ಶಿಕ್ಷಣ ತಜ್ಞರು, ಸಾಹಿತಿಗಳ ಸಮಾಲೋಚನಾ ಸಭೆ: ಪಠ್ಯಪುಸ್ತಕ ಪುನರ್ ಪರಿಷ್ಕರಣ ಸಮಿತಿಯನ್ನು ವಿಸರ್ಜಿಸುವಂತೆ ಪಟ್ಟು

Update: 2022-05-23 13:10 GMT

ಬೆಂಗಳೂರು, ಮೇ 23: ವಿವಾದಿತ ಅಂಶ, ವ್ಯಕ್ತಿಗಳ ಕುರಿತು ಮಕ್ಕಳ ತಲೆಯಲ್ಲಿ ತುಂಬಲು ಹೊರಟಿರುವ ಪಠ್ಯಪುಸ್ತಕ ಪುನರ್ ಪರಿಷ್ಕರಣ ಸಮಿತಿಯನ್ನು ರಾಜ್ಯ ಸರಕಾರ ಈ ಕೂಡಲೇ ವಿಸರ್ಜನೆ ಮಾಡಬೇಕು ಎಂದು ಚಿಂತಕರು, ಶಿಕ್ಷಣ ತಜ್ಞರು, ಸಾಹಿತಿಗಳು ಆಗ್ರಹಿಸಿದರು.

ಸೋಮವಾರ ನಗರದ ಕೆಆರ್ ವೃತ್ತದ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ವಿದ್ಯಾರ್ಥಿ ಸಂಘಟನೆಗಳು, ಜನಪರ ಸಂಘಟನೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯು ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥನನ್ನು ವಜಾಗೊಳಿಸುವಂತೆ ಒತ್ತಾಯ ಮಾಡಿದರು.

ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸಿ, ಮನುಧರ್ಮ ಸ್ಥಾಪಿಸುವ ಉದ್ದೇಶ ಹೊಂದಿರುವ ಹಲವರು ಈ ಪಠ್ಯಗಳನ್ನು ಬದಲಾವಣೆ ಮಾಡಲು ಹೊರಟಿದ್ದಾರೆ. ಹೀಗಾಗಿಯೇ, ಯಾವುದೇ ಅನುಭವ ಇಲ್ಲದ ರೋಹಿತ್ ಚಕ್ರತೀರ್ಥನನ್ನು ಅಧ್ಯಕ್ಷ ಸ್ಥಾನದಲ್ಲಿಟ್ಟು, ಅವರ ವಿಚಾರಧಾರೆಯನ್ನು ಒತ್ತಾಯಪೂರ್ವಕವಾಗಿ ತುಂಬಲು ಹೊರಟಿದ್ದಾರೆ ಎಂದು ಟೀಕಿಸಿದರು.

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ಶಿಕ್ಷಣ, ಹೋರಾಟ ಪಡೆಯಬೇಕೆಂದು ಕರೆ ನೀಡಿದರು. ಆದರೆ, ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ ಪಡೆದವರೇ ಹೆಚ್ಚಾಗಿ ಮೂಲಭೂತದ ಕಡೆ ಹೊರಟ್ಟಿದ್ದಾರೆ. ಅದರಲ್ಲೂ ಹಿಂದುಳಿದ ವರ್ಗ ಅವರಿಗೆ ಬೆಂಬಲ ನೀಡುತ್ತಿರುವುದು ದುರಂತವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹ ವಿವಾದಿತ ಪಠ್ಯಪುಸ್ತಕವೂ ಮಕ್ಕಳ ಕೈಸೇರುವುದನ್ನು ನಾವು ತಡೆಯಬೇಕು ಎಂದ ಅವರು, ಈಗಾಗಲೇ ಪೊಲೀಸ್, ನ್ಯಾಯಾಂಗ ಸೇರಿದಂತೆ ಎಲ್ಲೆಡೆ ಅವರ ವಕ್ತಾರರು ಇದ್ದಾರೆ. ಆದರೂ, ನಾವು ಒಗ್ಗೂಡಿ ಇದರ ವಿರುದ್ಧ ಧ್ವನಿಗೂಡಿಸಬೇಕು. ಅದರಲ್ಲೂ ಹೆಚ್ಚಾಗಿ ಸಂಘಟನೆಗಳ ಮೇಲಿ ಹೆಚ್ಚಿನ ಜವಾಬ್ದಾರಿ ಇದ್ದು, ಅವರು ಹುನ್ನಾರಗಳ ವಿರುದ್ಧ ಪ್ರತಿಭಟಿಸಲಿ ಎಂದು ಸಿದ್ದರಾಮಯ್ಯ ನುಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಗಳು ಬದಲಾಗುವುದು ಸಹಜ ಅವುಗಳ ಸೈದ್ಧಾಂತಿಕ ರಾಜಕೀಯ ವಿಚಾರಗಳಿಗಾಗಿ ಮಕ್ಕಳು ಓದುವ ಪಠ್ಯ ಪುಸ್ತಕಗಳನ್ನು ರಾಜಕೀಯ ಪಕ್ಷಗಳ ಪ್ರಣಾಳಿಕೆಯಂತೆ ಬದಲಾಯಿಸುವುದು ಅಪಾಯಕಾರಿ ಬೆಳವಣಿಗೆ ಎಂದರು.

