ಮೋದಿ ಸರಕಾರದ ರಫ್ತು ನೀತಿಗಳು ಹಂಗಾಮಿಯೇ ಅಥವಾ ಹುಚ್ಚಾಟವೇ?

Update: 2022-05-23 05:23 GMT

ಪ್ರಧಾನಿ ನರೇಂದ್ರ ಮೋದಿ ಮೇ ತಿಂಗಳ ಆರಂಭದಲ್ಲಿ ಕೈಗೊಂಡ ಯುರೋಪ್ ಪ್ರವಾಸದ ವೇಳೆ, ಡೆನ್ಮಾರ್ಕ್‌ನಲ್ಲಿ ದೊಡ್ಡ ಹೇಳಿಕೆಯೊಂದನ್ನು ನೀಡಿದರು: ‘‘ಆಹಾರ ಧಾನ್ಯಗಳನ್ನು ಪೂರೈಸುವ ಮೂಲಕ, ಜಗತ್ತನ್ನು ಹಸಿವಿನಿಂದ ರಕ್ಷಿಸಲು ಭಾರತ ಸಿದ್ಧವಾಗಿದೆ’’.

ಅದಾದ ಹತ್ತೇ ದಿನಗಳಲ್ಲಿ, ಗೋಧಿ ರಫ್ತನ್ನು ಭಾರತವು ದಿಢೀರನೆ ನಿಷೇಧಿಸಿತು. ಹಣದುಬ್ಬರ ದರವು ಮೇ 12ರಂದು 8 ವರ್ಷಗಳಲ್ಲೇ ಅತ್ಯಧಿಕವಾಗಿತ್ತು. ಬಹುಷಃ ಅದರಿಂದ ಎಚ್ಚೆತ್ತುಕೊಂಡ ಸರಕಾರವು ಆ ದಿಢೀರ್ ನಿರ್ಧಾರವನ್ನು ಕೈಗೊಂಡಿರ ಬೇಕು. ಗೋಧಿ ರಫ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು 11 ದೇಶಗಳಿಗೆ ವ್ಯಾಪಾರ ನಿಯೋಗವೊಂದನ್ನು ಕಳುಹಿಸಿಕೊಡುವುದಾಗಿ ಆಗಷ್ಟೇ ಸರಕಾರ ಘೋಷಿಸಿತ್ತು.

ಸರಕಾರವು ಗೋಧಿ ರಫ್ತು ನಿಷೇಧದ ದಿಢೀರ್ ನಿರ್ಧಾರವನ್ನು ಘೋಷಿಸುವಾಗ ಸುಮಾರು 5 ಲಕ್ಷ ಟನ್ ಗೋಧಿ ಹಡಗುಗಳಿಗೆ ತುಂಬಲು ವಿವಿಧ ಬಂದರುಗಳಲ್ಲಿ ಸಿದ್ಧವಾಗಿತ್ತು. ರಫ್ತುದಾರರು ಈಗ ಅದನ್ನು ದೇಶಿ ಮರುಕಟ್ಟೆಯಲ್ಲಿ ಮಾರಾಟ ಮಾಡಬೇಕಾಗಿದೆ. ನಿಷೇಧದಿಂದಾಗಿ ಬೆಲೆಯಲ್ಲಿ ಭಾರೀ ವೈಪರೀತ್ಯ ಸಂಭವಿಸಿತು. ದೇಶಿ ಮಾರುಕಟ್ಟೆಯಲ್ಲಿ ಗೋಧಿಯ ಬೆಲೆ ಶೇ. 10-15 ಕುಸಿಯಿತು. ಅದೇ ವೇಳೆ, ಯುರೋಪ್ ಮಾರುಕಟ್ಟೆಗಳಲ್ಲಿ ಗೋಧಿ ಬೆಲೆ ಶೇ.6ದಷ್ಟು ಹೆಚ್ಚಿತು. ಯಾಕೆಂದರೆ ನಿರೀಕ್ಷಿತ ಪೂರೈಕೆ ಬರುವುದಿಲ್ಲ ಎನ್ನುವ ಕಾರಣಕ್ಕಾಗಿ. ಗೋಧಿ ರಫ್ತು ನಿಷೇಧದ ಮೂಲಕ ಅನಾರೋಗ್ಯಕರ ಅಸ್ಥಿರತೆಯನ್ನು ಹುಟ್ಟು ಹಾಕಿರುವುದಕ್ಕಾಗಿ ಜಿ-7 ದೇಶಗಳು ಭಾರತಕ್ಕೆ ತಮ್ಮ ಅತೃಪ್ತಿಯನ್ನು ತಿಳಿಯಪಡಿಸಿದವು.

