮ ಎನ್‌ಆರ್‌ಸಿ ಪಟ್ಟಿಯಲ್ಲಿ ತೂರಿಕೊಂಡಿದ್ದಾರೆ ಎಂದು ಶರ್ಮಾ ಹೇಳಿದ್ದರು. ಅವರ ಅಭಿಪ್ರಾಯಗಳು ಅಂತಿಮ ಎನ್‌ಆರ್‌ಸಿಯ ಪರಿಷ್ಕರಣೆಯಾಗಬೇಕು ಎಂದು ಬಯಸಿರುವ ಬಿಜೆಪಿಯ ದೃಷ್ಟಿಕೋನವನ್ನೇ ಪ್ರತಿಧ್ವನಿಸಿವೆ.

ಆದರೆ ಎನ್‌ಆರ್‌ಸಿಯನ್ನು ಆಸ್ಸಾಮಿನಲ್ಲಿರುವ ಕಾನೂನುಬದ್ಧ ಭಾರತೀಯ ಪೌರರ ಪಟ್ಟಿ ಎಂದು ಅಧಿಸೂಚಿಸಲು ರಿಜಿಸ್ಟ್ರಾರ್ ಜನರಲ್ ಏಕೆ ವಿಫಲರಾಗಿದ್ದಾರೆ? ಅವರು ಅಸ್ಸಾಂ ಎನ್‌ಆರ್‌ಸಿಯ ಬಗ್ಗೆ ದ್ವಂದ್ವ ನಿಲುವು ಹೊಂದಿರುವ ಅಮಿತ್ ಶಾ ನೇತೃತ್ವದ ಕೇಂದ್ರ ಗೃಹಸಚಿವಾಲಯದಡಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಈ ವೈಫಲ್ಯಕ್ಕೆ ಒಂದು ವಿವರಣೆಯಾಗಬಹುದು. ಆರಂಭದಲ್ಲಿ ಅಸ್ಸಾಂ ಎನ್‌ಆರ್‌ಸಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಶಾ ಅವರು ಹೊಸ ಪಾನ್-ಇಂಡಿಯಾ ಎನ್‌ಆರ್‌ಸಿಗಾಗಿ ಅದನ್ನು ಮೂಲೆಗುಂಪು ಮಾಡಲು ಬಯಸಿರುವಂತಿದೆ.

ಆದಾಗ್ಯೂ 2019,ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ್ದ ಲಿಖಿತ ಉತ್ತರದಲ್ಲಿ ಗೃಹಸಚಿವಾಲಯವು ಆಗಸ್ಟ್,2019ರ ಪಟ್ಟಿಯನ್ನು ಅಂತಿಮ ಎನ್‌ಆರ್‌ಸಿ ಎಂದು ಉಲ್ಲೇಖಿಸಿತ್ತು.

2019ರ ಪಟ್ಟಿಯ ಕುರಿತು ನ್ಯಾಯಾಧಿಕರಣಗಳು ಮತ್ತು ಎನ್‌ಆರ್‌ಸಿ ಕಚೇರಿ ಕಚ್ಚಾಡುತ್ತಿದ್ದರೆ ಸರ್ವೋಚ್ಚ ನ್ಯಾಯಾಲಯವು ಮೌನವಾಗಿದೆ. 2019ರ ಪಟ್ಟಿಯನ್ನು ಪ್ರಕಟಿಸುವವರೆಗೆ ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಚಾಲನೆ ನೀಡಿದ್ದ,ಪ್ರಕ್ರಿಯೆಯ ಪ್ರತಿಯೊಂದು ಹಂತಕ್ಕೂ ಅಂತಿಮ ಗಡುವುಗಳನ್ನು ವಿಧಿಸಿದ್ದ ಸರ್ವೋಚ್ಚ ನ್ಯಾಯಾಲಯವು ಆ ಬಳಿಕ ಹಿಂದೆ ಸರಿದಂತಿದೆ. ಎನ್‌ಆರ್‌ಸಿಯಲ್ಲಿನ ಹೆಸರುಗಳ ಮರುಪರಿಶೀಲನೆ ಮತ್ತು ದೃಢೀಕರಣದ ಹೊಸ ಸುತ್ತುಗಳನ್ನು ಕೋರಿ ಸರಕಾರ ಮತ್ತು ಅಸ್ಸಾಮಿ ರಾಷ್ಟ್ರವಾದಿ ಗುಂಪುಗಳು ಸಲ್ಲಿಸಿರುವ ಅರ್ಜಿಗಳು ಈಗಲೂ ಸರ್ವೋಚ್ಚ ನ್ಯಾಯಾಲಯದಲ್ಲಿ ಕೊಳೆಯುತ್ತಿವೆ.

