ಕಾಪು: ಕಡಲ್ಕೊರೆತ ತಡೆಗೆ ಶಾಶ್ವತ ತಡೆಗೋಡೆ ರಚನೆಗೆ ಆಗ್ರಹ

Update: 2022-05-20 17:06 GMT

ಕಾಪು : ಕಡಲ್ಕೊರೆತ ತಡೆಗೆ ಶಾಶ್ವತ ತಡೆಗೋಡೆ ರಚನೆಯಲ್ಲಿ ಅವ್ಯವಹಾರ ನಡೆದಿದ್ದು, ಕೂಡಲೇ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಕಾಪು ವಿಧಾನಸಭಾ ವ್ಯಾಪ್ತಿಯ ಕರಾವಳಿಯಲ್ಲಿ ತನಿಖೆಗೆ ಅಗ್ರಹಿಸಿ ಪಾದಾಯಾತ್ರೆ ನಡೆಸಿ ನ್ಯಾಯಕ್ಕಾಗಿ ಹಕ್ಕೊತ್ತಾಯ ಮಾಡುವುದಾಗಿ ವಿನಯಕುಮಾಆರ್ ಸೊರಕೆ ಎಚ್ಚರಿಸಿದರು. 

ಕಾಪುವಿನ ಪೊಲಿಪುವಿನಲ್ಲಿ ಕಡಲ್ಕೊರೆತಕ್ಕೆ ಹಾಕಲಾದ ಕಲ್ಲುಗಳನ್ನು ತೆರವುಗೊಳಿಸಿರುವುದರಿಂದ ಕಡಲ್ಕೊರೆತ ಭೀತಿ ಉಂಟಾಗಿದ್ದು, ಕೂಡಲೇ ತಡೆಗೋಡೆ ರಚಿಸುವಂತೆ ಆಗ್ರಹಿಸಿ, ಸರಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ಸ್ಥಳೀಯರು ಶುಕ್ರವಾರ ಸಾಂಕೇತಿಕ ಪ್ರತಿಭಟನೆ ಹಾಗೂ ಬೀಚ್ ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಮಾತನಾಡಿ, ರಾಜ್ಯ ಸರ್ಕಾರ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಣ್ಣು, ಕಿವಿ, ಮೂಗು ಇಲ್ಲದ ಸರ್ಕಾರದಿಂದ ಏನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. 

ಕಡಲ್ಕೊರೆತಕ್ಕೆ ತುರ್ತು ಸಂದರ್ಭದಲ್ಲಿ ಕಾಮಗಾರಿಗಳು ಪಡುಕಡೆಯಿಂದ ಹೆಜಮಾಡಿವರೆಗೆ ನಡೆದಿದೆ. ಕಾಂಗ್ರೆಸ್ ಸರ್ಕಾರದ ಉಚ್ಚಿಲ, ಎರ್ಮಾಳಿನಲ್ಲಿ ಶಾಶ್ವತ ತಡೆಗೋಡೆಗೆ 89 ಕೋಟಿ ರೂ. ಮಂಜೂರಾಗಿತ್ತು. ಆದರೆ ಬಳಿಕ ಬಂದ ಸರ್ಕಾರ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಈ ಕಾಮಗಾರಿಯಲ್ಲಿ ಲೋಪದೋಷಗಳು ಇದೆ. 50 ಶೇ. ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿಯಲ್ಲಿ ಲೋಪ ದೋಷ ಆಗಿರುವುದರ ಬಗ್ಗೆ ಹಾಗೂ ತುರ್ತು ಕಡಲ್ಕೊರೆತ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ. ಎಲ್ಲಾ ತುರ್ತು ಕೆಲಸಗಳ ಕಲ್ಲು ಹಾಕುವ ಮೂಲಕ ಬಿಲ್ ಪಡೆಯುತಿರುವ ಗುತ್ತಿಗೆದಾರರ ಬಗ್ಗೆಯೂ ತನಿಖೆ ಆಗಬೇಕಾಗಿದೆ. ಈ ಬಗ್ಗೆ ಆರ್‍ಟಿಐಯಲ್ಲಿ ಮಾಹಿತಿ ಪಡೆಯಲಿದ್ದೇವೆ ಎಂದರು.

