ಕೊಣಾಜೆ: ಪಾವೂರು-ಉಳಿಯ ಕುದ್ರು ಸಂಪರ್ಕ ಕಾಲು ಸೇತುವೆ ನೀರುಪಾಲು

Update: 2022-05-21 15:15 GMT

ಕೊಣಾಜೆ: ದ.ಕ. ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ  ಪಾವೂರು ಗ್ರಾಮದ ಉಳಿಯ ಕುದ್ರು (ದ್ವೀಪ) ಸಂಪರ್ಕಕ್ಕೆ ಅಲ್ಲಿನ ನಿವಾಸಿಗಳು ನಿರ್ಮಿಸಿದ್ದ ಕಾಲು ಸೇತುವೆ ನೀರು ಪಾಲಾಗಿದೆ.

ಪಾವೂರು-ಉಳಿಯ ದ್ವೀಪದಲ್ಲಿ ಕಳೆದ ಅನೇಕ ವರುಷಗಳಿಂದ ಸುಮಾರು 60 ಕುಟುಂಬಗಳು ವಾಸವಾಗಿವೆ.  ದಾನಿಗಳ ಸಹಕಾರದಿಂದ ಮತ್ತು ಸ್ವಂತ ಖರ್ಚಿನಿಂದ ಕುದ್ರು ನಿವಾಸಿಗಳು ಸುಮಾರು 18 ಲಕ್ಷ ರೂಪಾಯಿ ಖರ್ಚಲ್ಲಿ ಅಡ್ಯಾರಿಂದ‌ ಪಾವೂರು ಉಳಿಯ ಕುದ್ರು ಸಂಪರ್ಕಕ್ಕಾಗಿ 250 ಮೀಟರ್ ಉದ್ದದ ಸೇತುವೆಯನ್ನ ನಿರ್ಮಿಸಿದ್ದರು. ಕಬ್ಬಿಣದ ಸಲಾಕೆ ಮತ್ತು ಮರದ ಹಲಗೆಯ ಈ ತಾತ್ಕಾಲಿಕ ಕಾಲು ಸೇತುವೆಯನ್ನು ಕೆಲವು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ ಕೆಲವು ದಿನಗಳಿಂದ ಸುರಿದ ಮಳೆಗೆ  ಈ ಸೇತುವೆ ನಾಶವಾಗಿದೆ.

ಅಡ್ಯಾರ್ ಬಳಿಯ ನೇತ್ರಾವತಿ ನದಿಯ ಮಧ್ಯದಲ್ಲಿ ಈ ದ್ವೀಪವಿದ್ದು ಮಂಗಳೂರು ನಗರಕ್ಕೆ ಹತ್ತಿರವಾಗಿದೆ. ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಇಲ್ಲಿನ ನಿವಾಸಿಗಳು ಶಾಶ್ವತ ಸೇತುವೆಗಾಗಿ ಶಾಸಕರು, ಸಂಸದರಿಗೆ ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರೂ ಸರಕಾರ ಮನವಿಯನ್ನು ಇಷ್ಟರವರೆಗೂ ಪರಿಗಣಿಸಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News