ಏಳು ಮಹಾಪಾತಕಗಳು

Update: 2022-05-21 19:22 GMT

ನಾನು ನಾನು ಅನ್ನುವುದು ಧೋರಣೆಯೂ ಹೌದು, ಸಹಜವಾದ ಗುರುತೂ ಹೌದು, ಅಹಂಕಾರದಷ್ಟು ಗಾಢವೂ ಹೌದು. ಅದನ್ನೇ ನಾರ್ಸಿಸಮ್ ಎನ್ನುತ್ತಾರೆ. ನಾರ್ಸಿಸಮ್‌ನ ಏಳು ಮಹಾಪಾತಕಗಳನ್ನು ಮನೋವಿಜ್ಞಾನಿಗಳು ಗುರುತಿಸುತ್ತಾರೆ.

ನಾಚಿಕೆಗೇಡಿತನ: ಸಾಮಾನ್ಯವಾಗಿ ಆತ್ಮರತಿಯ ವ್ಯಕ್ತಿಗಳು ಮುಕ್ತವಾಗಿ ಮತ್ತು ಅಭಿಮಾನದಿಂದ ನಾಚಿಕೆಗೇಡಿಯಾಗಿರುತ್ತಾರೆ. ‘‘ನಾನೂಂದ್ರೆ ಏನು? ನಾನೂಂದ್ರೆ ಯಾರು? ನಾನು ಮನಸ್ಸು ಮಾಡಿದರೆ ಏನು ಮಾಡ್ತೇನೆ ಗೊತ್ತಾ?’’ ಈ ವಾಕ್ಯಗಳೆಲ್ಲಾ ಅವರವೇ. ಅವರು ತಾವು ಯಾವಾಗಲೂ ವಿಮರ್ಶಾತೀತವಾಗಿರಲು ಬಯಸುತ್ತಾರೆ. ತನ್ನಲ್ಲಿ ವಿಮರ್ಶೆ ಮಾಡಲೇನಿದೆ? ನನ್ನ ಟೀಕಿಸುವವನು ಅಥವಾ ವಿಮರ್ಶಿಸುವವನು ಖಂಡನೆಗೆ ಅರ್ಹನೆಂದು ಅವರ ಅಚಲ ನಂಬಿಕೆ. ತಾವು ಶ್ರೀಮಾನ್ ಅಥವಾ ಶ್ರೀಮತಿ ಪರ್ಫೆಕ್ಟ್. ಒಂದು ವೇಳೆ ಅವರ ಯಾವುದಾದರೂ ಕೆಲಸ ಖಂಡಿತವಾಗಿ ಖಂಡನೀಯ ಮತ್ತು ತಪ್ಪುಎಂದು ನಿರೂಪಿಸಿಬಿಟ್ಟಿದ್ದೇ ಆದರೂ, ಅವರು ಹೇಳುವುದೇನೆಂದರೆ, ‘‘ಅಕಸ್ಮಾತ್, ಈ ಕೆಲಸ ತಪ್ಪಾಗಿರಬಹುದು. ಆದರೆ ನನ್ನ ಉದ್ದೇಶವು ಉತ್ತಮವಾಗಿತ್ತು. ನಾನು ಒಳ್ಳೆಯ ಉದ್ದೇಶದಿಂದ ಮಾಡಿದ್ದು’’ ಎಂದು ಹೇಳುತ್ತಾರೆಯೇ ಹೊರತು, ತಾವು ಅಪರಾಧ ಪ್ರಜ್ಞೆಯಿಂದ ನರಳುವುದೂ ಇಲ್ಲ. ತಾವು ತಪ್ಪಿತಸ್ಥರೆಂದು ಒಪ್ಪಿಕೊಳ್ಳುವುದೂ ಇಲ್ಲ.

