ಮೇ 24ರಂದು ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ: ಅಬ್ದುಲ್ ರಶೀದ್ ಹಾಜಿ

Update: 2022-05-21 08:36 GMT

ಮಂಗಳೂರು, ಮೇ 21: ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಮೇ 24ರಂದು ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಯಿಂದ ಹಜ್ ಯಾತ್ರೆ ಕೈಗೊಳ್ಳುವವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ  ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ,  ಈ ಬಾರಿ ಈ ಮೂರು ಜಿಲ್ಲೆಗಳಿಂದ 266 ಮಂದಿ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ ಎಂದರು.  

ಮೇ 24ರಂದು ಬೆಳಗ್ಗೆ 10 ಗಂಟೆಗೆ ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿರುವ ಅಡ್ಕಾ ಸಮುದಾಯ ಭವನದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದ್ದು, ಹಜ್ ಯಾತ್ರೆಗೆ ತೆರಳುವವರಿಗೆ ಅಲ್ಲಿನ ನಿಯಮಗಳ ಬಗ್ಗೆ, ವಿದೇಶ ಸಂಚಾರ ಪ್ರಕ್ರಿಯೆಗಳು, ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಕಾರ್ಯಕ್ರಮವನ್ನು ಯೆನೆಪೊಯ ಅಬ್ದುಲ್ಲಾ ಕುಂಞಿ ಉದ್ಘಾಟಿಸಲಿದ್ದು, ತರಬೇತಿ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಚಾಲನೆ ನೀಡಲಿದ್ದಾರೆ. ಕರ್ನಾಟಕ ಹಜ್ ಸಮಿತಿ ಅಧ್ಯಕ್ಷ ಮುಹಮ್ಮದ್ ರೌಫುದ್ದೀನ್ ಕಚೀರಿವಾಲಾ ಅಧ್ಯಕ್ಷತೆ ವಹಿಸಲಿದ್ದಾರೆ.

ಶಾಸಕರಾದ ಯು.ಟಿ.ಖಾದರ್, ಡಾ.ವೈ.ಭರತ್ ಶೆಟ್ಟಿ, ಕರ್ನಾಟಕ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ, ಮಾಜಿ ಶಾಸಕ ಮೊಯ್ದಿನ್‌ ಬಾವ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಸೆಂಟ್ರಲ್ ಮುಸ್ಲಿಂ ಕಮಿಟಿ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ರಶೀದ್ ಹಾಜಿ, ಕರ್ನಾಟಕ ಹಜ್ ಸಮಿತಿ ಸದಸ್ಯರಾದ ಖುಸ್ರೋ ಖುರೇಶಿ, ಎ.ಬಿ. ಮುಹಮ್ಮದ್ ಹನೀಫ್ ನಿಝಾಮಿ, ಮೊಹೀನ್ ಖಾನ್, ಚಾಂದಾ ಪಾಶಾ ಭಾಗವಹಿಸಲಿದ್ದಾರೆ.

ಧಾರ್ಮಿಕ ವಿದ್ವಾಂಸರಾದ ಡಾ. ಅಬ್ದುರ‌್ರಶೀದ್ ಝೈನಿ ಕಾಮಿಲ್ ಮತ್ತು ಯು.ಕೆ. ಅಝೀಝ್ ದಾರಿಮಿ ಉಪಸ್ಥಿತರಿರುವರು. ತರಬೇತಿ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಹಜ್ ಸಮಿತಿ ಮಾಜಿ ಸದಸ್ಯ ಕೆ.ಎಂ. ಸಿದ್ದೀಕ್ ಮೋಂಟುಗೋಳಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

2020-2021ರಲ್ಲಿ ಕೋವಿಡ್ ಕಾರಣದಿಂದಾಗಿ ವಿದೇಶಿ ಯಾತ್ರಿಕರಿಗೆ ನಿರ್ಬಂಧ ಹೇರಲಾಗಿತ್ತು. ಈ ವರ್ಷ ಹಜ್ ಯಾತ್ರೆ ಆರಂಭಗೊಂಡಿರುವುದು ಸಮುದಾಯದಲ್ಲಿ ಸಂತೋಷವನ್ನುಂಟು ಮಾಡಿದೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್,  ಹಜ್ ಸಮಿತಿ ಸದಸ್ಯ ಎ.ಬಿ.ಮುಹಮ್ಮದ್ ಹನೀಫ್ ನಿಝಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News