ಎರಡು ದಿನಗಳ ಗಡುವು

ಕಾಪು ಪುರಸಭಾ ವ್ಯಾಪ್ತಿಯ ಪೊಲಿಪು ವಾರ್ಡ್‍ನ ಸಮುದ್ರ ತೀರದಲ್ಲಿ ಕಡಲ್ಕೊರೆತ ತಡೆಗೆ ತಡೆಗೋಡೆಯನ್ನು ಈ ಹಿಂದೆ ಸಮುದ್ರ ದಡದಲ್ಲಿ ಹಾಕಲಾಗಿದ್ದ ತಡೆಗೋಡೆಯನ್ನು ತೆರವುಗೊಳಿಸಿ, ಹೊಸತಾಗಿ ಸದೃಢವಾದ ತಡೆಗೋಡೆ ನಿರ್ಮಿಸಿಕೊಡುತ್ತೇವೆ ಎಂದು ವಾಗ್ದಾನ ಮಾಡಿ ಯಾವುದೇ ರೀತಿಯ ಕಾಮಗಾರಿಯನ್ನು ಕೈಗೊಳ್ಳದೆ ಇರುವುದರಿಂದ ಸ್ಥಳೀಯರು ಸಮಸ್ಯೆ ಅನುಭವಿಸುತಿದ್ದಾರೆ. ಎರಡು ದಿನಗಳ ಒಳಗೆ ಕಾಮಗಾರಿ ಕೈಗೆತ್ತಿಕೊಳ್ಳ ದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ  ಮಾಜಿ ಶಾಸಕ ವಿನಯಕುಮಾರ್ ಸೊರಕೆ ಎಚ್ಚರಿಸಿದರು.

ಸ್ಥಳೀಯರಾದ ರತ್ನಾಕರ ಮೆಂಡನ್ ಮಾತನಾಡಿ, ಇಲ್ಲಿನ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿ, ಕಾರ್ಯ ನಿರ್ವಾಹಕ ಅಭಿಯಂತರರು, ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗಿದೆ. ಎಲ್ಲರೂ ಶೀಘ್ರದಲ್ಲೇ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಭರವಸೆ ನೀಡಿ ಮೂರು ತಿಂಗಳು ಕಳೆದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವ ಕಾರಣ ಮತ್ತು ಮಳೆಗಾಲವು ಪ್ರಾರಂಭವಾಗಿದ್ದು  ಮನೆ ಮರಗಳು ಸಮುದ್ರ ಪಾಲಾಗುವ ಭೀತಿ ಇದೆ ಎಂದರು. 

ಪುರಸಭಾ ಸದಸ್ಯೆ ರಾಧಿಕಾ ಸುವರ್ಣ, ಫರ್ಜಾನಾ, ಶೋಭಾ ಬಂಗೇರ, ಕಾಂಗ್ರೆಸ್ ಮುಖಂಡರಾದ ರಾಜೇಶ್ ಮೆಂಡನ್, ಸುಧಾಕರ ಸಾಲ್ಯಾನ್, ಅಶ್ವಿನಿ ಬಂಗೇರ, ಲವ ಕರ್ಕೇರ, ದೇವರಾಜ್ ಕೋಟ್ಯಾನ್ , ಅರುಣ್ ಶೆಟ್ಟಿ, ಅಶೋಕ್ ನಾಯಿರಿ, ಸ್ಥಳೀಯರಾದ ಸದಾನಂದ ಸುವರ್ಣ, ರತ್ನಾಕರ ಮೆಂಡನ್, ಲಕ್ಷ್ಮಣ ಸುವರ್ಣ, ಸದಾಶಿವ ಸುವರ್ಣ, ಅಶೋಕ್ ಸುವರ್ಣ, ಉದಯ ಸುವರ್ಣ, ಮನೋಜ್ ಪುತ್ರನ್, ದಿನೇಶ್ ಕುಂದರ್, ದಿನೇಶ್ ಮೆಂಡನ್, ಸೂರ್ಯನಾರಾಯಣ್, ಅಖಿಲ್, ರೋಹಿಣಿ, ಸುಧಾಕರ ಸುವರ್ಣ, ರಿತೇಶ್, ಕೃಷ್ಣ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News