ಶಿಕ್ಷಣ ತಜ್ಞ ಶ್ರೀಪಾದ ಭಟ್ ಮಾತನಾಡಿ, ಇಂತಹ ವಿವಾದಿತ ಪಠ್ಯಗಳನ್ನು ಹೋರಾಟಗಾರರು, ಜನಪ್ರತಿನಿಧಿಗಳು ಮಾತ್ರವಲ್ಲದೆ, ಶಿಕ್ಷಕರು ವಿರೋಧಿಸಬೇಕು. ಅದರ ಜೊತೆಗೆ ವಿದ್ಯಾರ್ಥಿಗಳ ಪೋಷಕರು ಧ್ವನಿಗೂಡಿಸಬೇಕು ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪಾಠವನ್ನು 10ನೆ ತರಗತಿ ಪಠ್ಯದಿಂದ ಕೈ ಬಿಟ್ಟು ಸ್ವಾತಂತ್ರ್ಯ ಚಳುವಳಿಯಿಂದ ದೂರವಿದ್ದ ಆರೆಸ್ಸೆಸ್ ಸಂಸ್ಥಾಪಕ ಕೆ.ಬಿ.ಹೆಡ್ಗೇವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದನ್ನು ದೇಶ ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿ ಮಾಡಿದ ದೊಡ್ಡ ಅವಮಾನವಾಗಿದೆ ಎಂದು ಹೇಳಿದರು.

ಹಿರಿಯ ಸಾಹಿತಿ ಕೆ.ಶರೀಫಾ ಮಾತನಾಡಿ, ಈ ಪಠ್ಯದಲ್ಲಿ ಹಲವಾರು ಮಹಿಳಾ ವಿರೋಧಿ ವಿಚಾರಗಳಿವೆ. ಇವು ಮನುವಾದಿ ಚಿಂತನೆಗಳನ್ನು ಪೋಷಿಸುತ್ತವೆ ಎಂದು ತಿಳಿಸಿದರು

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಸಂವಿಧಾನ ವಿರೋಧಿ ಶಿಕ್ಷಣ ನೀತಿಗಳ ವಿರುದ್ಧ ಐಕ್ಯ ಹೋರಾಟ ನಡೆಸಬೇಕಾಗಿದೆ ಎಂದರು.

ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ ಮಾತನಾಡಿ, ಇಂತಹ ವಿವಾದಿತ ಸಮಿತಿಯನ್ನು ರಾಜ್ಯ ಸರಕಾರ ಈ ಕೂಡಲೇ ವಿಸರ್ಜನೆ ಮಾಡಬೇಕು. ಅಷ್ಟೇ ಅಲ್ಲದೆ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರಾಜೀನಾಮೆ ನೀಡಬೇಕು ಎಂದು ಒತ್ತಾಯ ಮಾಡಿದರು.

ಸಭೆಯಲ್ಲಿ ಚಿಂತಕ, ಬರಹಗಾರ ಶಿವಸುಂದರ್, ಇತಿಹಾಸ ತಜ್ಞ ಎನ್.ನರಸಿಂಹಯ್ಯ, ಎಸ್‍ಎಫ್‍ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ, ಕೆವಿಎಸ್ ರಾಜ್ಯ ಸಂಚಾಲಕ ಸರೋವರ ಬೆಂಕಿಕೆರೆ, ದಲಿತ್ ವಿಧ್ಯಾರ್ಥಿ ಪರಿಷತ್ ಶ್ರೀನಾಥ್ ಪೂಜಾರಿ, ನ್ಯಾಯವಾದಿ ಅನಂತ್‍ನಾಯ್ಕ್, ಜೆಎಂಎಸ್ ರಾಜ್ಯಾಧ್ಯಕ್ಷೆ ದೇವಿ, ರಾಜ್ಯ ಕಾರ್ಯದರ್ಶಿ ಗೌರಮ್ಮ, ಹೋರಾಟಗಾರ ರಾಜಶೇಖರ್‍ಮೂರ್ತಿ ಸೇರಿದಂತೆ ಪ್ರಮುಖರಿದ್ದರು.

► ಸಭೆಯಲ್ಲಿ ಕೈಗೊಂಡ ನಿರ್ಣಯಗಳು

* ಸಮಿತಿಯಿಂದ ರೋಹಿತ್ ಚಕ್ರತೀರ್ಥನನ್ನು ಹೊರಗಿಡಬೇಕು.
* ವಿವಾದಿತ ಸಮಿತಿಯನ್ನು ಸರಕಾರ ವಿಸರ್ಜಿಸಬೇಕು.
* ಮೇ 31ಕ್ಕೆ ಬೃಹತ್ ಪ್ರತಿಭಟನೆ ಕೈಗೊಳ್ಳಲು ತೀರ್ಮಾನ
* ವಿವಾದಿತ ವಿಷಯಗಳ ಕುರಿತು ಜಾಗೃತಿಗಾಗಿ 1 ಲಕ್ಷ ಕಿರುಹೊತ್ತಿಗೆ ಹೊರತಂದು ಹಂಚಿಕೆ.

‘ಸಾಮಾಜಿಕ ನ್ಯಾಯ ಇಲ್ಲದ ಸಮಿತಿ’

ರಾಜ್ಯ ಬಿಜೆಪಿಯ ಸರಕಾರ ರಚಿಸಿರುವ ಪಠ್ಯಪುಸ್ತಕ ಪುನರ್ ಪರಿಷ್ಕರಣ ಸಮಿತಿ ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವಿಲ್ಲ. ಈ ಸಮಿತಿಯ ಏಳು ಜನರಲ್ಲಿ ಆರು ಜನ ಬ್ರಾಹ್ಮಣರು ಇರುವುದು ಹಾಗೂ ಹೊಸದಾಗಿ ಸೇರಿಸಿರುವ ಹತ್ತು ಪಠ್ಯಗಳಲ್ಲಿ ಒಂಬತ್ತು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಆಗಿರುವುದು ಸಾಮಾಜಿಕ ನ್ಯಾಯ ಸೂತ್ರಕ್ಕೆ ದೊಡ್ಡ ಅಪಾಯಕಾರಿ ಎಂದು ಎಸ್.ಜಿ.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News