ತಾಜ್‌ಮಹಲ್ ಮತ್ತು 22 ಮುಚ್ಚಿದ ಬಾಗಿಲುಗಳು

Update: 2022-05-20 05:41 GMT

‘‘1958ರ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಪಳೆಯುಳಿಕೆಗಳ ಕಾಯ್ದೆಯ ಪ್ರಕಾರ, ಕೆಂದ್ರ ಸರಕಾರ ಬಯಸಿದರೆ ಸ್ಮಾರಕವೊಂದರ ಭಾಗವನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಅದು ಮುಚ್ಚಬಹುದಾಗಿದೆ. ಮುಚ್ಚಿರುವುದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಒಂದು- ಸಂದರ್ಶಕರು ಮತ್ತು ಸ್ಮಾರಕದ ಭದ್ರತೆ’’ ಎಂದು ಹಿರಿಯ ಎಎಸ್‌ಐ ಅಧಿಕಾರಿಯೊಬ್ಬರು ಹೇಳುತ್ತಾರೆ.

ಆ ಗ್ರಾದಲ್ಲಿರುವ ತಾಜ್‌ಮಹಲ್‌ನ 22 ಮುಚ್ಚಿದ ಕೋಣೆಗಳನ್ನು ತೆರೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಅಲಹಾಬಾದ್ ಹೈಕೋರ್ಟ್‌ನ ಲಕ್ನೊ ಪೀಠವು ಮೇ 12ರಂದು ವಜಾಗೊಳಿಸಿತು. ಇದಾದ ಕೆಲ ದಿನಗಳ ಬಳಿಕ, ಈ ಮುಚ್ಚಿದ ಕೋಣೆಗಳ ಒಳಭಾಗಗಳ ಕೆಲವು ಚಿತ್ರಗಳನ್ನು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ)ಯು ಬಿಡುಗಡೆ ಮಾಡಿದೆ ಎಂಬ ಸುದ್ದಿ ಹರಡಿತು.

ದೇಶಾದ್ಯಂತವಿರುವ ಎಎಸ್‌ಐ ವೃತ್ತಗಳಿಗೆ ಸಂಬಂಧಿಸಿದ ಉತ್ಖನನಗಳು ಮತ್ತು ಸಂಶೋಧನೆಗಳಿಗೆ ಸಂಬಂಧಿಸಿದ 44 ಪುಟಗಳ ವಾರ್ತಾಪತ್ರವೊಂದನ್ನು ಮೇ 5ರಂದು ಎಎಸ್‌ಐ ವೆಬ್‌ಸೈಟ್‌ನಲ್ಲಿ ಹಾಕಲಾಯಿತು. ತಾಜ್‌ಗಂಜ್ ಪ್ರದೇಶ ಮತ್ತು ತಾಜ್‌ಮಹಲ್ ಸುತ್ತಲಿರುವ ದ್ವಾರಗಳಿಗೆ ಮಾಡಲಾದ ದುರಸ್ತಿಗಳು ಹಾಗೂ ತಾಜ್‌ಮಹಲ್‌ನ ನದಿಯ ಭಾಗದಲ್ಲಿರುವ ಭೂಗತ ಕೋಣೆಗಳ ನಿರ್ವಹಣಾ ಕಾಮಗಾರಿಗೆ ಸಂಬಂಧಿಸಿದ ವಿವರಗಳು ವಾರ್ತಾಪತ್ರದ 19 ಮತ್ತು 20ನೇ ಪುಟಗಳಲ್ಲಿವೆ.

 ‘‘ನ್ಯಾಯಾಲಯವು ವಜಾಗೊಳಿಸಿರುವ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ಕೋಣೆಗಳ ಚಿತ್ರಗಳು ಅವು’’ ಎಂದು ಎಎಸ್‌ಐ ವಕ್ತಾರರೊಬ್ಬರು The Quint ಗೆ ಹೇಳಿದರು. ವಾರ್ತಾಪತ್ರ ಮತ್ತು ಚಿತ್ರಗಳ ಬಗ್ಗೆ The Quint ಆಗ್ರಾ ವೃತ್ತದ ಎಎಸ್‌ಐ ಅಧಿಕಾರಿಗಳು ಮತ್ತು ದಿಲ್ಲಿ ಕೇಂದ್ರ ಕಚೇರಿಯ ಅಧಿಕಾರಿಗಳೊಂದಿಗೆ ಮಾತನಾಡಿತು.