ಅಸಾಧ್ಯ ಸಾಧಕ: ನಾರ್ಸಿಸಿಸ್ಟ್‌ಗಳು ತಮ್ಮನ್ನು ತಾವು ಪರ್ಫೆಕ್ಟ್ ಎಂದು ನಂಬಿರುವ ಕಾರಣದಿಂದ ಇತರರಿಗೆ ಸಾಧ್ಯವಾಗದ ಅದ್ಭುತಗಳನ್ನು ತಾವು ಸೃಷ್ಟಿಸುತ್ತೇವೆಂದು ನಂಬಿರುತ್ತಾರೆ. ಇತರರನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡುತ್ತಾರೆಯೇ ಹೊರತು ತಮ್ಮ ಆತ್ಮಚಿತ್ರಣವನ್ನು ಕಿಂಚಿತ್ತೂ ಮುಕ್ಕಾಗಿಸಿಕೊಳ್ಳರು.

ಸೊಕ್ಕು: ಯಾರಾದರೂ ಅವರನ್ನು ಖಂಡಿಸಿದರೆ, ಟೀಕಿಸಿದರೆ ಅವರ ಉಸಿರಾಟ ವೇಗವನ್ನು ಪಡೆಯುತ್ತದೆ. ಸೊಕ್ಕು ಉಕ್ಕೇರುತ್ತದೆ. ಆ ಟೀಕೆಗಳನ್ನು ತುಂಬಾ ವ್ಯಕ್ತಿಗತವಾಗಿ ಅದನ್ನು ತೆಗೆದುಕೊಳ್ಳುವುದು ಮಾತ್ರವಲ್ಲದೇ ಇತರರಿಗೆ ಅವರ ಬಗ್ಗೆ ನಕಾರಾತ್ಮಕವಾಗಿ ಹೇಳುತ್ತಿರುತ್ತಾರೆ. ಅವರ ಚಾರಿತ್ರ್ಯವಧೆ ಮಾಡಲು ಹೇಸುವುದಿಲ್ಲ. ಅವರಿಗೆಂತಾದರೂ ಸಂಕಟ ಬಂದರೆ ‘‘ಅವರಿಗೆ ಹಾಗೇ ಆಗಬೇಕು’’ ಎಂದು ತೃಪ್ತಿಪಡುವ ಪ್ರಯತ್ನ ಮಾಡುತ್ತಾರೆ.

ಅಸೂಯೆ: ಇತರರ ಸಾಧನೆಗಳನ್ನು ಪ್ರಶಂಸಿಸುವುದು ಅವರಿಗೆ ಎಂದೂ ಆಗದು. ಇತರರೇನಾದರೂ ಸಾಧನೆ ಮಾಡಿದ್ದಾರೆಂದರೆ ಅವರ್ಯಾವುದೋ ಅಡ್ಡದಾರಿಯಿಂದ ಮೇಲೆದ್ದು ಬಂದಿರಬೇಕು, ಯಾವುದಾದರೂ ವಶೀಲಿ, ಲಂಚ ರುಶುವತ್ತುಗಳ ಪ್ರಭಾವವಿರಬೇಕು, ‘‘ಅವರಿಗೇನು ಅವರಪ್ಪನ ಹತ್ತಿರ ದುಡ್ದು ಬೇಕಾದಷ್ಟಿದೆ ಮಾಡುತ್ತಾರೆ’’ ಹೀಗೆ, ಏನಾದರೊಂದು ಹೇಳಿಯೇ ತೀರುತ್ತಾರೆಯೇ ಹೊರತು ಮೆಚ್ಚುವುದಂತೂ ಇಲ್ಲ. ಅದ್ಯಾವ ಸೀಮೆ ಸಾಧನೆ ಎಂಬ ಉಪೇಕ್ಷೆಯು ಅಸೂಯೆಯ ಬಿಂಬವೇ ಹೊರತು ಮತ್ತೇನಿಲ್ಲ.