ಈ ತಿಪ್ಪರಲಾಗದ ನಡುವೆಯೇ, ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ಇನ್ನೊಂದು ಅಧಿಸೂಚನೆ ಹೊರಡಿಸುವ ಮೂಲಕ ಪರಿಸ್ಥಿತಿಯನ್ನು ಆಂಶಿಕವಾಗಿ ಸುಧಾರಿಸಲು ಪ್ರಯತ್ನಿಸಿದರು. ಬಂದರುಗಳಲ್ಲಿ ಈಗಾಗಲೇ ಇರುವ 4.5 ಲಕ್ಷ ಟನ್ ಗೋಧಿಯ ರಫ್ತಿಗೆ ಅವಕಾಶ ನೀಡುವುದಾಗಿ ಅಧಿಸೂಚನೆ ತಿಳಿಸಿತ್ತು. ಗೋಧಿ ಬಂದರು ಪ್ರವೇಶಿಸಿರುವುದನ್ನು ಬಂದರು ಅಧಿಕಾರಿಗಳು ದೃಢಪಡಿಸಿದರೆ ಅಂಥ ಗೋಧಿ ಸಂಗ್ರಹಕ್ಕೆ ರಫ್ತು ನಿಷೇಧ ಅನ್ವಯಿಸುವುದಿಲ್ಲ ಎಂದು ಅದು ಹೇಳಿತು.

ಕೃಷಿ ಉತ್ಪನ್ನಗಳಲ್ಲಿನ ಜಾಗತಿಕ ವ್ಯಾಪಾರವನ್ನು ಬೇಕಾಬಿಟ್ಟಿ ಯಾಗಿ ನಿಭಾಯಿಸಬಹುದು ಹಾಗೂ ರೈತರು ಮತ್ತು ವ್ಯಾಪಾರಿ ಗಳಿಗೆ ಹಾನಿಯಾಗದಂತೆ ನಿರ್ಧಾರಗಳನ್ನು ರಾತ್ರೋರಾತ್ರಿ ಬದಲಿಸಬಹುದು ಎಂಬುದಾಗಿ ಮೋದಿ ಸರಕಾರ ಭಾವಿಸಿದಂತೆ ಕಾಣುತ್ತದೆ. ಮುಕ್ತ ಮಾರುಕಟ್ಟೆಯ ಪ್ರಯೋಜನಗಳನ್ನು ರೈತರಿಗೆ ಒದಗಿಸಲು ತಾನು ಬಯಸಿರುವುದಾಗಿ ಸರಕಾರ ಹೇಳುತ್ತಾ ಬಂದಿದೆ. ವಿವಾದಾಸ್ಪದ ಕೃಷಿ ಕಾನೂನುಗಳನ್ನು ಅದೇ ಉದ್ದೇಶಕ್ಕಾಗಿ ಜಾರಿಗೆ ತರಲಾಗಿತ್ತು.

ವಿಪರ್ಯಾಸವೆಂದರೆ, ರೈತರು ಪ್ರಸಕ್ತ ಗೋಧಿ ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ತುಂಬಾ ಹೆಚ್ಚಿನ ಬೆಲೆಯಲ್ಲಿ ಗೋಧಿಯನ್ನು ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾರೆ. ಕಾನೂನುಗಳಲ್ಲಿ ಅಡಕವಾಗಿದ್ದ ಮುಕ್ತ ಮಾರುಕಟ್ಟೆಯ ನಿಯಮಗಳು ಇಲ್ಲಿ ಪರಿಪೂರ್ಣವಾಗಿ ಬಳಕೆಯಾಗಿವೆ. ಗೋಧಿಯು ಮಂಡಿಗೆ ತಲುಪುವ ಮೊದಲೇ ಹೆಚ್ಚಿನ ಗೋಧಿ ಸಂಗ್ರಹವನ್ನು ರೈತರು ಕನಿಷ್ಠ ಬೆಂಬಲ ಬೆಲೆಗಿಂತ ಅತಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದ್ದರು.

ಒಂದು ವೇಳೆ, ಕೃಷಿ ಕಾನೂನುಗಳು ಅಸ್ತಿತ್ವದಲ್ಲಿದ್ದರೆ, ಗೋಧಿ ರಫ್ತನ್ನು ದಿಢೀರನೆ ನಿಷೇಧಿಸುವ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ರೈತರಿಗೆ ಕಡಿಮೆ ಬೆಲೆ ಸಿಗುವಂತೆ ಮಾಡಲಾಗಿದೆ ಎಂಬ ಆರೋಪವನ್ನು ಮೋದಿ ಸರಕಾರ ಎದುರಿಸುತ್ತಿತ್ತು.

ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಮಾರಾಟ ಎಷ್ಟು ಜೋರಾಗಿ ನಡೆಯುತ್ತಿತ್ತೆಂದರೆ, ಸರಕಾರ ಸಂಗ್ರಹಿಸುವ ಗೋಧಿಯ ಪ್ರಮಾಣ 2021ರಲ್ಲಿದ್ದ 4.4 ಕೋಟಿ ಟನ್‌ನಿಂದ 2022ರಲ್ಲಿ 1.8 ಕೋಟಿ ಟನ್‌ಗೆ ಕುಸಿಯಿತು. ಇದಕ್ಕೆ ಒಂದು ಕಾರಣ ಒಟ್ಟಾರೆ ಗೋಧಿ ಉತ್ಪಾದನೆಯು ಈ ವರ್ಷ ಶೇ.10ದಷ್ಟು ಕಡಿಮೆಯಾಗಿರುವುದು. ಸರಕಾರಿ ಸಂಗ್ರಹ ಮತ್ತು ರಫ್ತುವಿನ ನಡುವೆ ಮೊದಲೇ ಸಮನ್ವಯ ಸಾಧಿಸದೇ ಇರುವ ಮೂಲಕ ಸರಕಾರ ತಪ್ಪು ಮಾಡಿದೆ.

ಯಾವುದೇ ಸುಧಾರಣಾವಾದಿ ಕೃಷಿ ಕಾನೂನುಗಳಲ್ಲಿ ಅಡಕವಾಗಿರುವ ತತ್ವ ಏನೇ ಇದ್ದರೂ, ಕೃಷಿ ಉತ್ಪನ್ನಗಳಿಗೆ ಗರಿಷ್ಠ ಬೇಡಿಕೆ ಇರುವ ವರ್ಷಗಳಲ್ಲಿ ರೈತರಿಗೆ ಒಳ್ಳೆಯ ಬೆಲೆ ಸಿಗುವುದು ಅಪರೂಪ. ಇಲ್ಲಿ ಬೇಡಿಕೆ ಮತ್ತು ಪೂರೈಕೆಯ ನಿಯಮಗಳು ಅನ್ವಯಿಸುವುದಿಲ್ಲ.ಆಹಾರ ಬೆಲೆಯೇರಿಕೆಯನ್ನು ನಿಯಂತ್ರಿಸುವ ನೆವದಲ್ಲಿ ಕೃಷಿ ಉತ್ಪನ್ನಗಳ ಉತ್ಪಾದಕರನ್ನು ವಂಚಿಸಲಾಗುತ್ತದೆ. ಬೆಲೆಯ ನಿಯಂತ್ರಣವು ಯಾವತ್ತೂ ರೈತರ ವಿರುದ್ಧ ಮತ್ತು ಗ್ರಾಹಕರ ಪರವಾಗಿರುತ್ತದೆ. ಆದರೆ ಇದು ಕೈಗಾರಿಕಾ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ.

ಗೋಧಿ ರಫ್ತು ಘಟನೆಯಿಂದ ಎಚ್ಚೆತ್ತುಕೊಂಡಂತೆ, ಸರಕಾರವು ಮೇ 18ರಂದು ವಿಶೇಷ ಸಭೆಯೊಂದನ್ನು ನಡೆಸಿ, ತಮ್ಮ ಮಾಮೂಲಿ ರಫ್ತಿನ ಶೇ.25-30 ದಷ್ಟನ್ನು ತಡೆಹಿಡಿಯುವಂತೆ ಹತ್ತಿ ಉತ್ಪಾದಕರಿಗೆ ಸೂಚಿಸಿತು. ಹೀಗೆ ಉಳಿಸಲಾದ ಹತ್ತಿಯನ್ನು ದೇಶಿ ವೌಲ್ಯಾಧಾರಿತ ಉತ್ಪನ್ನಗಳಲ್ಲಿ ಬಳಸಲು ನೀಡಲಾಗುತ್ತದೆ. ಅಗಾಧ ಜಾಗತಿಕ ಬೇಡಿಕೆಯ ಹಿನ್ನೆಲೆಯಲ್ಲಿ ಹತ್ತಿ ಬೆಲೆಯು 11 ವರ್ಷಗಳಲ್ಲೇ ಅಧಿಕವಾಗಿರುವುದರಿಂದ ಅದು ಈ ಕ್ರಮ ತೆಗೆದುಕೊಂಡಿದೆ. ಒಂದು ಕ್ವಿಂಟಾಲ್ ಕಚ್ಚಾ ಹತ್ತಿಗೆ ಮುಕ್ತ ಮಾರುಕಟ್ಟೆಯಲ್ಲಿ 12,000 ರೂ. ಇದೆ. ಇದು ಕನಿಷ್ಠ ಬೆಂಬಲ ಬೆಲೆಯ ದುಪ್ಪಟ್ಟಿಗಿಂತಲೂ ಜಾಸ್ತಿ. ಜಾಗತಿಕ ಹತ್ತಿ ಉತ್ಪಾದನೆಯ 24 ಶೇ.ಭಾರತದಲ್ಲಿ ಉತ್ಪಾದನೆಯಾಗುತ್ತದೆ ಹಾಗೂ ಜಾಗತಿಕ ರಫ್ತಿನ 10 ಶೇ. ಭಾರತದಿಂದ ರಫ್ತಾಗುತ್ತದೆ. ಕಚ್ಚಾ ಹತ್ತಿ ಉತ್ಪಾದಕರು ತಮ್ಮ ರಫ್ತುಗಳನ್ನು ಹೆಚ್ಚಿಸಲು ಪ್ರಯತ್ನಿಸಿದರೆ ಅವರ ವಿರುದ್ಧ ನಿರ್ಬಂಧಗಳನ್ನು ವಿಧಿಸಲಾಗುವುದು ಎಂಬ ಪರೋಕ್ಷ ಎಚ್ಚರಿಕೆಯನ್ನು ಸರಕಾರ ಈ ಮೂಲಕ ನೀಡಿದೆ.