22 ಮುಚ್ಚಿದ ಕೋಣೆಗಳನ್ನು ತೆರೆಯುವಂತೆ ಕೋರುವ ಅರ್ಜಿಗೆ ಈ ವಾರ್ತಾಪತ್ರವು ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆಯಲ್ಲ ಎಂಬುದಾಗಿ ಎಎಸ್‌ಐನ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟೀಕರಣ ನೀಡಿದ್ದಾರೆ. ವಾರ್ತಾಪತ್ರದ ಪ್ರಕಟನೆಯು ‘ಸಂಪೂರ್ಣ ಕಾಕತಾಳೀಯವಾಗಿದೆ’ ಎಂದು ಅವರು ಹೇಳಿದ್ದಾರೆ.

‘‘2021 ನವೆಂಬರ್‌ನಿಂದ ನಾವು ವಾರ್ತಾಪತ್ರಗಳನ್ನು ಪ್ರಕಟಿಸುತ್ತಿದ್ದೇವೆ. ಆದರೆ ಕೆಲವು ಬಾರಿ ಅವುಗಳ ಪ್ರಕಟನೆ ವಿಳಂಬವಾಗಿದೆ. ಮೇ 5ರಂದು ನಾವು ಪ್ರಕಟಿಸಿರುವ ವಾರ್ತಾಪತ್ರವು ಜನವರಿಯದ್ದು. ನಮ್ಮ 2021 ನವೆಂಬರ್‌ನ ವಾರ್ತಾಪತ್ರವು 2021 ಡಿಸೆಂಬರ್‌ನಲ್ಲಿ ಪ್ರಕಟಗೊಂಡಿತ್ತು. ಅದೇ ರೀತಿ, 2021 ಡಿಸೆಂಬರ್‌ನ ವಾರ್ತಾಪತ್ರವು 2022 ಫೆಬ್ರವರಿಯಲ್ಲಿ ಪ್ರಕಟಗೊಂಡಿದೆ. ಹಾಗೆಯೇ, ಜನವರಿಯಲ್ಲಿ ಬರಬೇಕಾಗಿದ್ದ ವಾರ್ತಾಪತ್ರವು ಮೇ ತಿಂಗಳಲ್ಲಿ ಬಂದಿದೆ’’ ಎಂದು ಎಎಸ್‌ಐ ವಕ್ತಾರ ಮನು ಶರ್ಮ ಹೇಳಿದರು.

‘‘ವಾರ್ತಾಪತ್ರವನ್ನು ವೆಬ್‌ಸೈಟ್‌ಗೆ ಹಾಕಲು ತಡವಾಗಿದೆ. ಯಾಕೆಂದರೆ, ಸ್ವಲ್ಪ ಸಮಯ ತಂಡದ ತುಂಬಾ ಸದಸ್ಯರು ಕೋವಿಡ್-19 ಸಾಂಕ್ರಾಮಿಕದಿಂದ ಬಳಲುತ್ತಿದ್ದರು. ಅದೂ ಅಲ್ಲದೆ, ಕೆಲವು ತಾಂತ್ರಿಕ ಸಮಸ್ಯೆಗಳೂ ಇದ್ದವು’’ ಎಂದು ಶರ್ಮ ಹೇಳಿದರು.

ಹೆಚ್ಚುವರಿ ಮಹಾನಿರ್ದೇಶಕ (ಪುರಾತತ್ವ ಇಲಾಖೆ) ಪ್ರೊಫೆಸರ್ ಅಲೋಕ್ ತ್ರಿಪಾಠಿ ವಾರ್ತಾಪತ್ರದ ಸಂಪಾದಕೀಯದಲ್ಲಿ ಹೀಗೆ ಬರೆದಿದ್ದಾರೆ: ‘‘ಈ ನಿಯತಕಾಲಿಕಕ್ಕೆ ಐಎಸ್‌ಎಸ್‌ಎನ್ ಸಂಖ್ಯೆಯನ್ನು ಪಡೆಯುವ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ. ಆದರೆ ಸುದೀರ್ಘ ಪ್ರಕ್ರಿಯೆಯಿಂದಾಗಿ ಮತ್ತು ಮೂಲ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಸಮಯ ವೆಚ್ಚವಾದುದರಿಂದ ಪ್ರಕಟನೆಯು ವಿಳಂಬವಾಯಿತು’’.