ಪರಾಕುಪ್ರಿಯ: ನಾರ್ಸಿಸಿಸ್ಟ್‌ಗಳು ಸಕಾರಣಕ್ಕೆ ಹೊರತಾದ ಬಿರುದುಬಾವಲಿಗಳನ್ನು ಹೊಂದುವುದಕ್ಕೆ ಇಷ್ಟಪಡುತ್ತಾರೆ. ಪಕ್ಕದ ರಸ್ತೆಯವರಿಗೆ ಅವರ ಬಗ್ಗೆ ತಿಳಿದಿರದಿದ್ದರೂ ತಾವು ಜಗದ್ವಿಖ್ಯಾತರು ಎಂದು ಅನ್ನಿಸಿಕೊಳ್ಳಲು ಆಶಿಸುತ್ತಾರೆ. ಅದನ್ನು ಉಳಿಸಿಕೊಳ್ಳಲು ಸದಾ ಹೆಣಗಾಡುತ್ತಿರುತ್ತಾರೆ. ಅದನ್ನು ಒಪ್ಪಿಕೊಳ್ಳದವರ ಬಗ್ಗೆ ಬಹಳ ಕೋಪವಿರುತ್ತದೆ.

ಪಟಾಲಂ ಪಡೆ: ತಮ್ಮ ಸುತ್ತಲೂ ಹೇಳಿದಂತೆ ಕೇಳಿಕೊಂಡಿರುವ ಒಂದಷ್ಟು ಜನರನ್ನು ಹೊಂದಿರುವಂತಹ ಮನಸ್ಥಿತಿ ಬಹಳ ಸಾಧಾರಣ. ಆ ಜನರು ಇವರಿಗೆ ಪರಾಕು ಹೇಳಲು ಮಾತ್ರವಲ್ಲದೆ, ಇವರ ಶ್ರೇಷ್ಠತೆ ಮತ್ತು ಹೆಗ್ಗಳಿಕೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಉಂಟು ಮಾಡಬೇಕೆಂದು ಇವರ ಅಭಿಲಾಷೆ. ಸಾಧಾರಣರಲ್ಲದೆ ಇವರು ಮಹಾನ್ ಸಾಧಕರಾಗಿದ್ದರೂ, ಪ್ರಖ್ಯಾತರಾಗಿದ್ದರೂ ಇಂತಹ ಮನಸ್ಥಿತಿಯಲ್ಲೇ ಇರುತ್ತಾರೆ. ಪಟಾಲಂ ಪಡೆಯನ್ನು ಹೊಂದಿರುವಾಸೆ ಆತ್ಮರತಿಸಖರದು. ಅವರನ್ನು ಶೋಷಿಸುತ್ತಿದ್ದೇವೆ ಎಂಬ ಅರಿವೂ ಅವರಿಗಿರುವುದಿಲ್ಲ. ತಮಗಾಗಿ ಅವರು ಹಾಗೆ ಮಾಡಬೇಕಾಗಿರುವುದು ಅವರ ಧರ್ಮ ಎಂದು ಅವರು ಭಾವಿಸಿರುತ್ತಾರೆ.