ಸ್ಪಷ್ಟತೆಯ ಕೊರತೆಯು ಎನ್‌ಆರ್‌ಸಿಯ ಸಿಂಧುತ್ವವು ನಿರಂತರವಾಗಿ ಮೋಡದ ಮುಸುಕಿನಲ್ಲಿದೆ ಎನ್ನುವುದನ್ನು ಸೂಚಿಸುತ್ತಿದೆ. 2021,ಸೆಪ್ಟಂಬರ್‌ನಲ್ಲಿ ದಕ್ಷಿಣ ಅಸ್ಸಾಮಿನ ಕರೀಮ್‌ಗಂಜ್‌ನಲ್ಲಿಯ ನ್ಯಾಯಾಧಿಕರಣವು ವಿದೇಶಿಯನೆಂದು ಸರಕಾರವು ಆರೋಪಿಸಿದ್ದ ವ್ಯಕ್ತಿಯನ್ನು ಆತನ ಹೆಸರು ಎನ್‌ಆರ್‌ಸಿಯಲ್ಲಿ ಇದೆ ಎಂಬ ಕಾರಣದಿಂದ ಆರೋಪಮುಕ್ತಗೊಳಿಸಿತ್ತು. 2019,ಆ.31ರಂದು ಆನ್‌ಲೈನ್‌ನಲ್ಲಿ ಪ್ರಕಟಗೊಂಡಿದ್ದ ಅಸ್ಸಾಂ ಎನ್‌ಆರ್‌ಸಿಯು ಅಂತಿಮ ಎಂಬ ಬಗ್ಗೆ ಸ್ಪಷ್ಟತೆಯ ಕೊರತೆಯಿರುವುದರಿಂದ ಅದು ‘ಕಾನೂನು ಮಾನ್ಯ ದಾಖಲೆ ’ಅಲ್ಲ ಎಂಬ ಸರಕಾರಿ ವಕೀಲರ ವಾದವನ್ನು ನ್ಯಾಯಾಧಿಕರಣವು ತಿರಸ್ಕರಿಸಿತ್ತು. 2019ರಲ್ಲಿ ಪ್ರಕಟಗೊಂಡ ಅಸ್ಸಾಂ ಎನ್‌ಆರ್‌ಸಿಯು ಅಂತಿಮ ಎನ್ನುವುದರಲ್ಲಿ ಯಾವುದೇ ಶಂಕೆಯಿಲ್ಲ ಎಂದು ಅದು ಹೇಳಿತ್ತು.
ಇಂತಹ ಆದೇಶಗಳು ಶರ್ಮಾರ ಇತ್ತೀಚಿನ ಪತ್ರಕ್ಕೆ ಪ್ರೇರಣೆಯಾಗಿರಬಹುದು. ನ್ಯಾಯಾಧಿಕರಣಗಳು ರಾಷ್ಟ್ರೀಯತೆಯನ್ನು ನಿರ್ಧರಿಸುವಾಗ ಎನ್‌ಆರ್‌ಸಿಯು ಅಂತಿಮವಲ್ಲ ಎಂಬ ಕಾರಣಕ್ಕೆ ಅದನ್ನು ಕಡೆಗಣಿಸಿದರೆ ಪ್ರತಿವಾದಿಗಳು ತಾವು ಭಾರತೀಯ ಪ್ರಜೆಗಳು ಎಂದು ಸಾಬೀತುಗೊಳಿಸುವ ತಮ್ಮ ಹೋರಾಟದಲ್ಲಿ ಇನ್ನೊಂದು ಮೌಲ್ಯಯುತ ಸಾಕ್ಷವನ್ನು ಕಳೆದುಕೊಳ್ಳುತ್ತಾರೆ.

Writer - ಅರುಣಾಭ್ ಸೈಕಿಯಾ (Scroll.in)

contributor

Editor - ಅರುಣಾಭ್ ಸೈಕಿಯಾ (Scroll.in)

contributor

Similar News