ಎಎಸ್‌ಐ ವಾರ್ತಾಪತ್ರದಲ್ಲಿ ಸಂರಕ್ಷಣೆಯ ಮೊದಲು ಮತ್ತು ನಂತರದ ನಾಲ್ಕು ಚಿತ್ರಗಳಿವೆ. ಅವುಗಳ ಜೊತೆಗೆ ಈ ಬರಹವಿದೆ: ‘‘ನದಿಯ ಬದಿಯಲ್ಲಿರುವ ಭೂಗತ ಕೋಣೆಗಳ ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಕರಗಿಹೋಗಿರುವ ಮತ್ತು ದುರ್ಬಲಗೊಂಡಿರುವ ಸುಣ್ಣದ ಗಾರೆಯನ್ನು ತೆಗೆದು, ಅದರ ಜಾಗದಲ್ಲಿ ಹೊಸದಾಗಿ ಸುಣ್ಣದ ಗಾರೆಯನ್ನು ಮಾಡಲಾಗಿದೆ. ಹೊಸದಾಗಿ ಗಾರೆಯನ್ನು ಮಾಡುವ ಮೊದಲು, ಸುಣ್ಣವನ್ನು ಸಾಂಪ್ರದಾಯಿಕವಾಗಿ ಸಂಸ್ಕರಿಸಲಾಗಿದೆ’’.

22 ಬಾಗಿಲುಗಳನ್ನು ಯಾಕೆ ಸೀಲ್ ಮಾಡಲಾಗಿದೆ?

‘‘1958ರ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಪಳೆಯುಳಿಕೆಗಳ ಕಾಯ್ದೆಯ ಪ್ರಕಾರ, ಕೆಂದ್ರ ಸರಕಾರ ಬಯಸಿದರೆ ಸ್ಮಾರಕವೊಂದರ ಭಾಗವನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಅದು ಮುಚ್ಚಬಹುದಾಗಿದೆ. ಮುಚ್ಚಿರುವುದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಒಂದು- ಸಂದರ್ಶಕರು ಮತ್ತು ಸ್ಮಾರಕದ ಭದ್ರತೆ’’ ಎಂದು ಹಿರಿಯ ಎಎಸ್‌ಐ ಅಧಿಕಾರಿಯೊಬ್ಬರು The Quint ಗೆ ಹೇಳಿದರು. ಆ ಅಧಿಕಾರಿ ಹೀಗೆ ಹೇಳುತ್ತಾರೆ: ‘‘ಸ್ಮಾರಕಗಳನ್ನು ಸಾರ್ವಜನಿಕರು ವಿರೂಪಗೊಳಿಸುತ್ತಾರೆ. ನಾವು ಇದನ್ನೆಲ್ಲ ನೋಡಿದ್ದೇವೆ ಮತ್ತು ಅದರ ಬಗ್ಗೆ ಓದಿದ್ದೇವೆ. ಸ್ಮಾರಕವೊಂದರ ತೀರಾ ಒಳಗಿರುವ ಸ್ಥಳಗಳು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದ್ದರೆ, ಅಲ್ಲಿ ಸಿಬ್ಬಂದಿ ಮತ್ತು ಉತ್ತಮ ಬೆಳಕಿನ ವ್ಯವಸ್ಥೆ ಇರಬೇಕಾಗುತ್ತದೆ. ಸ್ಮಾರಕದ ಒಂದು ಭಾಗವು ನೆಲ ಮಟ್ಟದಲ್ಲಿದ್ದರೆ, ಆ ಭಾಗವು ಎಷ್ಟು ಗಟ್ಟಿಯಾಗಿದೆ ಎನ್ನುವುದನ್ನು ನಾವು ಪರಿಶೀಲಿಸಬೇಕು ಮತ್ತು ನಿರಂತರವಾಗಿ ಪರಿಶೀಲಿಸುತ್ತಾ ಇರಬೇಕಾಗುತ್ತದೆ. ಕೆಲವು ಸ್ಮಾರಕಗಳಿಗೆ ಪ್ರತಿ ದಿನ 20,000ಕ್ಕೂ ಅಧಿಕ ಜನರು ಭೇಟಿ ಕೊಡುತ್ತಾರೆ. ಇಂಥ ಸ್ಥಳಗಳಿಗೆ ಒಂದೇ ಸಮಯದಲ್ಲಿ 500 ಜನರು ಭೇಟಿ ನೀಡಿದರೆ ಏನಾಗುತ್ತದೆ? ಅದನ್ನು ನಿಭಾಯಿಸುವುದು ಅಸಾಧ್ಯ’’.