ಸೀಮೆಯೊಳಗೆ ಬಂಧಿತರು: ಬಹಳ ಶೋಚನೀಯ ಸಂಗತಿಯೆಂದರೆ, ತಾವು ತಮ್ಮ ಸುತ್ತಲೂ ಒಂದು ಎಲ್ಲೆಯನ್ನು ಗೀಚಿಕೊಂಡು ತಮ್ಮನ್ನು ಸಂಕುಚಿತಗೊಳಿಸಿಕೊಳ್ಳುತ್ತಿದ್ದೇವೆ ಎಂಬ ಅರಿವು ಅವರಿಗೆ ಇರದೇ ಹೋಗುವುದು. ಅವರು ತಮ್ಮ ಮತ್ತು ಇತರರ ನಡುವೆ ಕಂದಕಗಳನ್ನು ತೋಡಿಕೊಳ್ಳುತ್ತಿದ್ದೇವೆ ಎಂದು ಅವರ ಅರಿವಿಗೆ ಬಾರದೇ ಹೋಗುವುದು. ಒಂದು ವೇಳೆ ಅವರು ಖ್ಯಾತನಾಮರಾಗಿದ್ದರೆ, ಉನ್ನತ ಅಧಿಕಾರಸ್ಥರಾಗಿದ್ದರೆ ಅನಿವಾರ್ಯವಾಗಿ ಅವರಿಂದ ಕೆಲಸಗಳಾಗಬೇಕಾದವರು ತಗ್ಗುವ ಬಗ್ಗುವ ನಟನೆ ಮಾಡುತ್ತಿರುತ್ತಾರೆ. ಕೊನೆಗೊಮ್ಮೆ ಅವರಿಂದ ಏನೂ ಕೆಲಸ ಆಗುವ ಅಗತ್ಯ ಇಲ್ಲದೇ ಹೋದಾಗ ಅವರನ್ನು ತಟ್ಟನೆ ನಿರ್ಲಕ್ಷಿಸಿಬಿಡುತ್ತಾರೆ. ಸಂಪೂರ್ಣ ಬಿಟ್ಟುಬಿಡುತ್ತಾರೆ. ತಮ್ಮ ಸುತ್ತಲೂ ವಂದಿಮಾಗದರನ್ನು, ಪಟಾಲಮನ್ನು ಕಟ್ಟಿಕೊಂಡು ತಿರುಗಾಡುತ್ತಿದ್ದವರಿಗೆ ಒಮ್ಮಿಂದೊಮ್ಮೆಲೆ ಆಘಾತವಾಗುತ್ತದೆ. ತಮ್ಮ ಅಹಂಕಾರಕ್ಕೆ ಆಹಾರ ಸಿಗದೇ ಮಾನಸಿಕವಾಗಿ ಕೃಶವಾಗುತ್ತಾರೆ. ಖಿನ್ನತೆಗೆ ಜಾರುತ್ತಾರೆ. ಅಂತಹ ಖಿನ್ನತೆಗಳಿಂದ ಹೊರಬರಲಾಗದೇ ಅನೇಕ ರೀತಿಯ ವ್ಯಸನಗಳಿಗೆ ತುತ್ತಾಗುತ್ತಾರೆ. ಕೆಲವೊಮ್ಮೆ ಆತ್ಮಹತ್ಯೆಗೆ ಶರಣಾಗಲೂಬಹುದು. ಈ ಮಾನಸಿಕ ಸಮಸ್ಯೆ ಬಹಳಷ್ಟು ಜನರಲ್ಲಿರುವುದರಿಂದ ವ್ಯಕ್ತಿಗತವಾಗಿಯೂ ಮತ್ತು ಸಾಮಾಜಿಕವಾಗಿಯೂ ಬಹಳ ಸಂಘರ್ಷಗಳು ಮತ್ತು ಸಮಸ್ಯೆಗಳು ಉಂಟಾಗುತ್ತಿರುತ್ತವೆ. ಇದನ್ನು ಓದಿದಾಗ ನನ್ನಲ್ಲೂ ಇಂತಹ ಸಮಸ್ಯೆಯೊಂದಿದೆ ಎಂದು ಯಾರಿಗಾದರೂ ಅನ್ನಿಸಿದರೆ, ಅದು ಬಹಳ ಒಳ್ಳೆಯ ಸೂಚನೆ. ಏಕೆಂದರೆ, ಯಾವುದೇ ಮಾನಸಿಕ ಸಮಸ್ಯೆಯ ಚಿಕಿತ್ಸೆಯ ಕಾರ್ಯ ಪ್ರಾರಂಭವಾಗುವುದು ನನಗೆ ಈ ಸಮಸ್ಯೆ ಇದೆಯೆಂಬ ಅರಿವಿನಿಂದ. ಅದೇ ಪರಿಹಾರಕ್ಕೆ ಮೊದಲ ಹೆಜ್ಜೆ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News