"ಮದ್ರಸಾ ಇರುವವರೆಗೂ ಮಕ್ಕಳು ಡಾಕ್ಟರ್‌, ಇಂಜಿನಿಯರ್‌ ಆಗುವ ಕುರಿತು ಚಿಂತಿಸುವುದಿಲ್ಲ": ಅಸ್ಸಾಂ ಸಿಎಂ ವಿವಾದ

Update: 2022-05-23 07:56 GMT

ಗುವಾಹಟಿ: 'ಮದರಸಾ' ಎಂಬ ಪದವು ಅಸ್ತಿತ್ವದಲ್ಲಿಲ್ಲ ಎಂದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಎಲ್ಲರಿಗೂ ಶಾಲೆಗಳಲ್ಲಿ "ಸಾಮಾನ್ಯ ಶಿಕ್ಷಣ" ವನ್ನು ನೀಡಬೇಕು ಎಂದಿದ್ದಾರೆ. ಹಲವಾರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಹೈದರಾಬಾದ್ ಮೌಲಾನಾ ಆಝಾದ್ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿಗಳಿಗೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಮದರಸಾಗಳನ್ನು ವಿಸರ್ಜಿಸಿ ಅವುಗಳನ್ನು ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸುವ ಅಸ್ಸಾಂ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದರು.

“ಈ ಪದ (ಮದ್ರಸಾ) ಇರುವವರೆಗೂ, ಮಕ್ಕಳು ವೈದ್ಯರು ಮತ್ತು ಎಂಜಿನಿಯರ್ ಆಗುವ ಬಗ್ಗೆ ಯೋಚಿಸಲು ಸಾಧ್ಯವಾಗುವುದಿಲ್ಲ. ಮದರಸಾಗಳಲ್ಲಿ ಓದಿದರೆ ಡಾಕ್ಟರ್, ಇಂಜಿನಿಯರ್ ಆಗುವುದಿಲ್ಲ ಎಂದು ಮಕ್ಕಳಿಗೆ ಹೇಳಿದರೆ ಅವರೇ ಹೋಗಲು ನಿರಾಕರಿಸುತ್ತಾರೆ,” ಎಂದು ನೆರೆದವರ ಕರತಾಡನದ ನಡುವೆ ಹೇಳಿದರು.

"ಕುರಾನ್ ಅನ್ನು ನಿಮ್ಮ ಮಕ್ಕಳಿಗೆ ಕಲಿಸಿ, ಆದರೆ ಮನೆಯಲ್ಲಿ" ಎಂದು ಹೇಳಿದ ಮುಖ್ಯಮಂತ್ರಿ, "ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸಿ" ಮಕ್ಕಳನ್ನು ಮದರಸಾಗಳಿಗೆ ಸೇರಿಸಲಾಗುತ್ತದೆ ಎಂದು ಹೇಳಿದರು.

“ವಿಜ್ಞಾನ, ಗಣಿತ, ಜೀವಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರದ ಮೇಲೆ ಒತ್ತಡ ಇರಬೇಕು. ಶಾಲೆಗಳಲ್ಲಿ ಸಾಮಾನ್ಯ ಶಿಕ್ಷಣ ಇರಬೇಕು. ಧಾರ್ಮಿಕ ಪಠ್ಯಗಳನ್ನು ಮನೆಯಲ್ಲಿಯೇ ಕಲಿಸಬಹುದು. ಆದರೆ ಶಾಲೆಗಳಲ್ಲಿ, ಅವರು ವೈದ್ಯರು, ಎಂಜಿನಿಯರ್‌ಗಳು, ಪ್ರಾಧ್ಯಾಪಕರು ಮತ್ತು ವಿಜ್ಞಾನಿಗಳಾಗಲು ಅಧ್ಯಯನ ಮಾಡಬೇಕು,” ಎಂದು ಹೇಳಿದ್ದಾರೆ.

"ಮದರಸಾಗಳಲ್ಲಿನ ವಿದ್ಯಾರ್ಥಿಗಳು ಅತ್ಯಂತ ಪ್ರತಿಭಾವಂತರು - ಅವರು ಕುರಾನ್‌ನ ಪ್ರತಿಯೊಂದು ಪದವನ್ನು ಹೃದಯದಿಂದ ಕಂಠಪಾಠ ಮಾಡುತ್ತಾರೆ ಎಂದು ಮಾಜಿ ಕುಲಪತಿ ಸೂಚಿಸಿದಾಗ, "ಎಲ್ಲಾ ಮುಸ್ಲಿಮರು ಹಿಂದೂಗಳು," ಶರ್ಮಾ ಕೂಡಲೇ ಹೇಳಿದರು. "ಯಾರೂ ಮುಸ್ಲಿಮರಾಗಿ ಹುಟ್ಟಿಲ್ಲ (ಭಾರತದಲ್ಲಿ). ಭಾರತದಲ್ಲಿ ಎಲ್ಲರೂ ಹಿಂದೂಗಳೇ ಆಗಿದ್ದರು. ಆದ್ದರಿಂದ, ಒಂದು ಮುಸ್ಲಿಂ ಮಗು ಅತ್ಯಂತ ಪ್ರತಿಭಾವಂತನಾಗಿದ್ದರೆ, ನಾನು ಅವನ ಹಿಂದೂ ಗತಕಾಲಕ್ಕೆ ಭಾಗಶಃ ಮನ್ನಣೆ ನೀಡುತ್ತೇನೆ" ಎಂದು ಹೇಳಿದ್ದಾರೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News