‘‘ಸ್ಮಾರಕವೊಂದರ ನಿರ್ದಿಷ್ಟ ಭಾಗದ ತೂಕ ಧಾರಣೆ ಸಾಮರ್ಥ್ಯವು ಅಲ್ಲಿಗೆ ಭೇಟಿ ನೀಡುವ ಜನರಿಗೆ ಹೋಲಿಸಿದರೆ ಕಡಿಮೆಯಾಗಿರಬಹುದು. ಇದು ಸ್ಮಾರಕ ಮತ್ತು ಸಂದರ್ಶಕರಿಗೂ ಅಪಾಯಕಾರಿಯಾಗಿರುತ್ತದೆ’’ ಎಂದು ಅಧಿಕಾರಿ ಹೇಳಿದರು. ಸ್ಮಾರಕವೊಂದನ್ನು ನಿರ್ಮಿಸುವಾಗ, ಅದರ ವಿವಿಧ ಭಾಗಗಳನ್ನು ‘ಉಪಯುಕ್ತತೆ’ಯನ್ನು ಮನಸ್ಸಿನಲ್ಲಿಟ್ಟುಕೊಂಡು ಕಟ್ಟಲಾಗುತ್ತದೆ. ಈಗ ಅವುಗಳು ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಾಗಿವೆ. ಹಾಗಾಗಿ, ಈ ಬಗ್ಗೆ ಎಎಸ್‌ಐ ಗಮನಹರಿಸಬೇಕಾಗುತ್ತದೆ ಎಂದರು.

ಈ ಮುಚ್ಚಿದ ಕೋಣೆಗಳು ಏನು?

‘‘ಈ ಮುಚ್ಚಿದ ಬಾಗಿಲುಗಳು, ದಿಲ್ಲಿಯಲ್ಲಿರುವ ಹುಮಾಯೂನ್‌ನ ಗೋರಿ, ಸಫ್ದರ್‌ಜಂಗ್‌ನ ಗೋರಿ ಮತ್ತು ಅಬ್ದುಲ್ ರಹೀಮ್ ಖಾನ್-ಇ-ಖಾನನ್‌ನ ಗೋರಿಗಳಲ್ಲಿರುವಂತೆ ಕಮಾನಿನ ಆಕೃತಿಯಲ್ಲಿರುವ ಗ್ಯಾಲರಿಗಳು’’ ಎಂದು ಎಎಸ್‌ಐಯ ಮಾಜಿ ಪ್ರಾದೇಶಿಕ ನಿರ್ದೇಶಕ (ಉತ್ತರ) ಕೆ.ಕೆ. ಮುಹಮ್ಮದ್ The Quint ಗೆ ಹೇಳಿದರು.

ತಾಜ್‌ಮಹಲ್ ‘ದೇವಸ್ಥಾನ’ ಎಂಬ ವಾದವನ್ನು ತಿರಸ್ಕರಿಸಿದ ಮಾಜಿ ಎಎಸ್‌ಐ ಅಧಿಕಾರಿ ಮುಹಮ್ಮದ್, ‘‘ಅದು ದೇವಸ್ಥಾನವಾಗಿದ್ದರೆ, ಅದರಲ್ಲಿ ಗರ್ಭಗುಡಿ, ಅಂತರಾಳ ಮತ್ತು ಮಂಟಪ ಇರುತ್ತದೆ. ಇಂಥವುಗಳೇನೂ ಅಲ್ಲಿಲ್ಲ. ಆ ಸ್ಥಳಕ್ಕೆ ನಾನು ಹಲವು ಬಾರಿ ಹೋಗಿದ್ದರೂ ಅವುಗಳನ್ನು ನಾನು ಯಾವತ್ತೂ ನೋಡಿಲ್ಲ. ನನ್ನ ಕೆಳಗಿನ ಅಧಿಕಾರಿಗಳೂ ಅಲ್ಲಿ ದೇವಾಲಯ ಅಥವಾ ಶಿವಲಿಂಗವನ್ನು ನೋಡಿಲ್ಲ. ಅರ್ಜಿದಾರರು ಇವುಗಳನ್ನು ಎಲ್ಲಿ ನೋಡಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಇವುಗಳೆಲ್ಲವೂ ಸಮಸ್ಯೆಗಳನ್ನು ಸೃಷ್ಟಿಸುವ ವಿಧಾನಗಳು’’ ಎಂದರು. ಮುಹಮ್ಮದ್‌ಗೆ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಸ್ಮಾರಕದ ಎತ್ತರವನ್ನು ಹೆಚ್ಚಿಸುವುದಕ್ಕಾಗಿ ಗ್ಯಾಲರಿಗಳನ್ನು ನಿರ್ಮಿಸಲಾಗಿತ್ತು ಎಂದು ಅವರು ಹೇಳಿದರು. ‘‘ಕೆಲವು ದಶಕಗಳ ಹಿಂದಿನವರೆಗೂ ಆ ಸ್ಥಳಕ್ಕೆ ಪ್ರವೇಶ ನೀಡಲಾಗಿತ್ತು. ಬಳಿಕ ಅದನ್ನು ನಿಲ್ಲಿಸಲಾಯಿತು. ‘‘ಇದೊಂದು ವ್ಯವಸ್ಥಾಪನೆಗೆ ಸಂಬಂಧಿಸಿದ ವಿಷಯ ಅಷ್ಟೆ. ಅಲ್ಲಿ ನೋಡಲಿಕ್ಕೆ ಏನೂ ಸಿಕ್ಕಿಲ್ಲ’’ ಎಂದರು.