ಅದೇ ರೀತಿ, ಸಕ್ಕರೆಗೂ ಜಾಗತಿಕ ಮಟ್ಟದಲ್ಲಿ ಉತ್ತಮ ಬೆಲೆಯಿದೆ ಹಾಗೂ ಭಾರತದಲ್ಲಿ ಕಬ್ಬು ಬೆಳೆ ಉತ್ತಮವಾಗಿದೆ. ಭಾರತವು ಜಗತ್ತಿನ ಎರಡನೇ ಅತಿ ದೊಡ್ಡ ಸಕ್ಕರೆ ಉತ್ಪಾದಕ ದೇಶವಾಗಿದೆ ಹಾಗೂ ಜಾಗತಿಕ ಉತ್ಪಾದನೆಯ ಸುಮಾರು 20 ಶೇ. ಭಾರತದಲ್ಲಿ ಉತ್ಪಾದನೆಯಾಗುತ್ತದೆ.

2022ರಲ್ಲಿ ಭಾರತ 3.3 ಕೋಟಿ ಟನ್‌ಗೂ ಅಧಿಕ ಸಕ್ಕರೆ ಉತ್ಪಾದಿಸಲಿದೆ ಎಂಬುದಾಗಿ ಅಂದಾಜಿಸಲಾಗಿದೆ. ಈ ಕ್ಷೇತ್ರಕ್ಕೆ ಸುಲಭ ಬ್ಯಾಂಕ್ ಸಾಲ ನೀಡುವ ಸಲುವಾಗಿ ಹಣಕಾಸು ಸಚಿವರು ಈ ವಾರದ ಆರಂಭದಲ್ಲಿ ಸಭೆಯೊಂದನ್ನು ನಡೆಸಿದರು. ಆದರೆ ಹಣದುಬ್ಬರ ದರವು ನಿಯಂತ್ರಣಕ್ಕೆ ಬಾರದಿದ್ದರೆ ಮುಂಬರುವ ಹಬ್ಬದ ಋತುವಿಗೆ ಪೂರ್ವಭಾವಿಯಾಗಿ ಸಕ್ಕರೆ ರಫ್ತಿನ ಮೇಲೆ ಕೇಂದ್ರ ಸರಕಾರ ನಿರ್ಬಂಧ ವಿಧಿಸಿದರೂ ಅಚ್ಚರಿಯಿಲ್ಲ.

ಕೃಷಿ ರಫ್ತು ನೀತಿ ಹಾಗೂ ದೇಶಿ ಅವಶ್ಯಕತೆಗಳನ್ನು ಗಮನದಲ್ಲಿ ಟ್ಟುಕೊಂಡು ಅದರ (ಕೃಷಿ ರಫ್ತು ನೀತಿಯ) ಅಗತ್ಯಗಳನ್ನು ನಿಭಾಯಿಸುವುದು ಹೆಚ್ಚೆಂದರೆ ಹಂಗಾಮಿ ಕ್ರಮವಾಗಬಹುದು ಅಥವಾ ಹುಚ್ಚಾಟದಂತೆ ಕಾಣಬಹುದು. ಮತ್ತು ಇದು ನೆಹರೂ ಮಾಡಿದ ತಪ್ಪಲ್ಲ!

ಕೃಪೆ: thewire.in

Writer - ಎಂ. ಕೆ. ವೇಣು

contributor

Editor - ಎಂ. ಕೆ. ವೇಣು

contributor

Similar News