ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ʼಟೆಕ್ನೋ ಕಲ್ಚರಲ್ ಫೆಸ್ಟ್ ಟಿಯಾರಾ 2022ʼ ಕಾರ್ಯಕ್ರಮ

Update: 2022-05-20 11:00 GMT

ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಆಯೋಜಿಸಿದ ಎರಡು ದಿನಗಳ ಟೆಕ್ನೋ ಕಲ್ಚರಲ್ ಫೆಸ್ಟ್ ಟಿಯಾರಾ 2022, ಮೇ 18 ಮತ್ತು  19ರಂದು ಕಾಲೇಜಿನ ಆವರಣದಲ್ಲಿ ನಡೆಯಿತು.

ನೋವಿಗೊ ಸೊಲ್ಯೂಷನ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪ್ರವೀಣ್ ಕುಮಾರ್ ಕಲ್ಭಾವಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಕೃತಕ ಬುದ್ದಿಮತ್ತೆ ಚಾಲಿತ ವ್ಯಕ್ತಿತ್ವ `ಅಟ್ಲಾಸ್' ಉದ್ಘಾಟನೆಯ ಪ್ರಮುಖ ಆಕರ್ಷಣೆಯಾಗಿತ್ತು ಹಾಗೂ ಇದು ಸಭೆಗೆ ಅದ್ಭುತ ಸ್ವಾಗತವನ್ನು ನೀಡಿತು. ಈ ಮೂಲಕ ಕಾಲೇಜು ಆಯೋಜಿಸಿದ ಮೊಟ್ಟಮೊದಲ ಟೆಕ್ನೋ ಕಲ್ಚರಲ್ ಫೆಸ್ಟ್ ಟಿಯಾರಾ ವಿದ್ಯುಕ್ತವಾಗಿ ಅನಾವರಣಗೊಂಡಿತು.

ಪ್ರವೀಣ್ ಕುಮಾರ್ ಕಲ್ಭಾವಿ ಅವರು ತಮ್ಮ ಭಾಷಣದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲು ಇಂತಹ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಮುಂದುವರಿದು ಮಾತನಾಡಿದ ಅವರು, ತಂತ್ರಜ್ಞಾನದೊಂದಿಗೆ ಬೆರೆತ ಕಲಿಕೆಯನ್ನು ಪ್ರೇರೇಪಿಸಿದರು ಮತ್ತು ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುತ್ತವೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ ರಿಯೊ ಡಿ'ಸೋಜಾ, ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದರು. ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮುಂದಿನ  ದಿನಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.

ಕಾಲೇಜಿನ ನಿರ್ದೇಶಕರಾದ ವಂ ವಿಲ್ಫ್ರೆಡ್ ಪ್ರಕಾಶ್ ಡಿ'ಸೋಜಾ, ಸಹ ನಿರ್ದೇಶಕರಾದ ವಂ ಆಲ್ವಿನ್ ರಿಚರ್ಡ್ ಡಿ'ಸೋಜಾ, ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ಶ್ರೀ ರಾಕೇಶ್ ಲೋಬೋ ಅವರ ಜೊತೆಗೆ ಕಾರ್ಯಕ್ರಮದ ಸಂಚಾಲಕರಾದ ವಿನೂತನ್ ಕಲಿವೀರ್ ಮತ್ತು ಅವಿಲಾ ಪ್ರಿಯಾ ಪಿಂಟೊ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ವಿದ್ಯಾರ್ಥಿ ಸಂಚಾಲಕರಾದ ಶರಧಿ ಮತ್ತು ಕ್ಯಾರನ್ ಡಿ'ಕುನ್ಹಾ ಅವರು ಜೊತೆಗಿದ್ದರು.

ತಾಂತ್ರಿಕ-ಸಾಂಸ್ಕೃತಿಕ ಕಾರ್ಯಕ್ರಮಗಳ ಹೊರತಾಗಿ, ಫೆಸ್ಟ್ ನ ಪ್ರಮುಖ ಆಕರ್ಷಣೆಗಳಲ್ಲಿ ಮೊದಲ ದಿನ ನಡೆದ ಬ್ಯಾಂಡ್‍ಗಳ ಸ್ಪರ್ಧೆ ಮತ್ತು ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಜನಪ್ರಿಯ ಡಿಜೆ ಶಿವ ಮಾನ್ವಿ ಅವರ ಡಿಜೆ ನೈಟ್ ಎಲ್ಲರ ಗಮನ ಸೆಳೆಯಿತು.‌

2 ದಿನಗಳಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳಿಗೆ ಬಹುಮಾನಗಳನ್ನು ವರ್ಣರಂಜಿತ ಪ್ರಶಸ್ತಿ ಸಮಾರಂಭದಲ್ಲಿ ನೀಡಲಾಯಿತು. ತಾಂತ್ರಿಕ ವಿಭಾಗದಲ್ಲಿ ಎನ್‍ಎಂಎಎಂ ತಾಂತ್ರಿಕ ಸಂಸ್ಥೆ, ನಿಟ್ಟೆ ಸಮಗ್ರ ಚಾಂಪಿಯನ್‍ಶಿಪ್ ಪಡೆದರೆ, ಬಂಟಕಲ್‍ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಸಂಸ್ಥೆ ಸಮಗ್ರ ರನ್ನರ್ಸ್ ಅಪ್ ಪ್ರಶಸ್ತಿ ಪಡೆಯಿತು.

ತಾಂತ್ರಿಕೇತರ ವಿಭಾಗದಲ್ಲಿ ನಿಟ್ಟೆಯ ಎನ್‍ಎಂಎಎಂ ತಾಂತ್ರಿಕ ಸಂಸ್ಥೆ ಸಮಗ್ರ ಚಾಂಪಿಯನ್‍ಶಿಪ್ ಮತ್ತು ಉಜಿರೆಯ ಎಸ್ ಡಿಎಂ ಪದವಿ ಕಾಲೇಜು ಸಮಗ್ರ ರನ್ನರ್ಸ್ ಅಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News