ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳರಿಗೆ ದಿವಾಣ ಪ್ರಶಸ್ತಿ ಪ್ರದಾನ
ಮಂಗಳೂರು, ಮೇ 23: ಹಿರಿಯ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ ನಗರ ಹೊರವಲಯದ ಶಕ್ತಿನಗರ ಸರಕಾರಿ ಶಾಲಾ ವಠಾರದಲ್ಲಿ ಖ್ಯಾತ ಚೆಂಡೆ-ಮದ್ದಳೆವಾದಕ ದಿವಾಣ ಭೀಮಭಟ್ಟರ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭ ದಿವಾಣ ಭೀಮಭಟ್ಟರ ಸಂಸ್ಮರಣೆ ನಡೆಯಿತು.
ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಜನ ಸಾಮಾನ್ಯರಲ್ಲೂ ಪುರಾಣ ಕಥನಗಳ ಜ್ಞಾನ ಸಂಪನ್ನಗೊಳ್ಳುವಲ್ಲಿ ಯಕ್ಷಗಾನ ಕಲೆಯ ಪಾತ್ರ ಮಹತ್ತರವಾದುದು. ದೊಡ್ಡಾಟ, ಸಣ್ಣಾಟ ಸಹಿತ ಯಕ್ಷಗಾನದ ವಿವಿಧ ಪ್ರಕಾರಗಳಿದ್ದರೂ ಕಾಸರಗೋಡು ಸಹಿತ ಅವಿಭಜಿತ ಜಿಲ್ಲೆಗಳಲ್ಲಿ ಶ್ರೀಮಂತ ಕಲೆಯಾಗಿ ಬೆಳೆದಿರುವ ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆ ಕೂಟಗಳ ಮೂಲಕ ನೂರಾರು ಮಂದಿ ಕಲಾವಿದರು ತಮ್ಮ ಅಸ್ತಿತ್ವವನ್ನು ಕಂಡುಕೊಂಡಿರುವರು. ಈ ಪರಿಪೂರ್ಣ ಕಲೆ ಕೇವಲ ಜನಾಶ್ರಯದಿಂದಲೇ ಬೆಳೆದು ನಿಂತಿದೆ ಎಂದಿದೆ.
’ಅನನ್ಯ ಫೀಡ್ಸ್’ ಪಶು ಆಹಾರ ತಯಾರಿಕಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್ ವಹಿಸಿದ್ದರು.
ಯಕ್ಷಗಾನ ದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ದಿವಾಣ ಭಟ್ಟರ ಸಂಸ್ಮರಣೆಗೈದರು. ಯಕ್ಷಗಾನ ಕಲಾವಿದ ಪೆರ್ಲ ಜಗನ್ನಾಥ ಶೆಟ್ಟಿಗೆ ‘ದಿವಾಣ ಕಲಾಗೌರವ’ ನೀಡಿ ಗೌರವಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ಟ ಅಭಿನಂದನಾ ಭಾಷಣಗೈದರು.
ಯಕ್ಷಗಾನ ಪ್ರಸಂಗಕರ್ತ ಪೊಳಲಿ ನಿತ್ಯಾನಂದ ಕಾರಂತ, ಕಾರ್ಯಕ್ರಮದ ಸಂಘಟಕ ದಿವಾಣ ಗೋವಿಂದ ಭಟ್ಟ, ಅನಿತಾ ಗೋವಿಂದ ಭಟ್ಟ ಹಾಗೂ ಅನನ್ಯ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.