ಅರ್ಜಿ ಯಾಕೆ?

ತಾಜ್‌ಮಹಲ್‌ನ ಮೂಲದ ಸುತ್ತ ಆವರಿಸಿರುವ ‘ವಿವಾದ’ವನ್ನು ಬಗೆಹರಿಸುವ ಪ್ರಯತ್ನವಾಗಿ, ಅಲ್ಲಿನ ‘ಮುಚ್ಚಿದ ಬಾಗಿಲು’ಗಳನ್ನು ತೆರೆಯಲು ನಿರ್ದೇಶನ ನೀಡುವಂತೆ ಕೋರಿ ಅಯೋಧ್ಯೆ ಬಿಜೆಪಿಯ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್ ಮೇ 4ರಂದು ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿದರು.

‘‘ಇತಿಹಾಸಕಾರ’’ ಪಿ.ಎನ್. ಓಕ್ ತನ್ನ ಪುಸ್ತಕ ‘ತಾಜ್‌ಮಹಲ್: ದ ಟ್ರೂ ಸ್ಟೋರಿ’ಯಲ್ಲಿ ‘‘ಈ ಕೋಣೆಗಳಲ್ಲಿ ಶಿವ ದೇವಾಲಯವಿದೆ’’ ಎಂದು ಹೇಳಿರುವುದರಿಂದ ಆ 22 ಮುಚ್ಚಿದ ಬಾಗಿಲುಗಳನ್ನು ತೆರೆಯಬೇಕು ಎಂಬುದಾಗಿ ಅರ್ಜಿದಾರರು ಬಯಸಿದ್ದಾರೆ ಎಂಬುದಾಗಿ The Indian Express ವರದಿ ಮಾಡಿತ್ತು.

ಆ ಅರ್ಜಿಯನ್ನು ನ್ಯಾಯಾಲಯವು ಮೇ 12ರಂದು ತಳ್ಳಿಹಾಕಿತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಉಪಾಧ್ಯಾಯ ಮತ್ತು ಸುಭಾಷ್ ವಿದ್ಯಾರ್ಥಿ ಅವರನ್ನೊಳಗೊಂಡ ನ್ಯಾಯಪೀಠವು, ‘‘ಭದ್ರತಾ ಕಾರಣಗಳಿಗಾಗಿ ಕೋಣೆಗಳನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದರೆ, ಅದು ಮಾಹಿತಿ. ನಿಮಗೆ ಅದರಿಂದ ತೃಪ್ತಿಯಾಗದಿದ್ದರೆ ಅದನ್ನು ಪ್ರಶ್ನಿಸಿ’’ ಎಂದು ಅರ್ಜಿದಾರರಿಗೆ ಹೇಳಿತು.

‘‘ದಯವಿಟ್ಟು ಎಂಎ ಪದವಿಗೆ ಹೆಸರು ನೋಂದಾಯಿಸಿ, ಬಳಿಕ ಎನ್‌ಇಟಿ, ಜೆಆರ್‌ಎಫ್‌ಗೆ ಹೋಗಿ. ಇಂಥ ವಿಷಯದ ಬಗ್ಗೆ ಸಂಶೋಧನೆಗೆ ಯಾವುದೇ ವಿಶ್ವವಿದ್ಯಾನಿಲಯ ಅನುಮತಿ ನಿರಾಕರಿಸಿದರೆ, ಬಳಿಕ ನಮ್ಮಲ್ಲಿಗೆ ಬನ್ನಿ’’ ಎಂಬುದಾಗಿಯೂ ನ್ಯಾಯಾಲಯ ಅರ್ಜಿದಾರರಿಗೆ ಹೇಳಿತು.

ಕೃಪೆ: thequint.com

Writer - ಸೋಮ್ಯ ಲಖಾನಿ

contributor

Editor - ಸೋಮ್ಯ ಲಖಾನಿ

contributor

Similar News