ಬೆಸ್ಕಾಂ ಗ್ರಾಹಕರಿಗೆ ವಾಟ್ಸ್ಆ್ಯಪ್ ಸಹಾಯವಾಣಿ: ಇಂಧನ ಸಚಿವ ಸುನಿಲ್ ಕುಮಾರ್

Update: 2022-05-24 08:36 GMT

ಬೆಂಗಳೂರು : ವಿದ್ಯುತ್ ವ್ಯತ್ಯಯ ಹಾಗು ವಿದ್ಯುತ್ ಸಂಬಂಧಿತ ಸಾರ್ವಜನಿಕರ ಕುಂದು ಕೊರತೆಗಳನ್ನು ಶೀಘ್ರ ವಾಗಿ ಬಗೆಹರಿಸಲು ಬೆಸ್ಕಾಂನ 8 ಜಿಲ್ಲೆಗಳ 11  ‘ವಾಟ್ಸ್ ಆ್ಯಪ್  ಸಹಾಯವಾಣಿ’ ಸಂಖ್ಯೆಗಳನ್ನು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಮಂಗಳವಾರ ಬಿಡುಗಡೆ ಮಾಡಿದರು.

ಮಳೆಗಾಲ ಹಾಗು ತುರ್ತು ಸಂದರ್ಭಗಳಲ್ಲಿ ಬೆಸ್ಕಾಂ ನ ಹಾಲಿ ಸಹಾಯವಾಣಿ ಸಂಖ್ಯೆ 1912 ಗೆ ಸಾವಿರಾರು ಕರೆಗಳು ಬರುತ್ತಿದ್ದು, ನಿರಂತರ ಕಾರ್ಯನಿರ್ವಹಣೆಯಲ್ಲಿರುತ್ತದೆ. ಈ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಸಹಾಯವಾಣಿ ಕರೆ ಲಭ್ಯವಾಗದೆಯಿರುವ ಹಿನ್ನೆಲೆಯಲ್ಲಿ ವಾಟ್ಸ್ಆ್ಯಪ್ ಸಹಾಯವಾಣಿ ಸಂಖ್ಯೆಗಳನ್ನು ಪ್ರತಿ ಜಿಲ್ಲೆಗೆ  ಒಂದರಂತೆ ನೀಡಲು ಸಚಿವರು ಬೆಸ್ಕಾಂ ಗೆ  ಸೂಚಿಸಿದ್ದರು.

8 ಜಿಲ್ಲೆಗಳಿಗೆ 11 ವಾಟ್ಸ್ ಆ್ಯಪ್ ಸಹಾಯವಾಣಿ ಬಿಡುಗಡೆ ಮಾಡಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಮೆಸ್ಕಾಂ, ಹೆಸ್ಕಾಂ, ಜಿಸ್ಕಾಂ ಮತ್ತು ಚೆಸ್ಕಾಂ ವ್ಯಾಪ್ತಿಯಲ್ಲಿ ವಾಟ್ಸ್ ಆ್ಯಪ್ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಮಳೆಗಾಲ ಹಾಗು ತುರ್ತು ಸಂದರ್ಭಗಳಲ್ಲಿ ಹಾಲಿ ಸಹಾಯವಾಣಿ ಸಂಖ್ಯೆ 1912ಗೆ ಅತೀ ಹೆಚ್ಚು ಕರೆಗಳು ಬರುತ್ತಿರುವುದರಿಂದ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಪರಿಹಾರ ವಿಳಂಬ ವಾಗುತ್ತಿದ್ದು, ವಾಟ್ಸ್ ಆ್ಯಪ್ ಸಹಾಯವಾಣಿ ಬಿಡುಗಡೆಯಿಂದ ಗ್ರಾಹಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯುವುದು ಎಂದು ಸಚಿವರು ತಿಳಿಸಿದರು. 

ಜತೆಗೆ 1912 ಗೆ ಬರುವ ಕರೆಗಳ ಒತ್ತಡ ಕೂಡ ವಾಟ್ಸ್ ಆ್ಯಪ್ ಸಹಾಯವಾಣಿ ಯಿಂದ ಕಡಿಮೆ ಆಗುತ್ತದೆ. ಗ್ರಾಹಕರು ವಾಟ್ಸ್ ಆ್ಯಪ್ ಸಂಧೇಶ ಕಳುಹಿಸುವ ಮೂಲಕ ಎಲ್ಲ ರೀತಿಯ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು ಎಂದು ಸಚಿವರು ಮಾಹಿತಿ ನೀಡಿದರು. 

ಒಟ್ಟು 11 ವಾಟ್ಸ್ಆ್ಯಪ್ ಸಹಾಯವಾಣಿ ಸಂಖ್ಯೆಗಳನ್ನು ಬೆಸ್ಕಾಂ ಒದಗಿಸಿದ್ದು, ಬೆಸ್ಕಾಂನ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ, ಉತ್ತರ, ಪೂರ್ವ ಹಾಗು ಪಶ್ಚಿಮ ವೃತ್ತಗಳಿಗೆ 4 ವಾಟ್ಸ್ ಆ್ಯಪ್ ಸಂಖ್ಯೆಗಳನ್ನು ನೀಡಲಾಗಿದೆ. 

ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ , ಚಿಕ್ಕಬಳ್ಳಾಪುರ ಹಾಗು ಕೋಲಾರ ಜಿಲ್ಲೆಯ ಬೆಸ್ಕಾಂ ವೃತ್ತಗಳಿಗೆ ತಲಾ ಒಂದು ವಾಟ್ಸ್ ಆ್ಯಪ್ ಸಂಖ್ಯೆಗಳನ್ನು ಒದಗಿಸಲಾಗಿದೆ. 

ವಾಟ್ಸ್ ಆ್ಯಪ್ ಸಹಾಯವಾಣಿ ವಿವರ 
ಬೆಂಗಳೂರು ನಗರ ಜಿಲ್ಲೆ :

ದಕ್ಷಿಣ ವೃತ್ತ:  8277884011, ಪಶ್ಚಿಮ ವೃತ್ತ: 8277884012, ಪೂರ್ವ ವೃತ್ತ: 8277884013, ಉತ್ತರ ವೃತ್ತ: 8277884014. 

ಕೋಲಾರ ಜಿಲ್ಲೆ : 8277884015, ಚಿಕ್ಕಬಳ್ಳಾಪುರ ಜಿಲ್ಲೆ: 8277884016, ಬೆಂಗಳೂರು ಗ್ರಾಮಾಂತರ ಜಿಲ್ಲೆ: 8277884017, ರಾಮನಗರ ಜಿಲ್ಲೆ : 8277884018, ತುಮಕೂರು ಜಿಲ್ಲೆ : 8277884019, ಚಿತ್ರದುರ್ಗ ಜಿಲ್ಲೆ : 8277884020, ದಾವಣಗರೆ ಜಿಲ್ಲೆ: 8277884021

ವಿದ್ಯುತ್ ವ್ಯತ್ಯಯದ ಕುರಿತು ಗ್ರಾಹಕರು ವಾಟ್ಸ್ ಆ್ಯಪ್ ಸಂದೇಶಗಳನ್ನು ಕಳುಹಿಸಿದ ಕೂಡಲೇ ಸಹಾಯವಾಣಿ ಕೇಂದ್ರದ ಗ್ರಾಹಕ ಸೇವಾ ಪ್ರತಿನಿಧಿಗಳು ದೂರುಗಳನ್ನು ಸಂಬಂಧಿಸಿದ ಬೆಸ್ಕಾಂ ಉಪ ವಿಭಾಗಗಳಿಗೆ ರವಾನಿಸಿ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ. 

ಸಹಾಯವಾಣಿಗೆ ನೋಡಲ್ ಅಧಿಕಾರಿಗಳ ನಿಯೋಜನೆ: ಇತ್ತೀಚೆಗೆ ಸುರಿದ ಭಾರೀ ಗಾಳಿ- ಮಳೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ, ಬೆಸ್ಕಾಂ 1912 ಸಹಾಯವಾಣಿ ಕೇಂದ್ರವನ್ನು ಇನ್ನಷ್ಟು ಬಲಪಡಿಸಲು ನಿರ್ಧರಿಸಲಾಗಿದ್ದು, ಸಹಾಯವಾಣಿ ಕೇಂದ್ರದಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಲಾಗಿದೆ. 

ಸಹಾಯಕ ಕಾರ್ಯನಿರ್ವಾಹಕ ಇಂಜಿನಿರ್ ಗಳನ್ನು ಮೂರು ಪಾಳಿಗಳಲ್ಲಿ ಸಹಾಯವಾಣಿ ಕೇಂದ್ರದಲ್ಲಿ ನಿಯೋಜಿಸಲಾಗಿದೆ. ಇದರಿಂದ ಸಹಾಯವಾಣಿ ಮತ್ತು ಬೆಸ್ಕಾಂ ವಿಭಾಗ ಹಾಗು ಉಪ ವಿಭಾಗಳ ನಡುವೆ ಸಮನ್ವಯ ಸಾಧಿಸಲು ಅನುಕೂಲವಾಗುತ್ತದೆ ಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ಮಳೆಗಾಲ ಮತ್ತು ತುರ್ತು ಸಂದರ್ಭಗಳಲ್ಲಿ ನೋಡಲ್ ಅಧಿಕಾರಿಗಳು ಸಹಾಯವಾಣಿ ಕೇಂದ್ರಕ್ಕೆ ಬರುವ ದೂರುಗಳನ್ನು ಸಂಬಂಧಿಸಿದ ಬೆಸ್ಕಾಂ ಉಪ ವಿಭಾಗ ಕೇಂದ್ರಗಳಿಗೆ ಶೀಘ್ರದಲ್ಲಿ ಕಳುಹಿಸಿ ಪರಿಹಾರ ಸೂಚಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News